ಶಿವಮೊಗ್ಗ ಜಿಪಂ ಸಿಇಓ ಖಡಕ್ ಆದೇಶ : ಸರ್ಕಾರಿ ಶಾಲೆ ಮಕ್ಕಳಿಗೆ ಮತ್ತೆ ಆರಂಭವಾದ ಬಿಸಿಯೂಟ!
ಶಿವಮೊಗ್ಗ, ಜು. 30; ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪದ ಮೌಲಾನ ಆಜಾದ್ ಮಾದರಿ ಸರ್ಕಾರಿ ಶಾಲೆ ಮಕ್ಕಳಿಗೆ ದಿಢೀರ್ ಸ್ಥಗಿತಗೊಳಿಸಲಾಗಿದ್ದ ಬಿಸಿಯೂಟ ಸೌಲಭ್ಯವನ್ನು ಮತ್ತೆ ಪುನರಾ ರಂಭಿಸಲಾಗಿದೆ..!ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಎನ್. ಹೇಮಂತ್ ಅವರು, ಸಕಾರಣವಿಲ್ಲದೆ ಮಕ್ಕಳಿಗೆ ಬಿಸಿಯೂಟ ಸ್ಥಗಿತಗೊಳಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದರು. ಸರ್ಕಾರದ ಮಾರ್ಗದರ್ಶನಗಳಿಗೆ ಅನುಗುಣವಾಗಿ, ತತ್’ಕ್ಷಣವೇ ಮಕ್ಕಳಿಗೆ ಬಿಸಿಯೂಟ ವಿತರಣೆ ಆರಂಭಿಸುವಂತೆ ಆದೇಶ ಹೊರಡಿಸಿದ್ದರು.ಬಿಸಿಯೂಟ ವಿತರಣೆಗೆ ಅಡ್ಡಿಯಾದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಸಿಇಓ ಆದೇಶದ ಬೆನ್ನಲ್ಲೇ, ಕಳೆದ ಶನಿವಾರದಿಂದ ಸದರಿ ಶಾಲಾ ಮಕ್ಕಳಿಗೆ ಸಮೀಪದ ಸರ್ಕಾರಿ ಶಾಲೆಯಿಂದ ಬಿಸಿಯೂಟ ವಿತರಣೆ ಆರಂಭಿಸಲಾಗಿದೆ.ಮೌಲಾನಾ ಆಜಾದ್ ಮಾದರಿ ಸರ್ಕಾರಿ ಶಾಲೆಯು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಣೆ ಮಾಡುತ್ತಿದೆ. ಸೋಮಿನಕೊಪ್ಪದಲ್ಲಿ ಕಳೆದ ಒಂದೂವರೆ ವರ್ಷದಿಂದ ಕಾರ್ಯನಿರ್ವಹಣೆ ಮಾಡುತ್ತಿದೆ. 6 ರಿಂದ 10 ನೇ ತರಗತಿಯವರೆಗೆ ಸುಮಾರು 130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.ಶಾಲೆ ಆರಂಭದ ದಿನದಿಂದಲೂ ಮಕ್ಕಳಿಗೆ ಬಿಸಿಯೂಟ ಸೌಲಭ್ಯ ಸೇರಿದಂತೆ ಇತರೆ ಸರ್ಕಾರಿ ಶಾಲೆಗಳ ರೀತಿಯಲ್ಲಿ ಯಾವುದೇ ಸೌಲಭ್ಯ ಕಲ್ಪಿಸುತ್ತಿರಲಿಲ್ಲ. ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಶಾಲೆಯ ಮಕ್ಕಳು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಅರ್ಪಿಸಿದ್ದರು.ಬಿಸಿಯೂಟ ಸೇರಿದಂತೆ ಯಾವುದೇ ಪೌಷ್ಠಿಕಾಂಶ ಆಹಾರ ನೀಡುತ್ತಿಲ್ಲ. ಶಿಕ್ಷಕರ ಕೊರತೆಯಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಕಂಪ್ಯೂಟರ್ ಶಿಕ್ಷಣ ಸೇರಿದಂತೆ, ಆಟೋಟ ಚಟುವಟಿಕೆಯಿಲ್ಲ’ ಎಂಬುವುದು ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ವಿದ್ಯಾರ್ಥಿಗಳು ಸಚಿವರಿಗೆ ಆಗ್ರಹಿಸಿದ್ದರು.ವಿದ್ಯಾರ್ಥಿಗಳ ಅಹವಾಲು ಆಲಿಸಿದ್ದ ಸಚಿವರು, ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಲಮಿತಿಯೊಳಗೆ ತಮ್ಮ ಇಲಾಖೆಯಿಂದಲೇ ಬಿಸಿಯೂಟ ಹಾಗೂ ಪೌಷ್ಠಿಕ ಆಹಾರ ಪೂರೈಕೆಗೆ ಆದೇಶ ಹೊರಡಿಸಿದ್ದರು. ಶಿಕ್ಷಕರ ಕೊರತೆ ಇತರೆ ಸಮಸ್ಯೆಗಳ ಕುರಿತಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಿ ಕೊಡುವುದಾಗಿ ಭರವಸೆ ನೀಡಿದ್ದರು.ಸಚಿವರ ಸೂಚನೆ ಬೆನ್ನಲ್ಲೇ, ಸಮೀಪದ ಸರ್ಕಾರಿ ಶಾಲೆಯಿಂದ ಬಿಸಿಯೂಟ ತಯಾರಿಸಿ ಸದರಿ ಶಾಲೆಯ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿತ್ತು. ಆದರೆ ಪೌಷ್ಠಿಕ ಆಹಾರ ವಿತರಣೆ ಮಾಡುತ್ತಿರಲಿಲ್ಲ. ಈ ನಡುವೆ ಕೆಲ ದಿನಗಳಲ್ಲಿಯೇ ಬಿಸಿಯೂಟ ನೀಡುವುದನ್ನು ಕೂಡ ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಇದು ಶಾಲಾ ಮಕ್ಕಳಲ್ಲಿ ತೀವ್ರ ನಿರಾಸೆ ಮೂಡಿಸಿತ್ತು.‘ಮೌಲಾನಾ ಆಜಾದ್ ಶಾಲೆ ಮಕ್ಕಳಿಗೆ ಸಮೀಪದ ಸರ್ಕಾರಿ ಶಾಲೆಗಳಿಂದ ಬಿಸಿಯೂಟ ವಿತರಣೆ ಮಾಡುವ ಕುರಿತಂತೆ ಸರ್ಕಾರದ ಆದೇಶವಿದೆ. ಅದರಂತೆ ಸೋಮಿನಕೊಪ್ಪದ ಮೌಲಾನಾ ಆಜಾದ್ ಶಾಲೆ ಮಕ್ಕಳಿಗೆ ಸಮೀಪದ ಸರ್ಕಾರಿ ಶಾಲೆಯಿಂದ ಬಿಸಿಯೂಟ ವಿತರಣೆ ಮಾಡಲಾಗುತ್ತಿದೆ. ಈ ಸಂಬಂಧ ಶಾಲಾಭಿವೃದ್ದಿ ಸಮಿತಿ ಪ್ರಮುಖರೊಂದಿಗೆ ಚರ್ಚೆ ನಡೆಸಲಾಗಿದೆ’ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಹೇಮಂತ್ ಅವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.
