ಕೊಡುವ ಮನಸ್ಸಿನಿಂದ ಜೀವನ ಸಾರ್ಥಕ್ಯ
ಸಂಜೆವಾಣಿ ನ್ಯೂಸ್
ಮೈಸೂರು: ಜು.೩೦:- ಮತೊಬ್ಬರಿಗೆ ಕೊಡುವ ಜೇನುಹುಳುವಿನ ಸ್ವಭಾವ ನಮಗೂ ಆಗಲಿ, ಕೊಡುವ ಮನಸ್ಸು ನಮಗೆ ಬಂದರೆ ನಮ್ಮ ಜೀವನ ಮನುಷ್ಯನಾಗಿ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಅಂಕಣಕಾರ, ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಅಧ್ಯಕ್ಷ ಡಾ. ಗುರುರಾಜ್ ಕರಜಗಿ ನುಡಿದರು.
ಮೈಸೂರು ವಿಶ್ವವಿದ್ಯಾನಿಲಯ ೧೦೮ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿವಿ ಕ್ರಾಫರ್ಡ್‌ಭನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ’ಜಾಯ್ ಆಫ್ ಗಿವಿಂಗ್’ (ನೀಡುವುದರಲ್ಲಿ ಇರುವಂತಹ ಸುಖ) ಕುರಿತು ಉಪನ್ಯಾಸ ನೀಡಿದರು.
ಜೇನುಹುಳು ಕಾಡಿನಲ್ಲಿ ಹತ್ತಾರು ಮೈಲಿ ಹಾರಾಡಿಕೊಂಡು ಹೂವನ್ನು ಹುಡುಕಿಕೊಂಡು ಹೋಗುತ್ತದೆ. ಹೂವು ಸಿಕ್ಕಾಗ ಅದರ ಬಣ್ಣ, ಮೃದುತ್ವ, ವಾಸನೆ ಯಾವುದನ್ನೂ ಕಿತ್ತುಕೊಳ್ಳುವುದಿಲ್ಲ. ಆದರೆ ಅದರಲ್ಲಿರುವ ಮಕರಂದವನ್ನು ಹೀರಿಕೊಂಡು ತನಗೋಸ್ಕರ ಹಾಗೂ ಮತ್ತೊಬ್ಬರಿಗೋಸ್ಕರ ಜೇನುತುಪ್ಪ ಮಾಡಿ ಬಿಟ್ಟುಹೋಗುತ್ತದೆ.
ಇನ್ನೊಂದೆಡೆ ಕಾಡಿನಲ್ಲಿ ಎಮ್ಮೆ ಸತ್ತು ಬಿದ್ದಿದ್ದರೂ ಅದರ ಹತ್ತಿರ ಹೋಗಲ್ಲ. ಆದರೆ ನೊಣ ಎಮ್ಮೆ ಕಡೆ ಹೋಗುತ್ತದೆ ಹೊರತಾಗಿ ಹೂವಿನ ಕಡೆ ಹೋಗೊಲ್ಲ. ಹಾಗಾಗಿ ನೊಣಕ್ಕೆ ಕೇವಲ ಪಡೆದುಕೊಳ್ಳುವ ಗುಣ ಇದೆ. ಜೇನುಹುಳ ಕೊಡುವುದಕ್ಕಾಗಿ ಇರುವಂತಹ ಜೀವಿ ಎಂದರು.
