ಭದ್ರಾ : ಇಂದಿನಿಂದಲೇ ನೀರು ಹರಿಸಲು ನಿರ್ಣಯ : ಮಧು ಎಸ್.ಬಂಗಾರಪ್ಪ
ಸಂಜೆವಾಣಿ ವಾರ್ತೆ
ಶಿವಮೊಗ್ಗ : ಜು.೩೦ : ಈ ಬಾರಿಯ ಮುಂಗಾರು ರೈತರಲ್ಲಿ ಮಂದಹಾಸ ಮೂಡಿಸಿದ್ದು, ಭದ್ರಾ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಈ ಹಂತದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗುವಂತೆ ಭದ್ರಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಮೂಲಕ ನೀರಿನ ಲಭ್ಯತೆ ಹಾಗೂ ಮುಂದಿನ ದಿನಗಳಲ್ಲಿ ಮಳೆ ಬರಬಹುದಾದ ಅಂದಾಜಿನ ಆದಾರದ ಮೇಲೆ ತಜ್ಞರ ಅಭಿಪ್ರಾಯವನ್ನಾಧರಿಸಿ ನೀರನ್ನು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.ಅವರು ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡುತ್ತಿದ್ದರು. ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ಒಣಭೂಮಿ ಪ್ರದೇಶಗಳಿಗೂ ನೀರು ಹರಿಸುವುದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಜಲಾಶಯದಲ್ಲಿ ನೀರನ್ನು ಉಳಿಸಿಕೊಳ್ಳುವ, ಸದ್ಬಳಕೆ ಮಾಡಿಕೊಳ್ಳುವ ಹಾಗೂ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ನೀರಾವರಿ ಯೋಜನೆಗಳ ಕುರಿತು ಮುಂದಿನ ೧೫ದಿನಗಳೊಳಗಾಗಿ ರಾಜ್ಯ ನೀರಾವರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ  ಉಪಸ್ಥಿತಿಯಲ್ಲಿ ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು, ರೈತ ಮುಖಂಡರುಗಳ ಸಭೆಯನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದ ಅವರು ಇದೇ ಸಂದರ್ಭದಲ್ಲಿ ತುಂಗಾ, ಭದ್ರಾ, ಶರಾವತಿ ಸೇರಿರದಂತೆ ಮತ್ತಿತರ ಜಲಾಶಯಗಳ ನೀರಿನ ನಿರ್ವಹಣೆ, ಸಮಸ್ಯೆ-ಸವಾಲು, ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಚರ್ಚಿಸಲು ಉದ್ದೇಶಿಸಲಾಗಿದೆ ಎಂದವರು ನುಡಿದರು.ಈ ಪ್ರದೇಶದಲ್ಲಿ ಬೆಳೆ ಮಾದರಿ ಬದಲಾವಣೆಗಳಾಗಿದ್ದು, ಅಗತ್ಯಗಳಿಗೆ ತಕ್ಕಂತೆ ನೀರನ್ನು ಹರಿಸುವ ಬಗ್ಗೆ ಗಮನಹರಿಸುವ ಅಗತ್ಯವಿದೆ. ಅನಧಿಕೃತ ಪಂಪ್‌ಸೆಟ್ ನಿಯಂತ್ರಣಕ್ಕೆ ಹಾಗೂ ಅಗತ್ಯ ಕಠಿಣ ಕ್ರಮಗಳನ್ನು ಅನುಸರಿಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಕರ್ನಾಟಕ ನೀರಾವರಿ ನಿಗಮದಿಂದ ಸಮುದಾಯ ಭವನ, ದೇವಸ್ತಾನಗಳ ಅಭಿವೃದ್ಧಿ ಮತ್ತಿತರ ಚಟುವಟಿಕೆಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ನಿಯಂತ್ರಿಸಿ, ನೀರಾವರಿ ಯೋಜನೆಯ ಅಭಿವೃದ್ಧಿ ಉದ್ದೇಶಗಳಿಗಾಗಿಯೇ ಬಳಸಿಕೊಳ್ಳಲು ಕಳೆದ ವಾರ ಬೆಂಗಳೂರಿನಲ್ಲಿ ನೀರಾವರಿ ಸಚಿವರ ಸಭೆಯಲ್ಲಿ ಈ ರೀತಿಯ ನಿರ್ಣಯ ಕೈಗೊಳ್ಳಲಾಗಿದೆ ಎಂದರು.