ಜನರ ದನಿಯಾಗಿ ವೈಫಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಪತ್ರಿಕೆಗಳಿಂದಾಗಲಿ:ಸಚಿವ ದರ್ಶನಾಪೂರ
ಸಂಜೆವಾಣಿ ವಾರ್ತೆ
ಕೆಂಭಾವಿ:ಜು.೩೦:ಸಮಾಜದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾರಂಗವು ಪ್ರತಿನಿತ್ಯ ಸುದ್ದಿಗಳನ್ನು ಜನರಿಗೆ ಹಂಚುವಲ್ಲಿ ಶ್ರಮಿಸುತ್ತಿವೆ ಅಂತೇ
ಪತ್ರಕರ್ತರು ವಸ್ತು ನಿಷ್ಠ
ವರದಿಯಿಂದ ಜನರ ದನಿಯಾಗಿ, ಅಧಿಕಾರಿಗಳ ಮತ್ತು ರಾಜಕೀಯ ನಾಯಕರುಗಳ ವೈಫಲ್ಯಗಳನ್ನು ತಿದ್ದುವ ಕೆಲಸ ಪತ್ರಕರ್ತರು ಮತ್ತು ಪತ್ರಿಕೆಗಳು ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಸೋಮವಾರ ಕರ್ನಾಟಕ ಕಾರ್ಯನರತ ಪತ್ರಕರ್ತರ ಸಂಘದ ಕೆಂಭಾವಿ ಪತ್ರಕರ್ತರ ಬಳಗದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಪ್ರತಿಯೊಬ್ಬರ ಧ್ವನಿ ಎತ್ತುವ ಕೆಲಸ ಪತ್ರಿಕೆಗಳು ಮಾಡಬೇಕು. ಪತ್ರಕೆಗಳು ಸಿಬಿಐ ಯಂತೆ ತಮ್ಮ ಕೆಲಸದಲ್ಲಿ ನಿಷ್ಠೆ ತೋರಿಸಿ ಯಾವುದೆ ವ್ಯಕ್ತಿಯ ತಪ್ಪುಗಳನ್ನು ಜನತೆಯ ಮುಂದೆ ಇಟ್ಟಾಗ ಮಾತ್ರ ಪತ್ರಿಕೆ ಧರ್ಮ ಉಳಿಯಲು ಸಾಧ್ಯ ಎಂದರು. ದಿನಬೆಳಗಾದರೆ ಪತ್ರಿಕೆಗಳನನುಓದುವ ಸಂಖ್ಯೆಗೆ ಏನೂ ಕೊರತೆ ಇಲ್ಲ ಸಾಮಾಜಿಕ ಜಾಲತಾಣಗಳು ಪತ್ರಕರ್ತರ ಸುದ್ದಿಗೆ ಮೂಲಾಧರವಾಗಬಾರದು ವಸ್ತುನಿಷ್ಠ ವರದಿ, ಸತ್ಯಾಸತ್ಯತೆ ವರದಿಗಳೆ ಪ್ರತಿಯೊಬ್ಬ ಪತ್ರಕರ್ತನ ಜೀವಾಳವಾಗಬೇಕು ಎಂದು ಕಿವಿ ಮಾತು ಹೇಳಿದರು. ಪಟ್ಟಣದಲ್ಲಿ ಭವ್ಯವಾದ ಪತ್ರಿಕಾ ಭವನ ನಿರ್ಮಾಣ ಮಾಡಲು ಪುರಸಭೆಗೆ ಸೂಕ್ತ ಸ್ಥಳ ಒದಗಿಸುವಂತೆ ಸೂಚನೆ ನೀಡಿದ್ದು ಸ್ಥಳ ಸಿಕ್ಕ ನಂತರ ಅನುದಾನ ಒದಗಿಸಿ ಭವನ ನಿಮಾಣ ಮಾಡಲಾಗುವುದು ಎಂದು ವತಿಯಿಂದ ಭರವಸೆ ನೀಡಿದರು. ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ ಪ್ರಸ್ತಾವಿಕ ಮಾತನಡಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಭೀಮಾಶಂಕರ ಜೋಷಿ ಅವರು ಕನ್ನಡ ಪತ್ರಿಕೆಗಳಲ್ಲಿ ಭಾಷಾ ಪ್ರೌಢಿಮೆ ಕುರಿತು ವಿಶೇಷ ಉಪನ್ಯಾಸ ನೀಡಿ ಪತ್ರಕತರು ತಮ್ಮ ಬರವಣಿಗೆಯಲ್ಲಿ ಕನ್ನಡ ಭಾಷೆಯ ಪ್ರೌಢಿಮೆ ಮತ್ತು ಹಿರಿಮೆಯನ್ನು ಮೆರೆಯಬೇಕು. ಆದಷ್ಟು ಉತ್ತರ ಕರ್ನಾಟಕ ಭಾಗದ ದಿನಪತ್ರಿಕೆಗಳಲ್ಲಿ ನಮ್ಮ ನಮ್ಮ ಉತ್ತರ ಕರ್ನಾಟಕದ ಭಾಷೆಗಳನ್ನೆ ಉಪಯೋಗಿಸಿ ಮುಂದಿನ ಪೀಳಿಗೆಗೆ ಅದರ ಜ್ಞಾನವನ್ನು ಉಳಿಸಿ ಬೆಳೆಸುವಂತೆ ಮಾಡಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತರೂ ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರದ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಸದಾನಂದ ಪೆರ್ಲ ವಿಶೇಷ ಉಪನ್ಯಾಸ ನೀಡಿ ಪತ್ರಕರ್ತರ ಹಿತಚಿಂತನೆಗಾಗಿ ಪ್ರತಿ ವರ್ಷ ಜುಲೈ ತಿಂಗಳಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗುತ್ತದೆ. ೧೮೪೩ ರಲ್ಲಿ ಪತ್ರಿಕೋದ್ಯಮ ಉದಯಿಸಿ ಮಂಗಳೂರಿನಿAದ ಕನ್ನಡ ಸಮಾಚಾರ ಪತ್ರಿಕೆ ಹೊರತರುವ ಮೂಲಕ ಪತ್ರಿಕೋದ್ಯಮ ಪ್ರಾರಂಭವಾಯಿತು. ಕನ್ನಡ ಭಾಷೆಯನ್ನು ಕಟ್ಟಲಿಕ್ಕೆ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲಿಕ್ಕೆ ಪತ್ರಿಕೆಗಳ ಕೊಡುಗೆ ಅಪಾರವಾಗಿದೆ. ಇಂದಿನ ದಿನಮಾನಗಳಲ್ಲಿ ಟಿವಿ ಮಾಧ್ಯಮಗಳು ಬಂದರೂ ಪತ್ರಿಕೆಗಳ ಸಂಖ್ಯೆ ಶ. ೧೫ ರಷ್ಟು ಹೆಚ್ಚಾಗಿರುವುದು ಪತ್ರಿಕೆಗಳ ಮೇಲಿನ ಜನರ ಅಭಿಮಾನ ತೋರಿಸಿ ಕೊಡುತ್ತದೆ. ಮಾಧ್ಯಮ ನೀತಿ ಮತ್ತು ಶಾಸಕಾಂಗ ನೀತಿಯನ್ನು ತಿಳಿದು ವರದಿ ಮಡುವುದು ಪ್ರತಿಯೊಬ್ಬ ಪತ್ರಕರ್ತನ ಕರ್ತವ್ಯವಾಗಿದೆ ಎಂದು ಹೇಳಿದರು.
ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ತಹಸೀಲ್ದಾರ ಕೆ. ವಿಜಯಕುಮಾರ, ಉಪ ತಹಸೀಲ್ದಾರ ಪ್ರವೀಣಕುಮಾರ ಸಜ್ಜನ, ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಕ್ಯಾಳ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಮುಖ್ಯಾಧಿಕಾರಿ ಮಹ್ಮದ ಯುಸೂಫ್, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಪುರಸಭೆ ಸದಸ್ಯರಾದ ಶ್ರೀಧರ ದೇಶಪಾಂಡೆ, ರವಿ ಸೊನ್ನದ, ಆರೀಫ್ ಖಾಜಿ, ಎಸ್. ಎಮ್. ಬಿರಾದಾರ, ಶರಣಬಸ್ಸು ಡಿಗ್ಗಾವಿ, ಅರುಣೋದಯ ಸೊನ್ನದ, ಶ್ರೀನಿವಾಸ ಜಾಲವಾದಿ, ಮಹಿಪಾಲರೆಡ್ಡಿ ಡಿಗ್ಗಾವಿ, ಎನ್. ಎಸ್. ಕುಲಕರ್ಣಿ, ಚಂದ್ರಮೌಳಿ ಮಾಲಿಪಾಟೀಲ, ಶ್ರೀನಿವಾಸ ಮಾಲಿಪಾಟೀಲ ಯಾಳಗಿ ಇದ್ದರು. ಡಾ. ಯಂಕನಗೌಡ ನಿರೂಪಣೆ ಮಾಡಿದರು, ಡಿ. ಸಿ. ಪಾಟೀಲ ಸ್ವಾಗತಿಸಿದರು, ವೀರೇಶರೆಡ್ಡಿ ಯಾಳಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಾಧನೆಗೈದ ಜಿಲ್ಲೆಯ ಆರು ತಾಲೂಕಿನ ಪತ್ರಕರ್ತರಿಗೆ ಹಲವು ಗಣ್ಯರ ಸ್ಮರಣಾರ್ಥ ಪ್ರಶಸ್ತಿ ವಿತರಣೆ.
ಖಜಾ ಕಲಿಮುದ್ದಿನ ಫರೀದಿ ಸುರಪುರ. (ದಿ. ರೇವಣಸಿದ್ದಪ್ಪ ಸಾಹು ಸೊನ್ನದ ಸ್ಮರಣಾರ್ಥ), ಶ್ರೀ ಪವನ ದೇಶಪಾಂಡೆ, ಹುಣಸಗಿ. (ದಿ. ಶ್ರೀಮತಿ ಗಂಗಾಬಾಯಿ ಶಾಂತಗೌಡ ಪೊಲೀಸ್ ಪಾಟೀಲ ಸ್ಮರಣಾರ್ಥ), ಟಿ ನಾಗೇಂದ್ರ ಶಹಾಪೂರ. (ದಿ. ಶ್ರೀಮತಿ ಲಕ್ಷ್ಮೀಬಾಯಿ ದೇಶಪಾಂಡೆ ಸ್ಮರಣಾರ್ಥ), ಕುಮಾರಸ್ವಾಮಿ ಕಲಾಲ ಗುರುಮಿಟಕಲ್. ( ದಿ. ಶ್ರೀ ವಾಮನಾಚಾರ್ಯ ಪುರೋಹಿತ ಸ್ವಾತಂತ್ರ ಹೋರಾಟಗಾರರು ಸ್ಮರಣಾರ್ಥ), ಮಲ್ಲನಗೌಡ ಪಾಟೀಲ, ಯಾದಗಿರಿ. (ದಿ. ಶ್ರೀ ಖೈರಾತಹುಸೇನ ಖಾಜಿ ಸ್ಮರಣಾರ್ಥ), ಶ್ರೀ ಮಲ್ಲಿಕಾರ್ಜುನ ಕಾಡಮನೋರ್ ವಡಗೇರಾ. (ದಿ. ಶ್ರೀ ಶಾಮರಾವ ಕುಲಕರ್ಣಿ ಸ್ಮರಣಾರ್ಥ.) ಪ್ರಶ್ತಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕು. ಅನಘಾ ಅವನ ಕುಲಕರ್ಣಿ ಅವರ ಭರತನಾಟ್ಯ ಮತ್ತು ಖ್ಯಾತ ಚಿತ್ರ ಕಲವಿದ ಹಳ್ಳೇರಾವ ಕುಲಕರ್ಣಿ ಮತ್ತು ಸಂಗೀತಗಾರ ಬಸವರಾಜ ಭಂಟನೂರ ಅವರ ಕುಂಚಗಾಯನ ಕಾರ್ಯಕ್ರಮ ನೆರೆದಿದ್ದ ಗಣ್ಯರನ್ನು ಮತ್ತು ಜನರನ್ನು ಮಂತ್ರಮುಗ್ಧರನ್ನಾಗಿಸಿತು.