ಎಸ್.ಆರ್.ಕೋಟೆ ಶಾಲೆಯಲ್ಲಿ ಸಂಭ್ರಮ-ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.29: ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವ ವಿನೂತನ ಕಾರ್ಯಕ್ರಮ ಸಂಭ್ರಮ ಶನಿವಾರ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂಭ್ರಮ ಶನಿವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳು ತಯಾರಿಸಿದ ಗೃಹ ಅಲಂಕಾರ ವಸ್ತುಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು ಮಕ್ಕಳಲ್ಲಿ ನಾಗರಿಕ ಪ್ರಜ್ಞೆ ಬೆಳೆಸುವ ಸಲುವಾಗಿ ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್ ರಹಿತವಾಗಿ ಬರಮಾಡಿಕೊಂಡು ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ ಸೂಚಿಸಿರುವ ವಿವಿಧ 10 ವಿಷಗಳಲ್ಲಿ ಅವರನ್ನು ತೊಡಗಿಸಿ ಕಲಿಯಲು ಆಸಕ್ತಿ ಬೆಳೆಸುವ ವಿನೂತನ ಕಾರ್ಯಕ್ರಮ ಇದಾಗಿದೆ.
ಆರೋಗ್ಯಕರ ಜೀವನ ಶೈಲಿ,ವಿಕಲಚೇತನ ಉಳ್ಳ ಮಕ್ಕಳೊಂದಿಗೆ ಸಂವಾದ,ಲಿಂಗ ಸಮಾನತೆಗೆ ಪ್ರೋತ್ಸಾಹ,ಮಾದಕ ವಸ್ತುಗಳ ದುರ್ಬಳಕೆ ತಡೆಗಟ್ಟುವಿಕೆ,ಪೌಷ್ಟಿಕ ಸ್ವಾಸ್ಥ್ಯ ಮತ್ತು ನೈರ್ಮಲೀಕರಣ,ರಸ್ತೆ ಸುರಕ್ಷತೆ,ಸಾರ್ವಜನಿಕ ಸೌಕರ್ಯ ಮತ್ತು ನನ್ನ ಜವಾಬ್ದಾರಿ,ಹಿಂಸೆ ಅಪರಾಧ ಅಪಘಾತ ಸಂದರ್ಭದಲ್ಲಿ ರಕ್ಷಣೆ ಸಹಾಯ,ಮಾಧ್ಯಮ ಹಾಗೂ ಅಂತರ್ಜಾಲ ಸದ್ಬಳಕೆ,ಸಾರ್ವಜನಿಕ ನೈರ್ಮಲ್ಯ ಹೀಗೆ ಹತ್ತು ಹಲವು ವಿಷಯಗಳ ಅರಿವು ಮೂಡಿಸುವುದು.
ಆ ಮೂಲಕ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವುದು ಈ ಯೋಜನೆ ಪ್ರಮುಖ ಉದ್ದೇಶವಾಗಿದೆ. ಮಕ್ಕಳು ಸಂತಸದಿಂದ ಮತ್ತು ಉಲ್ಲಾಸದಿಂದ ಕಲಿಯಲು ಪ್ರೇರೇಪಿಸಿ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳನ್ನಾಗಿ ತಯಾರಿ ಮಾಡಬೇಕಾಗಿದೆ ಎಂದು ಹೇಳಿದರು. ಶಾಲಾ ಶಿಕ್ಷಕವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.