ಸತ್ಯಶೋಧನೆ ಪತ್ರಿಕೋದ್ಯಮದ ಮಹಾಗುರಿಯಾಗಿರಬೇಕು
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.೩೦- ಮಾಹಿತಿ, ಮನರಂಜನೆ, ಜಾಗೃತಿ, ವಸ್ತುನಿಷ್ಠ ವರದಿ, ಸತ್ಯ ಶೋಧನೆ ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮದ ಮಹಾಗುರಿಯಾಗಿರಬೇಕು ಎಂದು ಕನ್ನಡಪ್ರಭ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನ ಕುಮಾರ್ ಅವರು ಅಭಿಪ್ರಾಯಪಟ್ಟರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿಯ ನಿಜಗುಣ ಸಭಾಂಗಣದಲ್ಲಿಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಾಮರಾಜನಗರ ವಿಶ್ವವಿದ್ಯಾಲಯ ಹಾಗೂ ಜಿಲ್ಲೆಯ ಪತ್ರಿಕಾ ಸಂಘಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ’ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕೋದ್ಯಮ ಕುರಿತು ವಿಶೇಷ ಉಪನ್ಯಾಸ’ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಚಾಮರಾಜನಗರ ಮೈಸೂರು ರಾಜಕೀಯ ಇತಿಹಾಸ ಹಾಗೂ ಪತ್ರಿಕೋದ್ಯಮ ಕುರಿತ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕನ್ನಡ ಪತ್ರಿಕೋದ್ಯಮಕ್ಕೆ ೧೮೧ ವರ್ಷಗಳ ಇತಿಹಾಸವಿದೆ. ಮೊದಲಬಾರಿಗೆ ೧೮೪೩ರಲ್ಲಿ ಕ್ರೈಸ್ತ ಪಾದ್ರಿಯವರು ಮಂಗಳೂರು ಸಮಾಚಾರ ಪತ್ರಿಕೆಯನ್ನು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಪತ್ರಿಕಾರಂಗ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದು, ಅಂದಿನ, ಇಂದಿನ ಪತ್ರಿಕೋದ್ಯಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ೧೯೮೦ರಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿ ಸ್ಥಾಪನೆಯಾಯಿತು. ಒಬ್ಬರಿಂದ ಮತ್ತೊಬ್ಬರಿಗೆ ಸಂವಹನ ಮಾಡಲು ಭಾಷೆ ಅಗತ್ಯವಿದೆ. ೨ ಸಾವಿರ ವರ್ಷ ಐತಿಹಾಸಿಕ ಹಿನ್ನೆಲೆಯುಳ್ಳ ಕನ್ನಡ ಭಾಷೆಗೆ ವೈವಧ್ಯಮಯ ಶ್ರೀಮಂತಿಕೆ ಹಾಗೂ ಸ್ವಂತಿಕೆಯ ಗಟ್ಟಿತನವಿದೆ ಎಂದರು.
ಮಾಧ್ಯಮಗಳು ಸರ್ಕಾರ ಮತ್ತು ಜನರ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು. ನೈತಿಕ ಜವಾಬ್ದಾರಿ ಪತ್ರಕರ್ತರ ಮೇಲಿದೆ. ನಕಾರಾತ್ಮಕತೆಗಿಂತ ಸಕಾರಾತ್ಮಕ ವರದಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾಮಾಜಿಕ ಬದ್ಧತೆ ಇರಬೇಕು. ಜನರಿಗೆ ನಿಖರ ಮಾಹಿತಿ ನೀಡಬೇಕು. ಬರವಣಿಗೆ ಶೈಲಿ ಉತ್ತಮವಾಗಿರಬೇಕು. ನೂರು ಸತ್ಯಸುದ್ದಿ ಪ್ರಕಟಿಸದಿದ್ದರೂ ಒಂದೇ ಒಂದು ಸುಳ್ಳು ಸುದ್ದಿ ಪ್ರಕಟಿಸಬಾರದು. ಪತ್ರಿಕೆಗಳು ಬದುಕನ್ನು ಅರಳಿಸುವ ಕೆಲಸ ಮಾಡಬೇಕು. ಆಗಮಾತ್ರ ಪತ್ರಿಕೆಗಳ ಬಗ್ಗೆ ಜನರಿಗೆ ನಂಬಿಕೆ, ವಿಶ್ವಾಸ ಮೂಡಲಿದೆ ಎಂದು ತಿಳಿಸಿದರು.
