ದಲಿತ ಸಂಘಟನೆಗಳ ನಿಷೇಧ ಹೇಳಿಕೆ; ಆರ್ ಅಶೋಕ್ ವಿರುದ್ದ ಪ್ರತಿಭಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ, ಜು.29; ದಲಿತ ಸಂಘರ್ಷ ಸಮಿತಿ ಸೇರಿದಂತೆ ಅಂಗಸಂಸ್ಥೆಗಳು, ದಲಿತ ಸಂಘಟನೆಗಳನ್ನುನಿಷೇಧಿಸಬೇಕೆಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಹೇಳಿಕೆ ನೀಡಿದ್ದಾರೆಂದು ‍‍ಆರೋಪಿಸಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್‌ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು. ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರ ಪುತ್ಥಳಿ ಬಳಿ ಸಂಘಟನೆ ಮುಖಂಡರ ನೇತೃತ್ವದಲ್ಲಿ ವೃತ್ತದ ರಸ್ತೆಯಲ್ಲೇ ಕುಳಿತು, ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟಿಸಿದ ಕಾರ್ಯಕರ್ತರು, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡರು, ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ ದಲಿತ ಸಂಘರ್ಷ ಸಮಿತಿ, ಅಂಗ ಸಂಸ್ಥೆಗಳನ್ನು ನಿಷೇಧಿಸಬೇಕೆಂಬ ಹೇಳಿಕೆ ನೀಡಿದ್ದನ್ನು ಅತ್ಯಂತ ತೀವ್ರವಾಗಿ ಖಂಡಿಸುತ್ತೇವೆ. ತಕ್ಷಣವೇ ಆರ್. ಅಶೋಕ ತಮ್ಮ ಹೇಳಿಕೆ ಹಿಂಪಡೆಯಬೇಕು. ಬಹಿರಂಗವಾಗಿ ದಲಿತ ಸಂಘಟನೆಗಳಲ್ಲಿ ಕ್ಷಮೆಯಾಚಿಸಬೇಕು ಎಂದು ತಾಕೀತು ಮಾಡಿದರು. ದಲಿತರು, ದಮನಿತರು, ಶೋಷಿತರು, ತುಳಿತಕ್ಕೊಳಗಾದವರ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ, ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸಿಕೊಂಡು ಬಂದಿರುವ ದಲಿತ ಸಂಘರ್ಷ ಸಮಿತಿಗಳು ಹಾಗೂ ಅಂಗ ಸಂಸ್ಥೆಗಳನ್ನು ನಿಷೇಧಿಸಬೇಕೆಂಬ ಹೇಳಿಕೆ ನೀಡಿದ್ದು ಜವಾಬ್ಧಾರಿಯುತ ವಿಪಕ್ಷ ಸ್ಥಾನದಲ್ಲಿ ಕುಳಿತಿರುವ ಆರ್.ಅಶೋಕ್‌ಗೆ ಶೋಭೆ ತರದು. ಇಂತಹ ಹೇಳಿಕೆಯನ್ನು ತಕ್ಷಣ ಹಿಂಪಡೆದು, ಕ್ಷಮೆ ಕೇಳಲಿ ಎಂದು ಅವರು ಹೇಳಿದರು. ವಿಪಕ್ಷ ನಾಯಕ ಆರ್.ಅಶೋಕ ತಮ್ಮ ಹೇಳಿಕೆ ಹಿಂಪಡೆದು, ಕ್ಷಮೆ ಕೇಳದಿದ್ದರೆ ರಾಜ್ಯವ್ಯಾಪಿ ಆರ್.ಅಶೋಕ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಆರ್.ಅಶೋಕ ಭಾಗವಹಿಸುವ ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕುವ, ಅಶೋಕ್‌ಗೆ ಘೇರಾವ್ ಮಾಡುವ ಮೂಲಕ ದಲಿತ ಸಂಘಟನೆಗಳ ಕ್ಷಮೆ ಕೇಳುವಂತೆ ಒತ್ತಾಯಿಸುವುದಾಗಿ ಅವರು ಎಚ್ಚರಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ನಿಂಗಪ್ಪ ಬನ್ನಿಹಟ್ಟಿ, ವಿ.ದುಷ್ಯಂತ್, ಶಿವರಾಜ, ಹರೀಶ, ಕೆಟಿಜೆ ನಗರ ಮಹಾಂತೇಶ, ವಿಕಾಸ್, ರಘು ಬಿಸಲೇರಿ ಇತರರು ಇದ್ದರು. ಇದಕ್ಕೂ ಮುನ್ನ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನಾಕಾರರು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಪ್ರತಿಕೃತಿ ದಹಿಸಲು ಪೊಲೀಸ್ ಇಲಾಖೆ ಅನುಮತಿ ನೀಡದ ಹಿನ್ನೆಲೆಯಲ್ಲಿ ರಸ್ತೆ ಮಧ್ಯ ಕುಳಿತು ಪ್ರತಿಭಟನೆ ನಡೆಸಲಾಯಿತು.
