ಕೃಷಿಯೇತರ ಕಸುಬುಗಳನ್ನು ಅಳವಡಿಸಿಕೊಳ್ಳಿ: ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.೩೦: ಕೃಷಿಯ ಜೊತೆಗೆ ಕೃಷಿಯೇತರ ಉಪಕಸುಬುಗಳನ್ನು ಅಳವಡಿಸಿಕೊಳ್ಳುವುದರಿಂದ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಹುದು ಎಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ಸ್ವಗ್ರಾಮ ಹರಳಹಳ್ಳಿಯಲ್ಲಿ ವನಸಿರಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವತಿಯಿಂದ ಸಮುದಾಯ ಬಂಡವಾಳ ನಿಧಿ ಸಾಲವಿತರಣೆ ಮತ್ತು ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರ ಬದುಕನ್ನು ಹಸನು ಮಾಡಬೇಕೆಂಬ ಉದ್ದೇಶದಿಂದ ಬ್ಯಾಂಕ್ ಆಫ್ ಬರೋಡ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಅನೇಕ ರೀತಿಯ ಸಾಲಸೌಲಭ್ಯಗಳನ್ನು ನೀಡುತ್ತಿರುವುದು ಸಂತಸದ ವಿಷಯ. ತಾಲ್ಲೂಕಿನ ರೈತರುಗಳು ಕೃಷಿಯ ಜೊತೆಗೆ ಉಪ ಕಸುಬುಗಳಾದ ಹೈನುಗಾರಿಕೆ, ಕೋಳಿಸಾಕಾಣಿಕೆ, ಮೇಕೆ ಸಾಕಾಣಿಕೆ, ಮೀನು ಸಾಕಾಣಿಕೆ, ಅಣಬೆ ಬೇಸಾಯ ಮುಂತಾದುವುಗಳಿಗೆ ಹೆಚ್ಚಿನ ಒತ್ತು ನೀಡಿ ಅವುಗಳನ್ನು ಕೈಗೊಂಡಾಗ ಕುಟುಂಬಗಳ ಆದಾಯ ವೃದ್ದಿಸುವುದರ ಜೊತೆಗೆ ಆರ್ಥಿಕ ಸಾಕ್ಷರತೆಯ ಅರಿವು ಉಂಟಾಗುತ್ತದೆ. ವರ್ಷಪೂರ್ತಿ ಆದಾಯ ನೀಡುವ ಆಧುನಿಕ ರೀತಿಯ ಹೈನುಗಾರಿಕೆಯು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಚಲಿತವಾಗುತ್ತಿದೆ. ಕೃಷಿಯೇತರ ಉಪಕಸುಬುಗಳಾದ ಹಪ್ಪಳ ತಯಾರಿಕೆ, ಮೇಣದಬತ್ತಿ ತಯಾರಿಕೆ, ಹೂವಿನ ಬೇಸಾಯ, ಮಸಾಲೆ ಪದಾರ್ಥಗಳನ್ನು ಸಿದ್ದಪಡಿಸುವಿಕೆ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳನ್ನು ಒದಗಿಸಿಕೊಡುವುದು ನನ್ನ ಕರ್ತವ್ಯವಾಗಿದ್ದು ಶಾಸಕನಾಗಿ ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಆದ್ದರಿಂದ ತಾವುಗಳು ಮುಂದೆ ಬಂದರೆ ಮೂಲಭೂತ ಬಂಡವಾಳ ಹಾಗೂ ಸೌಕರ್ಯಗಳನ್ನು ಒದಗಿಸಿಕೊಡಲು ಸಿದ್ದವಿದ್ದೇವೆ. ಈ ನಿಟ್ಟಿನಲ್ಲಿ ಬ್ಯಾಂಕ್ ಆಫ್ ಬರೋಡ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿ ನಬಾರ್ಡ್ ಅಧಿಕಾರಿಗಳು ಮತ್ತು ಹಲವಾರು ಬ್ಯಾಂಕ್‌ನವರು ಇಂಥಹ ಉತ್ತಮ ಕಾರ್ಯಗಳಿಗೆ ಆರ್ಥಿಕ ನೆರವನ್ನು ನೀಡಲು ಮುಂದೆ ಬಂದಿದ್ದಾರೆ.
ರೈತರು ಸಾಲ ಪಡೆದು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆಗಳನ್ನು ಒದಗಿಸಿಕೊಡಲು ಬ್ಯಾಂಕ್ ಅಧಿಕಾರಿಗಳು ಹಾಗೂ ಇತರರೊಂದಿಗೆ ಚರ್ಚಿಸಲು ನಾನು ಸಿದ್ದನಿದ್ದೇನೆ. ಮಹಿಳೆಯರು ಸ್ವಾವಲಂಭಿಗಳಾಗಿ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು, ಜೀವನ ಮಟ್ಟವನ್ನು ಸುಧಾರಿಸಲು ಇಂಥಹ ಯೋಜನೆಗಳ ಮೂಲಕ ತೊಡಗಿಸಿಕೊಳ್ಳುವ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ್ ಕಲ್ಪನೆಯ ಕನಸನ್ನು ಈಡೇರಿಸುವತ್ತ ಹೆಜ್ಜೆಹಾಕಬೇಕಾಗಿದೆ. ತಾಲ್ಲೂಕಿನ ಶಾಸಕನಾಗಿ ಸರ್ಕಾರ ಮತ್ತು ಬ್ಯಾಂಕುಗಳಿಂದ ದೊರೆಯುವ ಎಲ್ಲಾ ರೀತಿಯ ಸವಲತ್ತುಗಳನ್ನು ನಿಮಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಹರಳಹಳ್ಳಿ ಗ್ರಾಪಂ ಅಧ್ಯಕ್ಷ ಆರ್.ಕೆ.ಯೋಗೇಶ್, ಎನ್.ಆರ್.ಎಂ.ಎಲ್. ಜಿಲ್ಲಾ ಸಂಯೋಜಕ ಕಿಶೋರ್, ತಾಲ್ಲೂಕು ಸಂಯೋಜಕ ನಂಜುಂಡಯ್ಯ ಬ್ಯಾಂಕ್ ಆಫ್ ಬರೋಡ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಸುಶ್ಮಿತ, ಗ್ರಾ.ಪಂ. ವನಸಿರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲಕ್ಷ್ಮೀದೇವಿ ಉಪಾದ್ಯಕ್ಷೆ ವೀಣಾ, ಎಂ.ಬಿ.ಕೆ. ಶೃತಿ, ಎಲ್.ಸಿ.ಆರ್.ಪಿ. ವಾಣಿ, ಜಯಲಕ್ಷ್ಮಿ , ಪಶುಸಕಿ ಯಶಸ್ವಿನಿ, ಕೃಷಿಸಕಿ ದಿವ್ಯ ಸೇರಿದಂತೆ ನೂರಾರು ಸಾರ್ವಜನಿಕರು ಹಾಜರಿದ್ದರು.