ಯಾರೋ ಒಬ್ಬರು ಕಷ್ಟದಲ್ಲಿರುವಾಗ ನಿಮ್ಮ ಕೈಲಾದ ಸಹಾಯ ಮಾಡಿರಿ, ನೀವು ಅವರಿಗೆ ದುಡ್ಡುಕೊಟ್ಟು ಸಾಗುವಂತಹದ್ದಲ್ಲ. ಬದಲಾಗಿ ಅವರ ಬೆನ್ನಮೇಲೆ ಕೈಯಿಟ್ಟು ಅವರಿಗೆ ಸಾಂತ್ವನ, ಭರವಸೆಯ ಮಾತನು ಹೇಳಿ ಅಷ್ಟೇ ಸಾಕು. ಅದೇ ನಿಮ್ಮ ದೊಡ್ಡ ಕೊಡುಗೆ ಆಗುತ್ತದೆ. ಅಲ್ಲದೇ ನಿಮಗೂ ಸಂತೋಷದ ಭಾವನೆ ಉಂಟಾಗುತ್ತದೆ ಎಂದರು. ಭಗವಂತ ಏನೋ ಸಾಧನೆ ಮಾಡಿಕೊಂಡು ಬಾ ಅಂತ ನಮ್ಮನ್ನು ಭೂಮಿಗೆ ಕಳುಹಿಸಿದ್ದಾನೆ. ನಮ್ಮ ಆಸಕ್ತಿ ವಿಷಯವೇ ನಮ್ಮ ಸಾಧನೆಯ ವಿಷಯವಾಗಬೇಕು. ನಾವು ಇಹಲೋಕ ತ್ಯಜಿಸಿಹೋಗುವ ಮುನ್ನ ನಮ್ಮ ಬದುಕಿನ ಸಾರ್ಥಕತೆಯ ಒಂದು ಹೆಜ್ಜೆ ಗುರುತು ಮೂಡಿಸಿ ಹೋಗಬೇಕು. ಹೆಜ್ಜೆಗುರುತು ಮೂಡಿಸಿಬೇಕಾದರೆ ನಾವು ಪಡೆದುಕೊಂಡಿದ್ದರಿಂದ ಹೆಜ್ಜೆಗುರುತು ಉಳಿಯುವುದಿಲ್ಲ. ಬದಲಾಗಿ ನಾವು ಏನು ಕೊಡುತ್ತೇವೆಯೋ ಅದರಿಂದ ಹೆಜ್ಜೆ ಗುರುತು ಮೂಡುತ್ತದೆ ಎಂದು ಬಸವೇಶ್ವರರು, ಮದರ್ ಥೆರೆಸಾ ಮುಂತಾದವರ ಅವರ ಜೀವನ ಸಾಧನೆಗಳನ್ನು ಬಣ್ಣಿಸಿದರು.
ಬ್ಯಾಂಕ್ ಅಕೌಂಟ್ ಓಪನ್ ಮಾಡುವುದು ಎಲ್ಲರಿಗೂ ಗೊತ್ತಿದೆ. ಆದರೆ ನಿಮ್ಮ ಜೀವನದಲ್ಲಿ ಇನ್ನೊಂದು ಮುಖ್ಯ ಅಕೌಂಟ್ ಓಪನ್ ಮಾಡಬೇಕು. ಅದು ಇಮೋಷನಲ್ ಬ್ಯಾಂಕ್ ಅಕೌಂಟ್. ನಾವು ಅಪ್ಪ ಅಮ್ಮ ಆಗಿದ್ದವರು ಮಕ್ಕಳಲ್ಲಿ ಇಮೋಷನಲ್ ಅಕೌಂಟ್ ಓಪನ್ ಅಂದರೆ, ಪ್ರೀತಿ, ಅಂತಃಕರಣದ ಡಿಪಾಸಿಟ್ ಮಾಡಿದ್ದರೆ ನಮಗೆ ವಾಪಸ್ ಅದು ಬರುತ್ತದೆ ಹಾಗಾಗಿ ಜೀವನದಲ್ಲಿ ಇಮೋಷನಲ್ ಡಿಪಾಸಿಟ್ ಬಹಳ ಮುಖ್ಯವಾಗುತ್ತದೆ ಎಂದರು.
ಇನ್ನೊಂದು ಇಪ್ಪತ್ತು ವರ್ಷದಲ್ಲಿ ಭಾರತ ಇನ್ನೂ ಚೆನ್ನಾಗಿ ಅಭಿವೃದ್ಧಿ ಹೊಂದಬೇಕಾದರೆ, ಯುವಜನತೆ ಕೊಡಮಾಡುವಂತಹ ಕೆಲಸದ ಮೇಲೆ ಅವಂಲಬಿತವಾಗಿದೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸ ಕಾರ್ಯಕ್ರಮಕ್ಕೂ ಮುನ್ನ ಮೈಸೂರು ವಿವಿ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರಿದರು.
ವಿವಿ ಕುಲಸಚಿವರಾದ ಎ.ಆರ್.ಶೈಲಜ ಅವರು ವಂದಿಸಿದರು.