ಭೂ ದಾಖಲೆ ಇಲಾಖೆ ಡಿ.ಡಿ.ಎಲ್.ಆರ್, ಸರ್ವೇಯರ್ ಲೋಕಾಯುಕ್ತ ಬಲೆಗೆ
ಕಲಬುರಗಿ,ಜು.30-ಜಮೀನು ಪೋಡಿ ಮಾಡಿಕೊಡಲು 1.50 ಲಕ್ಷ ಲಂಚ ಪಡೆಯುವಾಗ ಭೂಮಾಪನ ಇಲಾಖೆಯ ಡಿಡಿಎಲ್‌ಆರ್ ಮತ್ತು ಸರ್ವೇಯರ್ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜಿಲ್ಲಾ ಭೂಮಾಪನ ಉಪ ನಿರ್ದೇಶಕರ ಕಚೇರಿಯಲ್ಲಿ ಡಿಡಿಎಲ್‌ಆರ್ ಆಗಿರುವ ಪ್ರವೀಣ್ ಜಾಧವ್ ಮತ್ತು ಸರ್ವೇಯರ್ ಶರಣಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಭೂಮಾಪನ ಇಲಾಖೆಯ ಸಿಬ್ಬಂದಿ ರೇವಣಸಿದ್ದ ಮೂಲಗೆ ಅವರಿಗೆ ಸಣ್ಣಪುಟ್ಟ ವಿಷಯದಲ್ಲಿ ಮಾನಸಿಕ ಹಿಂಸೆ ನೀಡಿ ಪ್ರತಿಯೊಂದು ಕಡತಕ್ಕೆ ಮತ್ತು ಪ್ರತಿಯೊಂದು ಫೈಲ್‌ಗೆ ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು ಎಂದು ದೂರು ನೀಡಲಾಗಿದ್ದು, ಅದರಂತೆ ಬ್ರಹ್ಮಪುರ ಸರ್ವೆ ನಂ.89/4 ಅಳತೆಯ 12.7 ಎಕರೆ ಜಮೀನಿನಲ್ಲಿ 25 ಗುಂಟೆ ಜಮೀನನ್ನು ಪೋಡಿ ಮಾಡಲು ರೂ.3.50 ಲಕ್ಷÀ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಅದರಂತೆ 1.50 ಲಕ್ಷ ಮುಂಗಡವಾಗಿ ಲಂಚ ಪಡೆಯುವಾಗ ಕರ್ನಾಟಕ ಲೋಕಾಯುಕ್ತ ಕಲಬುರಗಿ ಎಸ್‌ಪಿ ಜಾನ್ ಆಂಟೋನಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಗೀತಾ ಬೇನಾಳ, ಮಂಜುನಾಥ, ಇನ್ಸಪೆಕ್ಟರ್ ರಾಜಶೇಖರ, ಪ್ರದೀಪ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ತನಿಕೆ ನಡೆಸುತ್ತಿದ್ದಾರೆ.