ಗುಣಮಟ್ಟದ ಶಿಕ್ಷಣ ನೀಡಿದರೆ ಅತ್ಯುತ್ತಮ ಫಲಿತಾಂಶ ಸಾಧ್ಯ: ಬಸವರಾಜ್ ಕೌಲಗಿ
ವಿಜಯಪುರ,ಸೆ.29:ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಅತ್ಯುತ್ತಮವಾದ ಫಲಿತಾಂಶ ದೊರೆಯುತ್ತದೆ. ಅತ್ಯುತ್ತಮ ಫಲಿತಾಂಶವು ಸಮಾಜದ ವ್ಯವಸ್ಥೆಯನ್ನು ಮತ್ತಷ್ಟು ಅತ್ಯುತ್ತಮಗೊಳಿಸುವುದಕ್ಕೆ ಸಾಧ್ಯವಾಗಿಸುತ್ತದೆ. ಆ ನಿಟ್ಟಿನಲ್ಲಿ ಸದಾ ಉತ್ತಮ ಫಲಿತಾಂಶವನ್ನು ನೀಡುವುದರ ಮೂಲಕವೇ ಜನ ಮಾನಸದಲ್ಲಿ ಉಳಿಸಿದಿರುವ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವಕಾಲೇಜು ಎನ್‍ಇಇಟಿ (ನೀಟ್) ಪರೀಕ್ಷೆಯಲ್ಲಿ ತನ್ನ ಸಾಧನೆಯ ಪಥವನ್ನು ವಿಸ್ತಿರಿಸಿಕೊಂಡಿದ್ದು; 2024 ನೇ ಸಾಲಿನಲ್ಲಿ 109 ವೈದ್ಯಕೀಯ ಸೀಟುಗಳನ್ನು ಪಡೆದುಕೊಳ್ಳುವ ಮೂಲಕ ಮತ್ತೊಮ್ಮೆ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ ಒದಗಿಸಿದೆ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷÀ ಬಸವರಾಜ್ ಕೌಲಗಿ ತಿಳಿಸಿದರು.
ನೀಟ್ ಪರೀಕ್ಷೆಯ ಸೀಟು ಹಂಚಿಕೆಯ ಕೊನೆಯ ಸುತ್ತಿನ ಫಲಿತಾಂಶ ಪ್ರಕಟವಾದ ಬಳಿಕ ಮಾತನಾಡಿದ ಅವರು, ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಪ್ರಾರಂಭಗೊಂಡಾಗಿನಿಂದ ಪ್ರಗತಿ ಪಥದತ್ತ ಹೆಜ್ಜೆ ಹಾಕಿದೆ. ಅದರಲ್ಲೂ ವೈದ್ಯಕೀಯ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ನಮ್ಮ ಸಂಸ್ಥೆ ಒಂದು ಹೆಜ್ಜೆ ಮುಂದಿಡುತ್ತಿದೆ. ಈ ಕಾರಣದಿಂದಾಗಿ ಪ್ರತಿ ವರ್ಷವೂ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯನ್ನುಅತ್ಯುತ್ತಮ ಬೋಧಕ ವರ್ಗದಿಂದ ಕೊಡಿಸುವ ಮೂಲಕ ಸೀಟುಗಳನ್ನು ಪಡೆಯುವಲ್ಲಿ ಶತಕದ ಗಡಿ ದಾಟುತ್ತಿದೆ. ಈ ಬಾರಿಯೂ ಸಹ 109 ಸೀಟುಗಳನ್ನು ಪಡೆದುಕೊಳ್ಳುವ ಮೂಲಕ ಎಕ್ಸಲೆಂಟ್ ಮತ್ತೊಮ್ಮೆ ತನ್ನ ಸಾಮಥ್ರ್ಯ ಸಾಬೀತು ಮಾಡಿದೆ. ಒಟ್ಟು 109 ಸೀಟುಗಳಲ್ಲಿ 59 ಎಂಬಿಬಿಎಸ್ ಸೀಟುಗಳಿದ್ದು ಅದರಲ್ಲಿ 36 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹಾಗೂ 23 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಎಕ್ಸಲೆಂಟ್ ವಿದ್ಯಾರ್ಥಿಗಳು ಯಶಸ್ವಿಯಾದರೆ ಇನ್ನುಳಿದಂತೆ ಬಿಡಿಎಸ್, ಬಿಎಎಮ್‍ಎಸ್, ಬಿಎಚ್‍ಎಮ್‍ಎಸ್ ಸೇರಿ 50 ಸೀಟುಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ಫಲಿತಾಂಶದಲ್ಲಿ ರಾಜ್ಯದಲ್ಲಿ ಒಟ್ಟು 23 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದು ಅದರಲ್ಲಿ 14 ಕಾಲೇಜುಗಳಲ್ಲಿ 36 ಜನ ಎಕ್ಸಲೆಂಟ್ ವಿದ್ಯಾರ್ಥಿಗಳು ಸೀಟನ್ನು ಪಡೆದುಕೊಂಡಿದ್ದಾರೆ. ಅದರಲ್ಲೂ ಓರ್ವ ವಿದ್ಯಾರ್ಥಿ ಪ್ರತಿಷ್ಠಿತ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ (ಎಐಐಎಮ್‍ಎಸ್) ನಲ್ಲಿ ಸೀಟು ಪಡೆದುಕೊಂಡಿದ್ದು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ. ಅದರಂತೆ ಅತೀ ಹೆಚ್ಚು ಪೈಪೋಟಿಯಾಗುವ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ 4, ಹುಬ್ಬಳ್ಳಿಯ ಕಿಮ್ಸ್‍ನಲ್ಲಿ 5, ಬೆಳಗಾವಿಯ ಬಿಮ್ಸ್‍ನಲ್ಲಿ 4, ಗದಗ ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ 5, ಗುಲ್ಬರ್ಗಾ ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ 3, ಕೋಲಾರ್ ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ 4 ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸೀಟು ಪಡೆದುಕೊಂಡಿದ್ದು ವಿಶೇಷವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫಲಿತಾಂಶವನ್ನು ನೀಡುವ ಮೂಲಕ ಈ ದೇಶದ ಸೇವೆಗೆ ಸಮರ್ಥ ವೈದ್ಯರನ್ನು ಕೊಡುಗೆಯಾಗಿ ನೀಡುವುದಕ್ಕೆ ಸತತ ಪ್ರಯತ್ನ ಮಾಡುತ್ತೇವೆಂದು ಹೇಳುವುದರೊಂದಿಗೆ ಸೀಟು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಫಲಿತಾಂಶದ ಕುರಿತು ಹರ್ಷ ವ್ಯಕ್ತಪಡಿಸಿದ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಈ ಸಾಧನೆಯ ಶ್ರೇಯಸ್ಸು ನಮ್ಮ ಆಡಳಿತ ಮಂಡಳಿಗೂ ಹಾಗೂ ಎಲ್ಲ ಬೋಧಕ ಬೋಧಕೇತರ ವರ್ಗಕ್ಕೆ ಸಲ್ಲಬೇಕು. ಸರ್ವರ ಅವಿರತ ಪ್ರಯತ್ನ ಹಾಗೂ ಬೆಂಬಲದ ಫಲದಿಂದ ನಮಗೆ ಇಷ್ಟು ಸೀಟುಗಳು ದೊರೆತಿವೆ ಎಂದು ಹೇಳಿದರು.