ಪೌಷ್ಟಿಕ ಆಹಾರ ಶಿಬಿರ
ಚನ್ನಮ್ಮನ ಕಿತ್ತೂರು,ಸೆ.29; ಆರೋಗ್ಯದಲ್ಲಿ ದುಷ್ಪರಿಣಾಮ ಬೀರುವಂತಹ ಆಹಾರ ಪದಾರ್ಥಗಳ ಮೇಲೆ ನಿಯಂತ್ರಣವಿರಬೇಕೆಂದು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಛಲವಾದಿ ಹೇಳಿದರು.
ಸಮೀಪದ ಖಾನಾಪೂರ ತಾಲೂಕಿನ ಮಂಗೇನಕೊಪ್ಪ ಗ್ರಾಪಂದಲ್ಲಿ ಜಿಲ್ಲಾಡಳಿತ, ಜಿಪಂ, ತಾಪಂ, ಗ್ರಾಪಂ ಶಿಶು ಅಭಿವೃದ್ಧಿ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಹೋಬಳಿ ಮಟ್ಟದ ಆರೋಗ್ಯ ಕೇಂದ್ರ ಬೀಡಿ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರು ಉತ್ತಮವಾದ ಆರೋಗ್ಯಪದ್ಧತಿ ಜೀವನ ಶೈಲಿಯನ್ನು ಪಾಲಿಸಬೇಕು. ಪ್ಲಾಸ್ಟಿಕ ವಸ್ತು ಹೆಚ್ಚಾಗಿ ಬಳುಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಹೆಚ್ಚಿನ ಜನರು ರಸಾಯನಿಕ ಬಳಸಿದ ಆಹಾರ ಸೇವಿಸುವುದರಿಂದ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವ ಆಹಾರ ಸೇವಿಸಬಾರದು ಎಂದರು.
ಹಣ್ಣು, ತರಕಾರಿ, ಸೊಪ್ಪು ಹಾಗೂ ಸಿರಿ ಧಾನ್ಯಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶವಿದ್ದು ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಸೇವಿಸುವುದರಿಂದ ಮನುಷ್ಯನ ಆರೋಗ್ಯ ಉತ್ತಮವಾಗಿ ವೃದ್ಧಿಸುತ್ತದೆ. ಪೋಷಕರು ಮಕ್ಕಳಿಗೆ ಉತ್ತಮ ಆಹಾರದ ಬಗ್ಗೆ ತಿಳುವಳಿಕೆ ನೀಡಬೇಕೆಂದರು.
ತಾಲೂಕಾ ಆಡಳಿತಾಧಿಕಾರಿ ಮಹೇಶ ಕಿವುಡಸನ್ನವರ ಮಾತನಾಡಿ ಮಕ್ಕಳಿಗೆ ಉತ್ತಮವಾದ ಆಹಾರದ ಜೊತೆಗೆ ಪ್ರೋಟಿನ್ಸ್ ಭರಿತ ಪೌಷ್ಟಿಕ ಆಹಾರ ಪ್ರತಿದಿನ ನೀಡಬೇಕು. ಗರ್ಭಿಣಿಯರು ಉತ್ತಮ ಆಹಾರ ಪದ್ಧತಿ ರೂಡಿಸಕೊಳ್ಳಬೇಕು. ಗರ್ಭಿಣಿಯರು ಉತ್ತಮವಾದ ಆಹಾರ ಸೇವಿಸುವುದರಿಂದ ಮಕ್ಕಳಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಪ್ರತಿ ಮಗುವಿಗೆ ಅನುಗುಣವಾಗಿ ಲಸಿಕೆಯನ್ನು ಹಾಕಿಸಬೇಕೆಂದರು.
ಈ ವೇಳೆ ಗ್ರಾಪಂ. ಉಪಾಧ್ಯಕ್ಷ ಉದಯ ಬಡಸ್ಕರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಶೇಖರ ಸುಖಸಾರೆ, ಶಿಶು ಅಭಿವೃದ್ಧಿ ಯೋಜನಾ ಸಹಾಯಕಿ ಶಾರದಾಬಾಯಿ ಮರಾಠೆ, ಶಿವಲೀಲಾ ಯಡವಿನಾಯ್ಕರ, ಮೇಲ್ವಿಚಾರಕಿ ಸುನೀತಾ ಮಡಿವಾಳ, ಗ್ರಾಪಂ ಸದಸ್ಯರುಗಳಾದ ಈರಪ್ಪಾ ಹುಬ್ಬಳ್ಳಿ, ಜಗದೀಶಗೌಡ ಪಾಟೀಲ, ಪಿಡಿಓ ರವಿ ತಳವಾರ, ಕಾರ್ಯದರ್ಶಿ ಶಿವಾನಂದ ಝಂಡೇ, ಗ್ರಾಪಂ ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಗ್ರಾಪಂ ಸರ್ವಸದಸ್ಯರು, ಸಾರ್ವಜನಿಕರಿದ್ದರು.