ಶಾಶ್ವತ ಸ್ನೇಹ ಕಾಪಾಡುವುದು ಒಂದು ಕೌಶಲ
ಕಲಬುರಗಿ: ಜು.30: ಪರಸ್ಪರ ನಂಬಿಕೆ, ಪ್ರೀತಿ, ಅನ್ಯೋನ್ಯತೆ ಮತ್ತು ಆತ್ಮೀಯತೆ ಇವು ಶಾಶ್ವತ ಸ್ನೇಹತೆಗೆ ಪೂರಕವಾಗುವ ಅಂಶಗಳು. ಪರಸ್ಪರ ಮುಕ್ತ ಮನಸ್ಸಿನ ಚರ್ಚೆ ಮಾಡುವುದರಿಂದ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ಉತ್ತಮ ಸ್ನೇಹಿತ, ಉತ್ತಮ ಮಾರ್ಗದರ್ಶಿಯಾಗುತ್ತಾನೆ. ಸ್ನೇಹಿತರು ಸುಖ-ದುಃಖಗಳಲ್ಲಿ ಸಮಭಾಗಿಯಾಗಿ ಪಾಲ್ಗೊಳ್ಳುವಿಕೆ, ಪರಸ್ಪರ ಯಶಸ್ಸಿಗೆ ಶ್ರಮಿಸುವುದು ಉತ್ತಮ ಮತ್ತು ಶಾಶ್ವತ ಸ್ನೇಹತೆಯನ್ನು ಕಾಪಾಡುವ ಒಂದು ಕೌಶಲವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ಅಫಜಲಪುರ ತಾಲೂಕಿನ ಟಾಕಳಿ ಗ್ರಾಮದ ‘ಸಕ್ಸಸ್ ಗೆಳೆಯರ ಬಳಗ’ದ ಕಚೇರಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಸ್ನೇಹ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡುತ್ತಾ, ಸ್ನೇಹ ಒಂದು ಪವಿತ್ರವಾದ ನಂಟು. ಇದು ಸಂಬAಧವನ್ನು ಬೆಸೆಯುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಬಹು ಎಚ್ಚರಿಕೆಯಿಂದ ಕಾಪಾಡಿಕೊಂಡು ಹೋಗಬೇಕು. ಸ್ವಾರ್ಥಪರ ಚಿಂತನೆ, ಸಂಶಯಗಳು, ಶಾಶ್ವತ ಸ್ನೇಹಕ್ಕೆ ಧಕ್ಕೆ ತರುವ ಅಂಶಗಳು. ದುರಾಭಿಮಾನವು ಸ್ನೇಹದ ಬಿರುಕಿಗೆ ಕಾರಣವಾಗಬಹುದು. ಸ್ವಾರ್ಥ ಹಾಗೂ ವ್ಯವಹಾರಿಕ ಉದ್ದೇಶದ ಸ್ನೇಹ ಅಪಾಯಕಾರಿಯಾಗಿದೆ. ಪ್ರತಿಯೊಬ್ಬರು ಪರಸ್ಪರ ಸ್ನೇಹಭಾವದಿಂದ ಬದುಕಿದರೆ, ಜೀವನ ಸುಗಮವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಗೋಪಾಲ ಹುಲಿಕಾರ, ರಾಘವೇಂದ್ರ ಹೊಸಮನಿ, ದೇವಿಂದ್ರ ಭಜಂತ್ರಿ, ನಬಿಲಾಲ್ ಮಕನದಾರ ಸೇರಿದಂತೆ ಇನ್ನಿತರರಿದ್ದರು.