ಇತ್ತೀಚೆಗೆ ಮಾಧ್ಯಮಗಳು ಟಿ.ಆರ್.ಪಿ ಹಾಗೂ ಪ್ರಸಾರಸಂಖ್ಯೆಯ ಪೈಪೋಟಿಗೆ ಸಿಲುಕಿ ಒತ್ತಡ ಪರಿಸ್ಥಿತಿ ಎದುರಿಸುತ್ತಿವೆ. ಆಕಾಶದಿಂದ ಭೂಮಿವರೆಗೆ ಎಲ್ಲಾಬಗೆಯ ಸುದ್ದಿ ಭಿತ್ತರಿಸುವ ಸ್ವತಂತ್ರ್ಯ ಪತ್ರಿಕೆಗಳಿಗಿದೆ. ವೈಭವೀಕರಣಕ್ಕೆ ಮಹತ್ವ ನೀಡದೇ ವಾಸ್ತವ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಬೇಕು. ಜಾತಿ, ಧರ್ಮ, ಪ್ರಾದೇಶಿಕತೆ ಮೀರಿ ಪ್ರಾಮಾಣೀಕತೆಗೆ ಒತ್ತು ನೀಡಬೇಕು. ನಿರ್ಗತಿಕರು, ಬಡವರು, ದನಿ ಇಲ್ಲದವರಿಗೆ ದನಿಯಾಗಬೇಕು. ಸಾಮಾಜಿಕ ಪ್ರಜ್ಞೆ, ಕಳಕಳಿ ಮೈಗೂಡಿಸಿಕೊಳ್ಳಬೇಕು. ಹಿಂದಿನ ಅನೇಕ ರಾಷ್ಟ್ರ ನಾಯಕರು ಪತ್ರಿಕೆಗಳಲ್ಲಿ ಕೆಲಸ ಮಾಡಿ ಸಮಾಜವನ್ನು ಎಚ್ಚರಿಸಿದ್ದಾರೆ ಎಂದರು.
ಹಿಂದೆ ಅವಿಭಜಿತವಾಗಿದ್ದ ಮೈಸೂರು, ಚಾಮರಾಜನಗರ ಇಂದು ಪ್ರತ್ಯೇಕ ಜಿಲ್ಲೆಗಳಾಗಿವೆ. ಎರಡು ಜಿಲ್ಲೆಗಳು ಸಾಕಷ್ಟು ರಾಜಕೀಯ ನೇತಾರರನ್ನು ರಾಜ್ಯಕ್ಕೆ, ದೇಶಕ್ಕೆ ಕೊಡುಗೆಯಾಗಿ ನೀಡಿವೆ. ಇಬ್ಬರು ಮುಖ್ಯಮಂತ್ರಿಗಳನ್ನು ಮೈಸೂರು ನೀಡಿದೆ. ಜಾನಪದ, ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪಧ್ಬರಿತ ನೈಸರ್ಗಿಕ ಸಂಪತ್ತು, ಹುಲಿಯೋಜನೆ, ಆನೆಯೋಜನೆ ಈ ಭಾಗದಲ್ಲಿಯೇ ಇವೆ. ಭಾಷಾವಾರು ಪ್ರಾಂತ್ಯ ರಚನೆಗೂ ಮೊದಲು ಚಾಮರಾಜನಗರ ತಮಿಳುನಾಡಿಗೆ ಸೇರಿತ್ತು. ನಂಜುಂಡಪ್ಪ ವರದಿಯನ್ವಯ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಚಾಮರಾಜನಗರವು ಇದೆ. ಇಲ್ಲಿ ಕೈಗಾರಿಕೆಗಳು ಬೆಳೆದು ಜನರು ಅರ್ಥಿಕವಾಗಿ ಸದೃಢರಾಗಬೇಕು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕು ಎಂದು ಅಂಶಿ ಪ್ರಸನ್ನ ಕುಮಾರ್ ಅವರು ತಿಳಿಸಿದರು.
