ಕೆಲಸ ಮಾಡುತ್ತಿದ್ದ ಮನೆಯಲ್ಲಿ ವಜ್ರ-ಚಿನ್ನ ಲೂಟಿ ; ಕೆಲಸದಾಕೆ ಸೇರಿ ಮೂವರು ಸೆರೆ
ಬೆಂಗಳೂರು,ಜು.೩೦- ಮನೆಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನ ಮತ್ತು ವಜ್ರದ ಒಡವೆಗಳನ್ನು ಕಳುವು ಮಾಡಿ ಪರಾರಿಯಾಗಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ಖತರ್ನಾಕ್ ಖದೀಮರನ್ನು ಬಂಧಿಸಿರುವ ಮಾರತ್ತಹಳ್ಳಿ ಪೊಲೀಸರು ೩೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನೀಲಸಂದ್ರದ ದಿವ್ಯ(೨೨), ನೀಲಸಂದ್ರದ ಅಸ್ಟೀನ್ ಟೌನ್ ನ ಮಂಜು(೩೯) ಹಾಗೂ ಜಾಮೂನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾರತ್ತಹಳ್ಳಿಯ ಮನೆಯೊಂದರಲ್ಲಿ ಸುಮಾರು ೬೦ ಲಕ್ಷ ಮೌಲ್ಯದ ಚಿನ್ನದ ಮತ್ತು ವಜ್ರಾಭರಣಗಳು ಕಳ್ಳತನವಾಗಿದ್ದು, ಮನೆಯಲ್ಲಿ ಕೆಲಸ ಮಾಡುತ್ತಿದ್ದ ೭ ಮಂದಿ ಕೆಲಸಗಾರರ ಮೇಲೆ ಸಂಶಯ ವ್ಯಕ್ತಪಡಿಸಿ ಮಾಲೀಕರು ದೂರು ನೀಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿ ಕಳೆದ ಜು.೧೭ ರಂದು ಕೆಲಸದಾಕೆ ಆರೋಪಿ ದಿವ್ಯ ಮನೆಕೆಲಸಕ್ಕೆಂದು ಬಂದಾಗ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆಯು ಮಾಲೀಕರ ಮನೆಯಲ್ಲಿ ಕಳುವು ಮಾಡಿರುವ ಬಗ್ಗೆ ತನ್ನೊಪ್ಪಿಕೊಂಡಿರುತ್ತಾಳೆ.
ಆಕೆಯನ್ನು ಸುದೀರ್ಘ ವಿಚಾರಣೆ ಕೈಗೊಂಡಾಗ, ಕಳುವು ಮಾಡಿದ ಚಿನ್ನಾಭರಣಗಳನ್ನು ನೀಲಸಂದ್ರದ ದೊಡ್ಡಮ್ಮನ ಬಳಿ ನೀಡಿರುವುದಾಗಿ ತಿಳಿಸಿದ್ದು ಮತ್ತೊಬ್ಬ ಮಂಜು ಳನ್ನು ನೀಲಸಂದ್ರದಲ್ಲಿ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ೯ ದಿನಗಳ ಕಾಲ ಕಸ್ಟಡಿಗೆ ಪಡೆದು ತನಿಖೆಯನ್ನು ಮುಂದುವರೆಸಿ ಮನೆಯ ಕೆಲಸದಾಕೆಯ ಮನೆಯಿಂದ ೧-ವಾಚ್ ಮತ್ತು ೧-ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಯಿತು.
ಆರೋಪಿತೆಯರಿಬ್ಬರು ನೀಡಿದ ಮಾಹಿತಿ ಮೇರೆಗೆ ಕಳುವು ಮಾಡಿದ್ದ ಇತರೆ ಚಿನ್ನಾಭರಣ ಮತ್ತು ವಜ್ರದ ವಡವೆಗಳನ್ನು ಈಜೀಪುರದಲ್ಲಿರುವ ಪರಿಚಯಸ್ಥ ಮತ್ತೊಬ್ಬ ಆರೋಪಿ ಜಾಮೂನ್ ನೀಡಿರುವುದಾಗಿ ತಿಳಿಸಿದ್ದು,ಆತನನ್ನು ಬಂಧಿಸಿ ತನಿಖೆ ಮುಂದುವರೆಸಿ, ಆರೋಪಿತೆಯ ರಿಂದ ಪಡೆದ ಚಿನ್ನಾಭರಣ ಮತ್ತು ವಜ್ರದ ವಡವೆಗಳನ್ನು ಈಜೀಪುರದ ವಿವಿಧ ಜ್ಯೂವೆಲರಿ ಶಾಪ್‌ಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು,ಜ್ಯೂವೆಲರಿ ಶಾಪ್‌ಗಳಿಂದ ೩೦ ಲಕ್ಷ ಬೆಲೆ ಬಾಳುವ ಚಿನ್ನ ಮತ್ತು ವಜ್ರದ ವಡವೆಗಳನ್ನು ವಶಕ್ಕೆಯಲಾಗಿದೆ ಎಂದರು.
