ಉದ್ಯಾನವನದ ಸುಂದರ ನಗರವನ್ನಾಗಿಸುವೆ: ನೂತನ ಮಹಾಪೌರ ನಾಯ್ಕೋಡಿ
ಕಲಬುರಗಿ ಜು.30: ನಗರವನ್ನು ಹಸಿರು, ಉದ್ಯಾನವನ ಹಾಗೂ ಸುಂದರ ನಗರವನ್ನಾಗಿಸುವೆ ಎಂದು ಮಹಾನಗರ ಪಾಲಿಕೆಯ ನೂತನ ಮಹಾಪೌರ ಯಲ್ಲಪ್ಪ ನಾಯ್ಕೋಡಿ ಅವರು ಹೇಳಿದರು.
ಮಂಗಳವಾರ ನೂತನ ಮಹಾಪೌರರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಅವಧಿಯನ್ನು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಮೀಸಲಿಡುವೆ ಎಂದರು.
ನಗರದಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಹಸಿರು ನಗರವನ್ನಾಗಿ ಮಾಡಲಾಗುವುದು. ನಗರದ ಸೌಂರ‍್ಯೀಕರಣಕ್ಕೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದ ಅವರು, ಮೊದಲು ನಗರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂಬ ದೂರುಗಳು ಇವೆ. ಹೀಗಾಗಿ ಆ ದೂರನ್ನು ಗಂಭೀರವಾಗಿ ಪರಿಗಣಿಸಿ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡುವುದಾಗಿ ತಿಳಿಸಿದರು.
ನನ್ನ ಮೊದಲ ಆದ್ಯತೆ ಶುದ್ಧ ಕುಡಿಯುವ ನೀರೂ ಪೂರೈಕೆಗೆ ಇದೆ. ನಂತರ ರಸ್ತೆ, ವಿದ್ಯುತ್, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಹೇಳಿದ ಅವರು, ನೈರ್ಮಲ್ಯೀಕರಣಕ್ಕೂ ಸಹ ಆದ್ಯತೆ ಕೊಡುವುದಾಗಿ ತಿಳಿಸಿದರು.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಆ ಕುರಿತು ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳುವುದಾಗಿಯೂ ಸಹ ಅವರು ಹೇಳಿದರು. ನಾಳೆಯಿಂದಲೇ ನಗರದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವೆ ಎಂದು ಅವರು ತಿಳಿಸಿದರು.