ಶೀಘ್ರ ಕಲ್ಯಾಣ ಕರ್ನಾಟಕ ಪತ್ರಕರ್ತರ ಸಮ್ಮೇಳನ: ಆಗಸ್ಟ್ 2ನೇ ವಾರದಲ್ಲಿ ಪ್ರತಿಭಾ ಪುರಸ್ಕಾರ
ಕಲಬುರಗಿ ಜು.29: ಶೀಘ್ರವೇ ನಗರದಲ್ಲಿ ಕಲ್ಯಾಣ ಕರ್ನಾಟಕ ಪತ್ರಕರ್ತರ ಸಮ್ಮೇಳನ ಹಮ್ಮಿಕೊಳ್ಳಲಾಗುವುದು ಹಾಗೂ ಆಗಸ್ಟ್ ಎರಡನೇ ವಾರದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಅವರು ಹೇಳಿದರು.
ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಇದೇ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಏರ್ಪಡಿಸಬೇಕಾಗಿತ್ತು. ಆದಾಗ್ಯೂ, ಸಮಯದ ಅಭಾವದಿಂದ ಆ ಕಾರ್ಯಕ್ರಮವನ್ನು ಆಗಸ್ಟ್ ಎರಡನೇ ವಾರದಲ್ಲಿ ಆಯೋಜಿಸಲಾಗುತ್ತದೆ ಎಂದರು.
ಶೀಘ್ರವೇ ಕಲ್ಯಾಣ ಕರ್ನಾಟಕ ಪತ್ರಕರ್ತರ ಸಮ್ಮೇಳನವನ್ನೂ ಸಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ ಅವರು, ಪತ್ರಕರ್ತರ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಸಕಾಲದಲ್ಲಿ ಈಡೇರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಕುರಿತು ಘೋಷಣೆ ಮಾಡಿದ್ದು, ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರಬೇಕು. ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಯೋಜನೆ ಜಾರಿಗೊಳಿಸಬೇಕು ಎಂದು ಮನವಿ ಮಾಡಿದ ಅವರು, ನಿವೃತ್ತ ಪತ್ರಕರ್ತರಿಗೆ ಪಿಂಚಣಿ ಯೋಜನೆಯು ಕನ್ನಡಿಯೊಳಗಿನ ಗಂಟಾಗಿದ್ದು, ಅದನ್ನೂ ಸಹ ಸಮರ್ಪಕವಾಗಿ ಜಾರಿಗೆ ತರಬೇಕು ಎಂದು ಕೋರಿದರು.
ಇಡೀ ಉತ್ತರ ಕರ್ನಾಟಕದಲ್ಲಿಯೇ ನಗರದಲ್ಲಿನ ಪತ್ರಿಕಾ ಭವನವು ಸುಸಜ್ಜಿತ ಮಾದರಿ ಭವನವಾಗಿದೆ ಎಂದು ಹೇಳಿದ ಅವರು, ಮೇಲ್ಮಹಡಿಯ ಕಾಮಗಾರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಉದ್ಘಾಟನೆ ನೆರವೇರಿಸಿದ್ದರು. ಸಭಾ ಭವನದ ನವೀಕರಣವನ್ನು ಸಂಸದ ಡಾ. ಉಮೇಶ್ ಜಾಧವ್ ಅವರ ಬೆಂಬಲದಿAದ ಮಾಡಿದ್ದೇವೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಲ್ಲಿಯೂ ಸಹ ಸ್ವಂತ ಪತ್ರಿಕಾ ಭವನಗಳನ್ನು ಹೊಂದಲಾಗಿದೆ. ನಿನ್ನೆಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಸೇಡಂದಲ್ಲಿ ಪತ್ರಿಕಾ ಭವನಕ್ಕಾಗಿ ಹೊಸ ನಿವೇಶನ ಕೊಡುವುದಾಗಿ ಘೋಷಿಸಿದ್ದಾರೆ. ಅದೇ ರೀತಿ ಚಿತ್ತಾಪುರದಲ್ಲಿಯೂ ಸಹ ಹೊಸ ನಿವೇಶನ ಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಭರವಸೆ ನೀಡಿದ್ದಾರೆ. ಎಲ್ಲ ತಾಲ್ಲೂಕುಗಳಲ್ಲಿಯೂ ಪತ್ರಿಕಾ ಭವನ ನಿರ್ಮಾಣ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.