ಟೆಂಪೋ ಪಲ್ಟಿ: 30ಕ್ಕೂ ಹೆಚ್ಚು ಜನರಿಗೆ ಗಾಯ
ವಿಜಯಪುರ,ಜು.30: ಜಿಲ್ಲೆಯ ಸಿಂದಗಿ ತಾಲೂಕಿನ ಮನ್ನಾಪುರ ಗ್ರಾಮದ ಬಳಿ ವಾಹನ ಚಾಲಕನ ನಿರ್ಲಕ್ಷತನದಿಂದ ಟೆಂಪೋ ಪಲ್ಟಿಯಾದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ 30ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.
ತಾಲೂಕಿನ ಹಿಕ್ಕಣಗುತ್ತಿ ಗ್ರಾಮಸ್ಥರು ಗೋಲಗೇರಿ ಗೊಲ್ಲಾಳೇಶ್ವರ ದೇವಸ್ಥಾನಕ್ಕೆ ಜವಳ ಕಾರ್ಯಕ್ರಮಕ್ಕೆ ಹೊರಟಿರುವ ಸಂದರ್ಭದಲ್ಲಿ ಸಿಂದಗಿ ಶಹಾಪೂರ ಹೆದ್ದಾರಿಯ ಮಾರ್ಗದಲ್ಲಿ ಬರುವ ಮನ್ನಾಪುರ ಗ್ರಾಮದ ಹತ್ತಿರ ಈ ಅಪಘಾತ ಸಂಭವಿಸಿದೆ. ತಕ್ಷಣದಲ್ಲಿ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಈ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಶಾಸಕ ಅಶೋಕ ಮನಗೂಳಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿ ಗಂಭೀರ ಸ್ಥಿತಿಯಲ್ಲಿದ್ದವರಿಗೆ ಜಿಲ್ಲಾಸ್ಪತ್ರೆಗೆ ರವಾನಿಸುವಂತೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಘಾತದಲ್ಲಿ ಗಾಯವಾದ ಜನರಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡುವಂತೆ ಸ್ಥಳೀಯ ವೈದ್ಯರಿಗೆ ಸೂಚಿಸಿದ್ದೇನೆ. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲು ಹೇಳಿದ್ದು, ಈಗಾಗಲೇ ಜಿಲ್ಲಾಸ್ಪತ್ರೆಯವರ ಜೊತೆಗೆ ದೂರವಾಣಿ ಮುಖಾಂತರ ಸರಿಯಾದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ.
ಅದೃಷ್ಟವಶಾತ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.
ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.