ಸರ್ಕಾರದ ಕಿವಿ ಹಿಂಡುವ ಕೆಲಸ ಮಾಧ್ಯಮ ಮಾಡಬೇಕು: ಸಚಿವ ಡಾ. ಶರಣಪ್ರಕಾಶ್ ಪಾಟೀಲ್
ಕಲಬುರಗಿ ಜು.29: ಮಾಧ್ಯಮಗಳು ಸರ್ಕಾರವು ತಪ್ಪು ಮಾಡಿದಾಗ ಕಿವಿ ಹಿಂಡುವ ಕೆಲಸ ಮಾಡಬೇಕು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದ ಮೇಲ್ಮಹಡಿಯಲ್ಲಿರುವ ಸಾಂಸ್ಕೃತಿಕ ಸಭಾಂಗಣದಲ್ಲಿ ಸೋಮವಾರ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಉಳಿವಿಗೆ ನಿರ್ಭೀತಿ ಪತ್ರಿಕೋದ್ಯಮ ಅಗತ್ಯ ಎಂದು ಪ್ರತಿಪಾದಿಸಿದರು.
ಸರ್ಕಾರ ತಪ್ಪು ದಾರಿಯಲ್ಲಿ ಸಾಗಿದ್ದರೆ ಅದನ್ನು ತಿದ್ದುವ ಕೆಲಸ ಮಾಧ್ಯಮ ಮಾಡಬೇಕು ಎಂದ ಅವರು, ಹಿಂದೆಲ್ಲ ವೃತ್ತಿನಿರತ ಪತ್ರಕರ್ತರ ಮಾಲೀಕತ್ವದಲ್ಲಿಯೇ ಪತ್ರಿಕೆ, ಸುದ್ದಿ ವಾಹಿನಿ ನಡೆಯುತ್ತಿದ್ದವು. ಇದೀಗ ಕಾರ್ಪೋರೇಟ್ ಉದ್ಯಮಿಗಳ ಹಿಡಿತದಲ್ಲಿ ಹೆಚ್ಚಾಗಿದೆ. ಇದು ಉತ್ತಮ ಬೆಳೆವಣಿಗೆಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಪತ್ರಿಕೆ ಓದುಗರ ಸಂಖ್ಯೆ, ಸುದ್ದಿ ವಾಹಿನಿ ವೀಕ್ಷಣೆ ಕಡಿಮೆಯಾಗಿದೆ. ಜನರು ಸಾಮಾಜಿಕ ಜಾಲತಾಣದ ಮೊರೆ ಹೋಗುತ್ತಿದ್ದಾರೆ. ಪತ್ರಕರ್ತರು ಸಹ ಜನರೇಷನ್ ತಕ್ಕಂತೆ ಬದಲಾಗಬೇಕಿದೆ ಎಂದು ಹೇಳಿದ ಅವರು, ದೃಶ್ಯ ಮಾಧ್ಯಮಗಳು ಬರುವುದಕ್ಕಿಂತ ಮುಂಚೆ ಮುದ್ರಣ ಮಾಧ್ಯಮಗಳಿಗೆ ಹೆಚ್ಚು ಬೆಲೆ ಇತ್ತು. ನಂತರ ದೃಶ್ಯ ಮಾಧ್ಯಮಗಳು ಹೆಚ್ಚು ಜನಪ್ರೀಯವಾಗಿವೆ. ಆದಾಗ್ಯೂ, ನಿರಂತರ ಪ್ರಸಾರದಿಂದಾಗಿ ಒಂದು ಮನೆಯ ಕುಟುಂಬದ ಎಲ್ಲ ಸದಸ್ಯರು ಕುಳಿತುಕೊಂಡು ನೋಡುವಂತಹ ವಾತಾವರಣ ಇಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳು ಹೆಚ್ಚು ಜನಪ್ರೀಯವಾಗುತ್ತಿವೆ. ಆ ಸಾಮಾಜಿಕ ಜಾಲತಾಣಗಳು ಸುಳ್ಳು ಮಾಹಿತಿಯನ್ನು ಕೊಡುತ್ತವೆಯೋ, ಸತ್ಯ ಸಂಗತಿಯನ್ನು ಹೇಳುತ್ತವೆಯೋ ಎಂಬುದು ಗೊತ್ತಾಗುವುದೇ ಇಲ್ಲ. ಹೀಗಾಗಿ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವಾಗಿರುವ ಮಾಧ್ಯಮಗಳು ಸರಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ್, ಮಾಜಿ ಸಂಸದ ಡಾ. ಉಮೇಶ್ ಜಾಧವ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಮುಂತಾದವರು ಮಾತನಾಡಿದರು.