ಸಿಎಂ ತೇಜೋವಧೆ ನಿಲ್ಲದಿದ್ದರೆ ಜೆಡಿಎಸ್-ಬಿಜೆಪಿ ವಿರುದ್ಧ ದಂಗೆ
ಸಂಜೆವಾಣಿ ನ್ಯೂಸ್
ಮೈಸೂರು: ಜು.೩೦:- ಸಿಎಂ ಸಿದ್ದರಾಮಯ್ಯ ವಿರುದ್ಧ ವಿನಾಕಾರಣ ಮುಡಾ ಹಗರಣದ ಹೆಸರಿನಲ್ಲಿ ತೇಜೊವಧೆ ಮಾಡುವುದನ್ನು ನಿಲ್ಲಿಸದಿದ್ದರೆ ಜೆಡಿಎಸ್ ಬಿಜೆಪಿ ವಿರುದ್ಧ ಅಹಿಂದ ವರ್ಗ ದಂಗೆ ಎಳಲಿವೆ ಎಂದು ಕರ್ನಾಟಕ ರಾಜ್ಯ ಹಿಂದುಳಿದವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷರಾದ ಅಧ್ಯಕ್ಷರಾದ ಕೆ.ಎಸ್.ಶಿವರಾಮು ಕಿಡಿಕಾರಿದರು.
ಮೈಸೂರಿನಲ್ಲಿ ಗಾಂಧಿ ಪ್ರತಿಮೆ ಎದುರು ಜಮಾವಣೆಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಹುನ್ನಾರ ಮಾಡುತ್ತಿವೆ. ಹೇಗಾದರೂ ಮಾಡಿ ಸಿದ್ದರಾಮಯ್ಯರವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿ, ಮುಖ್ಯಮಂತ್ರಿಯ ಹುದ್ದೆಯಿಂದ ಕೆಳಗಿಳಿಸುವ ಒಂದೇ ಧೈಯೋದ್ದೇಶದಿಂದ ರಾಜಕೀಯ ಹುನ್ನಾರ ಮಾಡುತ್ತಿದೆ ಎಂದರು.
ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ, ಜೆಡಿಎಸ್ ಸಿದ್ದರಾಮಯ್ಯರವರ ರಾಜಿನಾಮೆ ಕೇಳುತ್ತಿರುವುದು ಸರಿಯಷ್ಟೆ. ಇದೇ ೨೦೨೧ ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಲದಲ್ಲಿ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಆ ಭ್ರಷ್ಟಾಚಾರದ ರೂವಾರಿ ಆಗಿನ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ವಿಜಯೇಂದ್ರ ಮತ್ತು ಅವರ ತಂಡ ಕಾರಣವಾಗಿದೆ. ಇದರ ವಿರುದ್ಧ ನಮ್ಮ ವೇದಿಕೆ ೨೦೨೧ ರಲ್ಲಿ ಬೃಹತ್ ಹೋರಾಟ ನಡೆಸಿ ದಾಖಲೆ ಸಮೇತ ಸರ್ಕಾರಕ್ಕೆ ದೂರು ಸಲ್ಲಿಸಿ, ಸಿಬಿಐ ತನಿಖೆಗೆ ಆಗ್ರಹಿಸಿತ್ತೆಂದರು.
ಈ ಹಿನ್ನೆಲೆಯಲ್ಲಿ ನಾವು ಜು.೨೬ರಂದು ವಿಜಯೇಂದ್ರ ರವರಿಗೆ ಪತ್ರ ಬರೆದು ಮುಡಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಚರ್ಚೆಗೆ ಮುಕ್ತ ಆಹ್ವಾನವನ್ನು ನೀಡಿದ್ದೆವು. ಆದರೆ, ಅವರು ಸಾರ್ವಜನಿಕ ಚರ್ಚೆಗೆ ಆಗಮಿಸದೆ ಪಲಾಯನವಾದ ಮಾಡಿದ್ದಾರೆ. ಇದರ ಉದ್ದೇಶ ಅವರು ಮುಡಾ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಸಿದ್ದರಾಮಯ್ಯರವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುವುದು. ಅವರ ವ್ಯಕ್ತಿತ್ವಕ್ಕೆ ಮಸಿಬಳಿಯುವ ಕೆಲಸವನ್ನು ಬಿಜೆಪಿ, ಜೆಡಿಎಸ್ ಮಾಡುತ್ತಿರುವುದು ಸಾಬೀತಾಗಿದೆ. ಇನ್ನಾದರೂ ಎಚ್ಚೆತ್ತು ಸಿದ್ದರಾಮಯ್ಯರವರ ವಿರುದ್ಧ ಮಾಡುತ್ತಿರುವ ಪಿತೂರಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಇಂದಿನ ಬಹಿರಂಗ ಚರ್ಚೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ಅಲ್ಪಸಂಖ್ಯಾತ ಮುಖಂಡ ನಾಸೀರ್, ರೆಸ್ಪಾನ್ಸಿಬಲ್ ಸಿಟಿಜನ್ ವಾಯ್ಸ್ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಎಫ್.ಖಲೀಂ, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ರವಿನಂದನ್, ಜಿಲ್ಲಾ ಉಪ್ಪಾರರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ್, ನಗರ ಕಾಂಗ್ರೆಸ್ ಓ.ಬಿ.ಸಿ. ಘಟಕದ ಅಧ್ಯಕ್ಷ ಎನ್.ಆರ್.ನಾಗೇಶ್, ಹಿಂದುಳಿದ ವರ್ಗಗಳ ಮುಖಂಡರಾದ ಲೋಕೇಶ್ ಮಾದಾಪುರ, ಮುಖಂಡರಾದ ಕೇಶವ, ದಲಿತ ಮುಖಂಡರಾದ ರಾಜಶೇಖರ್, ಶಿವಲಿಂಗಯ್ಯ, ಅಲ್ಪಸಂಖ್ಯಾತರ ಮುಖಂಡ ರಹೀಮ್, ಸುನಿಲ್ ನಾರಾಯಣ್, ರವಿ ನಜರ್ ಬಾದ್, ಮಂಜುಳ, ಮಂಗಳ, ಮಾಲತಿ ಮುಂತಾದವರು ಭಾಗವಹಿಸಿದ್ದರು.