ರಕ್ತದಾನ ಶಿಬಿರ ಕಾರ್ಯಕ್ರಮಮತ್ತೊಬ್ಬರ ಜೀವ ಉಳಿಸುವ ಮಹಾದಾನ ರಕ್ತದಾನ
ಸಂಜೆವಾಣಿ ವಾರ್ತೆ
ಹೊಸಪೇಟೆ ಜು೩೦: ರಕ್ತ ದಾನಿಗಳು ಜೀವ ರಕ್ಷಕರು. ರಕ್ತದಾನ ಮಾಡುವುದು ಸಾಮಾಜಿಕ ಜವಾಬ್ದಾರಿ ನಿಮ್ಮ ರಕ್ತ ಒಂದು ಜೀವ ಉಳಿಸುವುದು ಎಂದು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಡಾ.ಸೋಮಶೇಖರ್ ಅವರು ಹೇಳಿದರು.
ಶ್ರೀ ಶಂಕರ್ ಆನಂದ್ ಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಎನ್‌ಎಸ್‌ಎಸ್, ರೆಡ್‌ಕ್ರಾಸ್ ಘಟಕಗಳು, ಸಾರ್ವಜನಿಕ ಆಸ್ಪತ್ರೆ ಹೊಸಪೇಟೆ, ವಿಮ್ಸ್ ಬಳ್ಳಾರಿ, ಎಚ್‌ಡಿಎಫ್‌ಸಿ ಬ್ಯಾಂಕ್ ಹೊಸಪೇಟೆ ಇವರ ಸಹಯೋಗದಲ್ಲಿ ಶ್ರೀ ಶಂಕರ್ ಆನಂದ್ ಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾದ  ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡುವುದು ನಿಜಕ್ಕೂ ಶ್ರೇಷ್ಠ ದಾನ. ಕೇವಲ ಮಾನವ ಮಾತ್ರ ಇನ್ನೊಬ್ಬ ಮಾನವನಿಗೆ ರಕ್ತ ನೀಡಲು ಸಾದ್ಯ. ರಕ್ತದಾನ ಮಾಡುವುದರಿಂದ ಯಾವುದೇ ಕೆಟ್ಟ ಪರಿಣಾಮಗಳಾಗುವುದಿಲ್ಲ ಬದಲಾಗಿ ಇದರಿಂದ ದೇಹಕ್ಕೆ ಅನುಕೂಲವಾದ ಪರಿಣಾಮಗಳಾಗುತ್ತವೆ. ರಕ್ತ ದಾನ ಮಾಡುವುದರಿಂದ ಹೃದಯಘಾತದ ಸಂಭವ ಕಡಿಮೆಯಾಗುವುದು. ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು ಎಂದರು.
ಶ್ರೀ ಶಂಕರ್ ಆನಂದ್ ಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಶಿವಪ್ಪ.ಕೆ  ಮಾತನಾಡಿ, ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ರಕ್ತದಾನ ಶ್ರೇಷ್ಠದಾನಗಳಲ್ಲಿ ಒಂದು, ರಕ್ತ ಪ್ರತಿಯೊಬ್ಬ ಮಾನವನಿಗೆ ಅತ್ಯವಶ್ಯಕವಾಗಿದೆ. ವಿದ್ಯಾರ್ಥಿಗಳು ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹೊಸಪೇಟೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಮ್ಯಾನೇಜರ್ ಆನಂದ್ ನಗರಿ, ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ರಘು ಪ್ರಸಾದ್ ಟಿ, ರೆಡ್‌ಕ್ರಾಸ್ ಘಟಕದ ಡಾ.ವೀರೇಂದ್ರ ಪಾಟೀಲ್ ಸಿ ಹಾಗೂ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ರಕ್ತದಾನದ ಶಿಬಿರದಲ್ಲಿ ಭಾಗವಹಿಸಿದ್ದರು. ಅನೇಕ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.