ಕಲಬುರಗಿ ಮಹಾನಗರ ಪಾಲಿಕೆ “ಕೈ”ವಶ ಯಲ್ಲಪ್ಪ ಮೇಯರ್, ಹೀನಾಬೇಗಂ ಡೆಪ್ಯುಟಿ ಮೇಯರ್ ಆಗಿ ಅವಿರೋಧ ಆಯ್ಕೆ
ಕಲಬುರಗಿ:ಜು.30-ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆಯ 22ನೇ ಮೇಯರ್ ಆಗಿ ವಾರ್ಡ್ ಕ್ರಮಾಂಕ 53ರ ಕಾಂಗ್ರೆಸ್ ಸದಸ್ಯ ಯಲ್ಲಪ್ಪ ನಾಯ್ಕೋಡಿ ಆಯ್ಕೆಯಾಗುವ ಮೂಲಕ ಬಿಜೆಪಿಯ ಐದು ವರ್ಷಗಳ
ಆಡಳಿತಕ್ಕೆ ಅಂತ್ಯ ಹಾಡಿದರು. ಇದೇ ವೇಳೆ, ಕಾಂಗ್ರೆಸ್ ಸದಸ್ಯೆ ಹೀನಾಬೇಗಂ ಅಬ್ದುಲ್ ರಹೀಂ (ವಾರ್ಡ್ ಕ್ರಮಾಂಕ-10) ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಗೊಂಡರು.
ಈ ಬಾರಿ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರೆ ಡೆಪ್ಯುಟಿ ಮೇಯರ್ ಹುದ್ದೆ ಬಿಸಿಎ ಪ್ರವರ್ಗಕ್ಕೆ ಮೀಸಲಾಗಿತ್ತು. ಹೀಗಾಗಿ, ಪರಿಶಿಷ್ಟ ಪಂಗಡದ ಯಲ್ಲಪ್ಪ ನಾಯ್ಕೋಡಿ ಹಾಗೂ ಬಿಸಿಎ ಸಮುದಾಯದ ಹೀನಾಬೇಗಂ ಅನುಕ್ರಮವಾಗಿ ಮೇಯರ್ ಹಾಗೂ ಡೆಪ್ಯುಟಿ ಮೇಯರ್ ಹುದ್ದೆಗಳನ್ನು ಅಲಂಕರಿಸಿದರು.
ಒಟ್ಟು 55 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದ 27 ಸದಸ್ಯರು ಆಯ್ಕೆಗೊಂಡಿದ್ದು, ಇದರ ಜೊತೆಗೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿತ್ ಸದ್ಯರಾದ ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ್, ಚಂದ್ರಶೇಖರ ಪಾಟೀಲ್ ಅವರನ್ನು ಒಳಗೊಂಡAತೆ ಸದಸ್ಯ ಬಲ 33ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, 22 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಬಿ.ಜಿ.ಪಾಟೀಲ್ ಹಾಗೂ ಜೆಡಿಎಸ್ ಪಕ್ಷದ ನಾಲ್ವರು ಸದಸ್ಯರ ಬೆಂಬಲವಿದ್ದರೂ ಕೇವಲ 30 ಮತಗಳನ್ನು ಕ್ರೋಢೀಕರಿಸಲು ಸಾಧ್ಯವಾಯಿತು.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಬಿಜೆಪಿಯ ದಿಗಂಬರ ನಾಡಗೌಡ (ವಾರ್ಡ್ ಕ್ರಮಾಂಕ-23) ಅವರ ಎಸ್ಟಿ ಪ್ರಮಾಣ ಪತ್ರ ಅಸಿಂಧುಗೊಳಿಸುವAತೆ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್ ದೂರು ಸಲ್ಲಿಸಿದ್ದರು. ದಿಗಂಬರ ಬಳಿ ತಳವಾರ ಸಮುದಾಯಕ್ಕೆ ಸೇರಿದ ಹಾಗೆ ಎಸ್ಟಿ ಜಾತಿ ಪ್ರಮಾಣಪತ್ರ ಇತ್ತು. ಆದರೆ ಅವರು ಹಿಂದುಳಿದ ಕಬ್ಬಲಿಗ ಸಮುದಾಯಕ್ಕೆ ಸೇರಿದ್ದಾರೆ. ಹಾಗಾಗಿ, ಅವರ ಪ್ರಮಾಣ ಪತ್ರ ಅಸಿಂಧುಗೊಳಿಸುವAತೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳು ಪಂಚನಾಮೆ ಕೈಗೊಂಡ ಬಳಿಕ ದಿಗಂಬರ ಅವರ ಎಸ್ಟಿ ಪ್ರಮಾಣ ಪತ್ರ ಅಸಿಂಧುಗೊಳಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ದಿಗಂಬರ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸದಂತೆ ಕಡಿವಾಣ ಹೇರುವಲ್ಲಿ ಕಾಂಗ್ರೆಸ್ ಮುಖಂಡರು ಸೋಮವಾರವೇ ಯಶಸ್ವಿಯಾಗಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಬಿಜೆಪಿಯ ಆಡಳಿತಕ್ಕೆ ಮಂಗಳ ಹಾಡುವಲ್ಲಿ ಯಶಸ್ವಿಯಾಗಿದೆ.
ಹೀನಾಬೇಗಂ ಡೆಪ್ಯುಟಿ ಮೇಯರ್
ಮೇಯರ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಡೆಪ್ಯುಟಿ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ (ವಾರ್ಡ್ ಕ್ರಮಾಂಕ-10) ಹೀನಾಬೇಗಂ ಅಬ್ದುಲ್ ರಹೀಂ ಆಯ್ಕೆಗೊಂಡರು.
ಹೀನಾಬೇಗA ಅವರ ಪತಿ ಅಬ್ದುಲ್ ರಹೀಂ ಮೂಲತಃ ಎಸ್‌ಡಿಪಿಐ ಕಾರ್ಯಕರ್ತರಾಗಿದ್ದು, 2013ರಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಪಾಲಿಕೆಗೆ ಆಯ್ಕೆಗೊಂಡಿದ್ದರು. ನಂತರ ಬದಲಾದ ರಾಜಕೀಯ ಬೆಳವಣಿಗೆಯ ಕಾರಣದಿಂದಾಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಅವರು ತಮ್ಮ ಪತ್ನಿ ಹೀನಾ ಬೇಗಂ ಅವರನ್ನು ಕಣಕ್ಕಿಳಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.