ಮೊಬೈಲ್ ಕಳ್ಳ ಸೆರೆ:
ವೈಟ್‌ಪೀಲ್ಡ್ ನ ವಿಜಯನಗರ ಮುಖ್ಯರಸ್ತೆಯ ಕಾರ್ ವಾಟರ್ ವಾಷ್ ಸೆಂಟರ್ ನಲ್ಲಿ ಮೊಬೈಲ್‌ನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಖದೀಮನನ್ನು ಬಂಧಿಸಲಾಗಿದೆ.
ಅಬ್ದುಲ್ ರಜಾಕ್ ಬಂಧಿತ ಆರೋಪಿಯಾಗಿದ್ದು,ಆತನಿಂದ ೪.೫೦ಲಕ್ಷ ಮೌಲ್ಯದ ೩೨ ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ.
ಕಾರ್ ವಾಟರ್ ವಾಷ್ ನಲ್ಲಿ ಮೊಬೈಲ್ ಕಳ್ಳತನದ ಜಾಡು ಹಿಡಿದು ಉರ್ದುಸ್ಕೂಲ್ ಮುಂಭಾಗದಲ್ಲಿ ಖಚಿತವಾದ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ಬಂಧಿಸಿ ಆತ ವಿವಿಧ ಕಡೆಗಳಲ್ಲಿ ಕಳವು ಮಾಡಿದ ೩೦ ಮೊಬೈಲ್ ಗಳನ್ನು ಕಾಡುಗೋಡಿಯ ಚಿಕ್ಕಬನಹಳ್ಳಿಯ ಮುನಿಯಪ್ಪರವರ ಲೇಬರ್ ಷೆಡ್‌ನಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಅವುಗಳನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.
ಎಕ್ಸಿಕ್ಯೂಟಿವ್ ಬಂಧನ:
ಲ್ಯಾಪ್‌ಟಾಪ್, ಪೆನ್‌ಡ್ರೈವ್ ಗಳನ್ನು ಕಳುವು ಮಾಡಿದ್ದ ಸೆಲ್ಸ್ ಎಕ್ಸಿಕ್ಯೂಟಿವ್ ನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ರಾಮಮೂರ್ತಿ ನಗರ ಮುಖ್ಯ ರಸ್ತೆಯ ಷೋರೂಮ್ ವೊಂದರಲ್ಲಿ ಲ್ಯಾಪ್ ಟಾಪ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಷೋರೂಮ್‌ನಲ್ಲಿ ಸೆಲ್ಸ್ ಎಕ್ಸಿಕ್ಯೂಟಿವ್ ಹಾಗೂ ಇತರೆ ಕೆಲಸಗಾರರು ಕೆಲಸ ಮಾಡುತ್ತಿದ್ದರು. ಷೋರೂಮ್‌ನ ವ್ಯವಸ್ಥಾಪಕರು ದೂರನ್ನು ಸಲ್ಲಿಸಿ ದೂರಿನಲ್ಲಿ ಷೋರೂಮ್‌ನಿಂದ ೩ ಹೆಚ್.ಪಿ ಕಂಪನಿಯ ಲ್ಯಾಪ್‌ಟಾಪ್‌ಗಳು, ೧ ಡೆಲ್ ಕಂಪನಿಯ ಲ್ಯಾಪ್ಟಾಪ್ ಹಾಗೂ ೧೬ ಹೆಚ್.ಪಿ ಕಂಪನಿಯ ಪೆನ್‌ಡ್ರೈವ್‌ಗಳನ್ನು, ಜುಲೈ ಮಾಹೆಯ ಮೊದಲನೆ ಮತ್ತು ಎರಡನೇ ವಾರದಲ್ಲಿ ಕಳುವು ಮಾಡಿರುವುದನ್ನು ತಿಳಿಸಿದ್ದರು.
೩ ಲ್ಯಾಪ್ ಟಾಪ್ ಜಪ್ತಿ:
ತನಿಖೆಯನ್ನು ಮುಂದುವರೆಸಿ ಜು.೨೪ರಂದು ಷೋರೂಮ್‌ನ ಸೆಲ್ಸ್ ಎಕ್ಸಿಕ್ಯೂಟಿವ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಕಳುವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆತನಿಂದ ಕಳುವು ಮಾಡಿದ ೪ ಲ್ಯಾಪ್ ಟಾಪ್‌ಗಳ ಪೈಕಿ ೧ ಹೆಚ್.ಪಿ ಕಂಪನಿಯ ಲ್ಯಾಪ್‌ಟಾಪ್ ಹೆಚ್.ಪಿ ಪೆನ್‌ಡ್ರೈವ್‌ಗಳನ್ನು ಅಪರಿಚಿತ ಸಾರ್ವಜನಿಕರಿಗೆ ಮಾರಾಟ ಮಾಡಿ, ಬಂದಂತಹ ಹಣವನ್ನು ಖರ್ಚು ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾನೆ. ಉಳಿದ ೩ ಲ್ಯಾಪ್ಟಾಪ್ ಹಾಗೂ ೫ ಹೆಚ್.ಪಿ ಪೆನ್‌ಡ್ರೈವ್‌ಗಳನ್ನು ತನ್ನ ವಾಸದ ಮನೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಇವೆರಡೂ ಪ್ರಕರಣಗಳನ್ನು ವೈಟ್‌ಫೀಲ್ಡ್ ಡಿಸಿಪಿ ಶಿವಕುಮಾರ್ ಅವರ ನೇತೃತ್ವದ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.