ಸರಕಾರ ತನ್ನ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ ಮಾಡುತ್ತಿದೆ: ಶಾಸಕ ಎಂ.ವೈ
ಅಫಜಲಪುರ:ಜು.30: ಸಾರ್ವಜನಿಕರ ಸಮಸ್ಯೆಗಳನ್ನು ದೂರದ ಕಲಬುರಗಿಗೆ ಹೊತ್ತುಕೊಂಡು ಬರಲು ಕಷ್ಟಕರವಾಗುತ್ತದೆ ಎಂದು ನಮ್ಮ ಸರಕಾರ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜನ ಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡು ಸಾಧ್ಯವಾದಷ್ಟರ ಮಟ್ಟಿಗೆ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಜಿಲ್ಲಾಡಳಿತ ತಾಲುಕು ಮಟ್ಟದಲ್ಲಿ ಜನರಿಗೆ ಹತ್ತಿರವಾಗಿ ಕೆಲಸ ಮಾಡುತ್ತಿದೆ ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ಸೋಮವಾರ ಜಿಲ್ಲಾಡಳಿತ ಏರ್ಪಡಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ತನ್ನ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ ಮಾಡುತ್ತಿದೆ. ಜನ ಸ್ಪಂದನ ಸಭೆಗೆ ಸರಕಾರದ ಎಲ್ಲ ಇಲಾಖೆಯ ಅಧಿಕಾರಿಗಳು ಬಂದಿರುತ್ತಾರೆ ಜನರು ತಮ್ಮ ಸಮಸ್ಯೆಗಳಿಗೆ ಅರ್ಜಿ ಕೊಡುವ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಮಾತನಾಡಿ, ಜನ ಸ್ಪಂದನ ಕಾರ್ಯಕ್ರಮದಿಂದಾಗಿ ಜನರನ್ನು ಹತ್ತಿರದಿಂದ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಸಾಧ್ಯವಾಗುತ್ತದೆ. ತಾಲೂಕು ಮಟ್ಟದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಒಂದೇ ಸೂರಿನಡಿಗೆ ಸೇರುವುದರಿಂದ ಆಡಳಿತ ಯಂತ್ರಕ್ಕೆ ಚುರುಕು ನೀಡಿದಂತಾಗುತ್ತದೆ. ತಿಂಗಳ ನಂತರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅರ್ಜಿಗಳ ವಿಲೇವಾರಿ ಬಗ್ಗೆ ಗಮನ ಹರಿಸಲಾಗುತ್ತದೆ.ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅಹವಾಲುಗಳ ಅರ್ಜಿಗಳನ್ನು ಆದಷ್ಟು ಬೇಗ ಇತ್ಯರ್ಥ ಮಾಡಬೇಕು. ಕಾನೂನು ತೊಡಕು ಇರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಅರ್ಜಿಗಳನ್ನು ಬಾಕಿಯಿಟ್ಟುಕೊಳ್ಳಬಾರದು. ಸ್ಪಷ್ಟತೆಯಿಲ್ಲದ ಅರ್ಜಿಗಳಿಗೆ ಹಿಂಬರಹ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಕಳೆದ ಹಂಗಾಮಿನಲ್ಲಿ 770 ಕೋಟಿ ರೂಪಾಯಿ ಬೆಳೆ ಪರಿಹಾರ ಹಂಚಿಕೆ ಮಾಡಲಾಗಿದೆ.ಈ ವರ್ಷ ಒಳ್ಳೆ ಮಳೆಯಾಗುತ್ತಿದೆ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಿ. ವಿಮಾ ಕಂಪನಿಯಿAದ ಪರಿಹಾರ ದೊರಕಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.ಮುಂದಿನ ತಿಂಗಳು ಹೋಬಳಿ ಮಟ್ಟದಲ್ಲಿ ಜನ ಸ್ಪಂದನ ಕಾರ್ಯಕ್ರಮ ಮಾಡಿ ಆಡಳಿತಕ್ಕೆ ಚುರುಕು ಮುಟ್ಟಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಹೆಚ್ಚುವರಿ ಎಸ್.ಪಿ ಎನ್. ಶ್ರೀನಿಧಿ, ಸಹಾಯಕ ಆಯುಕ್ತೆ ರೂಪಿಂದರ್ ಕೌರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಮೀನಾಕ್ಷಿ, ತಹಶೀಲ್ದಾರ್ ಸಂಜೀವಕುಮಾರ ದಾಸರ,ತಾಪಂ ಇಓ ವೀರಣ್ಣ ಕೌಲಗಿ,ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ಅಧಿಕಾರಿಗಳಾದ ಸಂತೋಷ ಸಜ್ಜನ,ಎಸ್.ಎಚ್.ಗಡಗಿಮನಿ, ಲಕ್ಷ್ಮೀಕಾಂತ ಬಿರಾದಾರ,ಕೆ.ಎಂ.ಕೋಟೆ, ಶ್ರೀಕಾಂತ್ ನೈನಾಜಿ,ಶಾಂತಪ್ಪ ಜಾಧವ,ಶಿವಯೋಗಿ, ಸಂತೋಷ ಇಂಡಿ, ಬಾಬುರಾವ್ ಜ್ಯೋತಿ,ಜ್ಯೋತಿಬಾಯಿ ಪಾಟೀಲ್,ಕೆ.ನಾಗರಜ್, ಸಿ.ಪಿ.ಐ ಚನ್ನಯ್ಯ ಹಿರೇಮಠ ಇತರರಿದ್ದರು.
ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ಎಲ್ಲ ಇಲಾಖೆಯ ಹಲವು ಕೌಂಟರ್ ಗಳನ್ನು ತೆರೆದು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಿ ಅರ್ಜಿ ಸ್ವೀಕರಿಸಲಾಯಿತು.