ಮಾಧ್ಯಮ ಕ್ಷೇತ್ರದ ಸವಾಲುಗಳ ಬಗ್ಗೆ ಉಪನ್ಯಾಸ ನೀಡಿದ ಮೈಸೂರು ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಸ್. ಸಪ್ನ ಅವರು ಮಾತನಾಡಿ ಇದು ಮಾಹಿತಿ ಯುಗವಾಗಿದೆ. ಜಾಹೀರಾತು ಪ್ರಪಂಚ ಇಂದು ವ್ಯಾಪಕ ಹಾಗೂ ವಿಫುಲವಾಗಿ ಬೆಳೆಯುತ್ತಿದೆ. ಮಾಧ್ಯಮ ಕ್ಷೇತ್ರ ಇಂದು ಅನೇಕ ಸವಾಲಗಳಿಂದ ಕೂಡಿದೆ. ಜಗತ್ತಿನ ಆಗುಹೋಗುಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಿಕೆಗಳಿಗೆ ಪ್ರತಿದಿನವು ಸವಾಲು ಎದುರಾಗುವ ನಿಟ್ಟಿನಲ್ಲಿ ಜನರಲ್ಲಿ ಕುತೂಹಲ ಹೆಚ್ಚಿಸಿ ಸಹಜ ಸುದ್ದಿ ಭಿತ್ತರಿಸಲು ಪರ್ತಕರ್ತರು ಸಹ ಪ್ರತಿದಿನ ಅಪ್‌ಡೇಟ್ ಆಗಬೇಕಾಗಿದೆ ಎಂದರು.
ಯಾವುದೇ ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಪತ್ರಕರ್ತರು ಕ್ರೀಯಾಶೀಲರಾಗಿರಬೇಕು. ಜನರೊಂದಿಗೆ ಸಹಜವಾಗಿ ಬೆರೆಯಬೇಕು. ಪ್ರಾಯೋಗಿಕ ಜ್ಞಾನಕೌಶಲ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸುಳ್ಳುಸುದ್ದಿ(ಫೇಕ್ ನ್ಯೂಸ್)ಗಳ ಬಗ್ಗೆ ಸದಾ ಜಾಗರೂಕರಾಗಬೇಕು. ಸಾಮಾಜಿಕ ಸಮಸ್ಯೆಗಳ ನಿವಾರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪತ್ರಿಕೆಗಳ ಬಗ್ಗೆ ಅರಿವು ಮೂಡಿಸಲು ಪ್ರತಿದಿನ ಶಾಲೆಗಳಲ್ಲಿ ದಿನಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಬೆಳೆಸಬೇಕು. ಉತ್ತಮ ಸಮಾಜ ನಿರ್ಮಾಣದೆಡೆಗೆ ಜನರನ್ನು ಕೊಂಡೊಯ್ಯಬೇಕು ಎಂದು ಡಾ. ಸಪ್ನ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ಮಾತನಾಡಿ ದೇಶ ಸ್ವಾತಂತ್ರ್ಯಗೊಂಡು ೭೫ ವರ್ಷಗಳಾಗಿದ್ದರೂ ಸಾಕಷ್ಟು ಅನಿಷ್ಠ ಪದ್ದತಿಗಳು ಜನರನ್ನು ಇಂದಿಗೂ ಕಾಡುತ್ತಿವೆ. ದಿನಪತ್ರಿಕೆಗಳನ್ನು ನಿರಂತರವಾಗಿ ಓದುವ ಅಭ್ಯಾಸವನ್ನು ವಿಧ್ಯಾರ್ಥಿಗಳು ಬೆಳೆಸಿಕೊಂಡು ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯಬೇಕು ಎಂದರು.ಚಾಮರಾಜನಗರ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಜಿ.ವಿ. ವೆಂಕಟರಮಣ ಹಾಗೂ ಉಪ ಕುಲಸಚಿವರಾದ ಡಾ. ವಿ.ಜಿ. ಸಿದ್ದರಾಜು ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ. ರಮೇಶ, ವಾರ್ತಾ ಸಹಾಯಕರಾದ ಸಿ. ಸುರೇಶ್‌ಕುಮಾರ್, ಚಾಮರಾಜನಗರ ವಿವಿ ಕನ್ನಡ ಉಪನ್ಯಾಸಕರಾದ ಡಾ. ಶಶಿಕಲಾ, ಮೂಕಹಳ್ಳಿ ಬಸವಣ್ಣ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿರುವ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.