ಕಣ್ಣಿನ ತಪಾಸಣಾ ಶಿಬಿರ
ಸಂಜೆವಾಣಿ ನ್ಯೂಸ್
ಮೈಸೂರು: ಜು.೩೦:- ನಗರದ ವಿದ್ಯಾರಣ್ಯಪುರಂನ ಒಕ್ಕಲಿಗರ ಸಮುದಾಯ ಭವನದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸಲಾಯಿತು.
ಆರೋಗ್ಯ ಭಾರತಿ, ಜಿಲ್ಲಾ ಅಂಧತ್ವ ನಿವಾರಣಾ ಇಲಾಖೆ, ರೇಸ್ ಕ್ಲಬ್ ಕಣ್ಣಿನ ಆಸ್ಪತ್ರೆ, ಜಿಲ್ಲಾ ಒಕ್ಕಲಿಗರ ಸಂಘ ಸಹಯೋಗದಲ್ಲಿ ನಡೆದ ಶಿಬಿರವನ್ನು ಉದ್ಘಾಟಿಸಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡವರು ಪ್ರಪಂಚವನ್ನು ನೋಡುವ ಭಾಗ್ಯದಿಂದ ವಂಚಿತರಾಗಿರುತ್ತಾರೆ. ಆದರೆ ಬಹಳಷ್ಟು ಮಂದಿ ತಮ್ಮ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡವರಿದ್ದಾರೆ. ಆದ ಕಾರಣ ದೃಷ್ಟಿ ದೋಷವಿದ್ದವರು ಕಣ್ಣಿನ ರಕ್ಷಣೆಗೆ ಒತ್ತು ನೀಡುವುದು ಅವಶ್ಯ ಎಂದರು.
ವಯೋವೃದ್ದರು ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಪೊರೆಗೆ ತುತ್ತಾಗುತ್ತಿದ್ದಾರೆ. ಕಣ್ಣಿನ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೇ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದು. ನಿತ್ಯ ಜೀವನದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಅನುಕೂಲ ಕಲ್ಪಿಸಲು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಶಿಬಿರ ಆಯೋಜಿಸಿದ್ದಾರೆ. ಎಲ್ಲರೂ ಸದುಪಯೋಗ ಪಡೆಸಿಕೊಳ್ಳಿ ಎಂದರು.
ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಇ.ಚೇತನ್, ನಿರ್ದೇಶಕ ಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಸುನೀಲ್, ಲಿಂಗೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಪ್ರಗತಿ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಮಂಜುನಾಥ್, ಕೆ.ಎನ್.ವೆಂಕಟಾಚಲ ಪ್ರಸಾದ್, ಎಂ.ಆರ್.ಸಿ ಸಂಯೋಜಕ ರಾಮು ಕಾರ್ಯಕ್ರಮದಲ್ಲಿ ಹಾಜರಿದ್ದರು.