ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚು
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೩೦: ಸುಶಿಕ್ಷಿತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಜವಾಬ್ದಾರಿ ಮುಖ್ಯವಾಗಿದೆ ಎಂದು ಉಪನಿರ್ದೇಶಕರಾದ (ಆಡಳಿತ) ಎಂ.ಆರ್ ಮಂಜುನಾಥ್ ಹೇಳಿದರು. ನಗರದ ಡಯಟ್‌ನಲ್ಲಿ ಎಸ್.ಎಸ್.ಕೆ (ಸಮಗ್ರ ಶಿಕ್ಷಣ ಕರ್ನಾಟಕ) ಮತ್ತು ಡಿ.ಎಸ್.ಇ.ಆರ್.ಟಿ ಬೆಂಗಳೂರು ವತಿಯಿಂದ ೨೦೨೨-೨೩ನೇ ಸಾಲಿಗೆ ನೂತನವಾಗಿ ನೇಮಕವಾಗಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ(ಜಿ.ಪಿ.ಟಿ)ರಿಗೆ ಸೋಮವಾರ ಆಯೋಜಿಸಿದ್ದ ಬುನಾದಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಮಾನವ ಸಂಪತ್ತು ದೇಶದ ಸಂಪತ್ತು. ಮಾನವ ಸಂಪತ್ತು ದೇಶದ ಅಭಿವೃದ್ಧಿಗೆ ಸರಿಯಾದ ರೀತಿಯಲ್ಲಿ ಬಳಕೆಯಾಗಲು ಶಿಕ್ಷಕರು  ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಬೇಕು. ಮಕ್ಕಳು ಶಿಕ್ಷಕರನ್ನು ಅನುಕರಣೆ ಮಾಡುವುದರಿಂದ ಶಿಕ್ಷಕರಿಗೆ ಶಿಸ್ತು, ಸಮಯಪಾಲನೆ, ಚಾರಿತ್ರö್ಯ ಮುಖ್ಯ. ಪ್ರತಿ ವ್ಯಕ್ತಿಗೆ ಶಿಕ್ಷಣ ದಾರಿದೀಪವಾಗಿದೆ. ನಿಷ್ಠೆಯಿಂದ ಕೆಲಸ ಮಾಡುವುದರ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಭವಿಷ್ಯದ ಸತ್ಪçಜೆಗಳನ್ನಾಗಿ ರೂಪಿಸಬೇಕು  ಎಂದು ತಿಳಿಸಿದರು.  ಪ್ರಾಚಾರ್ಯ ಎಂ.ನಾಸಿರುದ್ದೀನ್ ಮಾತನಾಡಿ, ಶಿಕ್ಷಕರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ತರಬೇತಿಯಲ್ಲಿ ಕಲಿತ, ಚರ್ಚಿಸಿದ ಅಂಶಗಳನ್ನು ತರಗತಿ ಕೋಣೆಯಲ್ಲಿ ಅನುಷ್ಠಾನ ಮಾಡಬೇಕು. ಉತ್ತಮ ಕೆಲಸದಿಂದ ಸಮಾಜದಲ್ಲಿ ಗೌರವ ಲಭಿಸುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.ನೋಡಲ್ ಅಧಿಕಾರಿ ಎಸ್.ಸಿ ಪ್ರಸಾದ್ ಮಾತನಾಡಿ, ಶಿಕ್ಷಕರಿಗೆ ವೃತ್ತಿಯಲ್ಲಿ ಪ್ರಾವೀಣ್ಯತೆ ಪಡೆಯಲು ತರಬೇತಿಗಳು ಪೂರಕವಾಗಿದ್ದು ಹೊಸದಾಗಿ ನೇಮಕವಾಗಿರುವ ಜಿಲ್ಲೆಯ ೨೬೩ ಶಿಕ್ಷಕರಿಗೆ ಬುನಾದಿ ತರಬೇತಿ ನೀಡಲಾಗುತ್ತದೆ. ಶಿಕ್ಷಕರ ಶಿಕ್ಷಣ, ಆರಂಭಿಕ ಬಾಲ್ಯ ಮತ್ತು ಶಿಕ್ಷಣ, ರಚನಾವಾದಿ ತರಗತಿ, ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ವಿಷಯ ಕುರಿತು ತgಬೇತಿ ನೀಡಲಾಗುವುದು ಎಂದು ತಿಳಿಸಿದರು. ಡಿ.ಎಸ್.ಇ.ಆರ್.ಟಿ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ್, ಸಿ.ಟಿ.ಇ ಪ್ರವಾಚಕರಾದ ಹನುಮಂತರಾಯ, ಡಿ.ವೈ.ಪಿ.ಸಿ ವೆಂಕಟೇಶಪ್ಪ, ತರಬೇತಿ ಶಿಬಿರದ ನಿರ್ದೇಶಕ ಯು.ಸಿದ್ದೇಶಿ, ಸಹಾಯಕ ನಿರ್ದೇಶಕ ಎಸ್.ಬಸವರಾಜು, ಹಿರಿಯ ಉಪನ್ಯಾಸಕ ಎಸ್.ಜ್ಞಾನೇಶ್ವರ, ಉಪನ್ಯಾಸಕರಾದ ಕೆ.ಜಿ.ಪ್ರಶಾಂತ್, ಶಿವಲೀಲಾ, ಸಂಪನ್ಮೂಲ ವ್ಯಕ್ತಿಗಳಾದ ತಿಪ್ಪೇರುದ್ರಪ್ಪ, ಶಿವಣ್ಣ, ಖಲಂದರ್, ತಿಮ್ಮರಾಜು ತಾಂತ್ರಿಕ ಸಹಾಯಕರಾದ ಲೋಕೇಶ್, ಲಿಂಗರಾಜು ಮತ್ತು ಶಿಕ್ಷಕರು ಇದ್ದರು.