ಬೀದಿ ನಾಯಿಗಳ ಹಾವಳಿ ಪರಿಹಾರ ನೀಡಲು ಒತ್ತಾಯಿಸಿ ಪಾಲಿಕೆಯ ಮುಂದೆ ಧರಣಿ
ಕಲಬುರಗಿ ಜು.30: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಹಾನಗರ ಪಾಲಿಕೆಯು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಮಹಾನಗರ ಪಾಲಿಕೆಯ ಸದಸ್ಯ ಸಾಜಿದ್ ಅಲಿ ಕಲ್ಯಾಣಿ ಅವರು ಮಂಗಳವಾರ ಮಹಾಪೌರರ ಮತ್ತು ಉಪ ಮಹಾಪೌರರ ಚುನಾವಣೆಯ ಸಂದರ್ಭದಲ್ಲಿ ಟೌನ್ ಹಾಲ್‌ನಲ್ಲಿ ಪ್ರತಿಭಟನೆ ಮಾಡುವ ಮೂಲಕ ಮಹಾನಗರ ಪಾಲಿಕೆಯ ಆಯುಕ್ತರಿಗೆ ಬಿಸಿ ಮುಟ್ಟಿಸಿದರು.
ಮಿಜಬಾ ನಗರ ಸೇರಿದಂತೆ ನಗರದ ಅನೇಕ ಪ್ರದೇಶಗಳಲ್ಲಿ ಬೀದಿ ನಾಯಿಗಳು ದಾಳಿ ಮಾಡಿವೆ. ಅನೇಕ ಮಕ್ಕಳು ಗಾಯಗೊಂಡಿವೆ. ಹೀಗಾಗಿ ಮಹಾನಗರ ಪಾಲಿಕೆಯ ಮುಂದೆ ಪ್ರತಿಭಟನೆ ಮಾಡಲಾಗಿದೆ. ಅನೇಕ ಬಾರಿ ಮನವಿ ಪತ್ರಗಳನ್ನು ಸಹ ಸಲ್ಲಿಸಲಾಗಿತ್ತು. ಕಳೆದ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯ ಸಂದರ್ಭದಲ್ಲಿಯೂ ಸಹ ನಾನು ಪ್ರತಿಭಟನೆ ಮಾಡಿದ್ದೆ. ಆದಾಗ್ಯೂ, ಈಗಲೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿ ಟೌನ್ ಹಾಲ್ ಮುಂದೆ ಸಾಜಿದ್ ಅಲಿ ಅವರು ಒಬ್ಬಂಟಿಯಾಗಿ ಪ್ರತಿಭಟನೆ ಮಾಡಿದರು.
ವಾರ್ಡ್ ನಂಬರ್ 41ರ ವ್ಯಾಪ್ತಿಯಲ್ಲಿ ಬರುವ ಮಿಸಬಾ ನಗರದ ನಿವಾಸಿ ಕುಮಾರಿ ಸಫುರಾ ಕುಲಸಮ್ ತಂದೆ ರಿಯಾಜ್ ಅಲಿ ಎಂಬ ಬಾಲಕಿಗೆ ಕಳೆದ 2023ರ ಡಿಸೆಂಬರ್ 28ರಂದು ಬೀದಿ ನಾಯಿಗಳು ದಾಳಿ ಮಾರಣಾಂತಿಕ ಗಾಯಗಳನ್ನು ಮಾಡಿವೆ. ಚಿಕಿತ್ಸೆ ಪಡೆದು ಗುಣಮುಖಳಾಗಿದ್ದು, ಆಕೆಯ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯಿಸಿ ಪಾಲಿಕೆಯ ಮುಂದೆ ಧರಣಿ ಕೈಗೊಂಡಿದ್ದು, ಪರಿಹಾರದ ಭರವಸೆ ನೀಡಲಾಗಿತ್ತು. ಆದಾಗ್ಯೂ, ಏಳು ತಿಂಗಳು ಗತಿಸಿದರೂ ಸಹ ಐದು ಲಕ್ಷ ರೂ.ಗಳ ಪರಿಹಾರ ಕೊಟ್ಟಿಲ್ಲ. ಕೂಡಲೇ ಆ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ್ವರ್ ಪಾಟೀಲ್ ಅವರು ಮತ್ತೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಸಾಜಿದ್ ಅಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆಯೂ ಸಹ ಇದೇ ರೀತಿ ಭರವಸೆಯನ್ನು ನೀಡಿದ್ದರಿಂದ ನಾನು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದೆ. ಈಗಲೂ ಸಹ ಹುಸಿ ಭರವಸೆಯನ್ನು ನೀಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದರು. ಈ ಬಾರಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಾಲಿಕೆಯ ಆಯುಕ್ತರು ಭರವಸೆ ನೀಡಿದರು.
ಕೂಡಲೇ ಬೀದಿ ನಾಯಿಗಳನ್ನು ನಿಯಂತ್ರಿಸುವAತೆ ಮತ್ತು ಈಗಾಗಲೇ ಬೀದಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡವರಿಗೆ ಪಾಲಿಕೆಯಿಂದ ಸೂಕ್ತ ಪರಿಹಾರ ಕೊಡುವಂತೆ ಅವರು ಒತ್ತಾಯಿಸಿದರು.