50 ಭಾಷೆಗಳಲ್ಲಿ ವಚನಗಳ ಭಾಷಾಂತರ: ಡಾ. ಅರವಿಂದ್ ಜತ್ತಿ
ಕಲಬುರಗಿ ಜು.29 ಮುಂದಿನ ಮೂರ-ನಾಲ್ಕು ವರ್ಷಗಳಲ್ಲಿ ವಚನಗಳನ್ನು 50 ಭಾಷೆಗಳಿಗೆ ಭಾಷಾಂತರಿಸಲು ಬಯಸುತ್ತೇವೆ ಎಂದು ಬಸವ ಸಮಿತಿಯ ಅಧ್ಯಕ್ಷ ಡಾ. ಅರವಿಂದ್ ಜತ್ತಿ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ವಚನಗಳನ್ನು ಜಪಾನೀಸ್, ಜರ್ಮನ್ ಮತ್ತು ಸ್ಪ್ಯಾನಿಷ್ ಭಾಷೆಗಳಿಗೆ ಅನುವಾದಿಸುವ ಎರಡು ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ತತ್ವಾದರ್ಶಗಳನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅದಕ್ಕಾಗಿ ನಾವು ವಚನಗಳನ್ನು ವಿವಿಧ ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಭಾಷಾಂತರಿಸಲು ಪ್ರಾರಂಭಿಸಿದ್ದೇವೆ. ನಾವು ಈಗಾಗಲೇ 28 ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ವಚನಗಳನ್ನು ಅನುವಾದಿಸಿದ್ದೇವೆ ಎಂದರು.
ಈಗ ನಾವು ವಚನಗಳನ್ನು ಜಪಾನೀಸ್, ಜರ್ಮನ್, ಸ್ಪ್ಯಾನಿಷ್, ನೇಪಾಳಿ, ಚೈನೀಸ್ ಮತ್ತು ಫ್ರೆಂಚ್ ಭಾಷೆಗಳಿಗೆ ಅನುವಾದಿಸುವ ಕಾರ್ಯವು ಮುಕ್ತಾಯದ ಹಂತದಲ್ಲಿದೆ. ಈ ಆರು ಸಂಪುಟಗಳು ಜನವರಿ 2025 ರೊಳಗೆ ಬಿಡುಗಡೆ ಮಾಡುವ ಯೋಜನೆಯಿದೆ. ಕೊರಿಯಾ, ಕೋಸಿ (ಮೇಘಾಲಯ), ಬೋಡೋ (ಅಸ್ಸಾಂ) ಮತ್ತು ಪೋರ್ಚುಗೀಸ್ ಭಾಷೆಗಳಿಗೆ ವಚನಗಳ ಅನುವಾದ ಕಾರ್ಯವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹೀಗೆ 12ನೇ ಶತಮಾನದ ಶರಣರು ಪ್ರಸ್ತಾಪಿಸಿದ ಸಾರ್ವತ್ರಿಕ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಲು ಮತ್ತು ಪ್ರಚಾರ ಮಾಡಲು ಇದು ಸಹಾಯ ಮಾಡುತ್ತದೆ. ಯುದ್ಧ ಮತ್ತು ವಿನಾಶದ ಪ್ರಸ್ತುತ ಸಂದರ್ಭದಲ್ಲಿ ಶರಣರ ಮೌಲ್ಯಗಳು ಮನುಕುಲಕ್ಕೆ ಬಹಳ ಪ್ರಸ್ತುತವಾಗಿವೆ” ಎಂದು ಅವರು ಹೇಳಿದರು.
ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾಷಾ ನಿಕಾಯಯದ ಡೀನ್ ಪ್ರೊ. ವಿಕ್ರಂ ವಿಸಾಜಿ ಅವರು ಮಾತನಾಡಿ, ವಚನ ಸಾಹಿತ್ಯವು 12 ನೇ ಶತಮಾನದ ಕನ್ನಡ ವಚನಕಾರರು ನೀಡಿದ ವಿಶೇಷ ಭಾರತೀಯ ದರ್ಶನವಾಗಿದೆ. ಕನ್ನಡ ಸಾಹಿತ್ಯದಲ್ಲಿ ಸೃಷ್ಟಿಯಾಗಿರುವ ಈ ವಿಶೇಷ ಜ್ಞಾನವನ್ನು ಜಾಗತಿಕ ಭಾಷೆಗಳಿಗೆ ಅನುವಾದಿಸಲು ಪ್ರಯತ್ನಿಸುತ್ತಿದ್ದೇವೆ. ಅನುವಾದ ಪ್ರಕ್ರಿಯೆಯಲ್ಲಿ ನಾವು ಶರಣರ ತತ್ವಶಾಸ್ತçವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಮತ್ತು ವಿದೇಶಿ ಭಾಷೆಗಳಿಗೆ ಭಾಷಾಂತರಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ನಾವು ಅನುವಾದ ಕಾರ್ಯದ ಅಂತಿಮ ಹಂತದಲ್ಲಿದ್ದೇವೆ ಅದನ್ನು ಶೀಘ್ರದಲ್ಲೇ ಓದುಗರಿಗೆ ನೀಡಲಾಗುವುದು ಎಂದರು.
ಬಸವ ಪೀಠದ ಸಂಯೋಜಕ ಡಾ. ಗಣಪತಿ ಬಿ ಸಿನ್ನೂರ್ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಟಿ.ಜಿ. ಪ್ರಭಾಶಂಕರ್ ಪ್ರೇಮಿ, ಡಾ. ಸುಧಾ ಶ್ರೀಧರ್, ಡಾ. ಸಿದ್ದಣ್ಣ ಲಂಗೋಟಿ, ಡಾ. ಕಲ್ಯಾಣಮ್ಮ ಲಂಗೋಟಿ, ಡಾ. ಪಿ. ಕುಮಾರಮಂಗಲA, ಡಾ. ಪಿಯಾಲಿ ರಾಯ್, ಡಾ. ಶಿವಂ ಮಿಶ್ರಾ ಮತ್ತು ಡಾ. ಪ್ರಕಾಶ್ ಬಾಳಿಕಾಯಿ ಮುಂತಾದವರು ಉಪಸ್ಥಿತರಿದ್ದರು.