ನಾಟಕ ಪ್ರಪಂಚಕ್ಕೆ ಹೊಸಮಾರ್ಗ ಹಾಕಿಕೊಟ್ಟ ಕೈಲಾಸಂ
ಕಲಬುರಗಿ:ಜು.29: ಟಿ.ಪಿ.ಕೈಲಾಸಂ ಅವರು ಶ್ರೇಷ್ಟ ನಾಟಕಕಾರ, ನಟ, ನಿರ್ದೇಶಕರಾಗಿ 20ನೇ ಶತಮಾನದ ಆರಂಭದ ನಾಲ್ಕು ದಶಕಗಳಲ್ಲಿ ಹೊಸ ನಾಟಕಗಳ ಸೃಷ್ಟಿಯಿಂದ ನಾಟಕ ಕ್ಷೇತ್ರವನ್ನು ಬೆಳಗಿದವರು. ಲಂಡನಿನಲ್ಲಿ ಏಳು ವರ್ಷಗಳ ಕಾಲ ವಿವಿಧ ನಾಟಕಕಾರ ಜೊತೆಯಲ್ಲಿ ಚರ್ಚಿಸಿ, ಅನೇಕ ಹೊಸ ತಂತ್ರಗಳನ್ನು ತಿಳಿದುಕೊಂಡು ಅವುಗಳನ್ನು ಕನ್ನಡದಲ್ಲಿ ಆಡು ಭಾಷೆಯಲ್ಲಿ ಜನ ಸಾಮಾನ್ಯರಿಗೆ ತಿಳಿಯುವಂತೆ ರಚಿಸಿದ್ದಾರೆ. ಇತರರು ನಡೆದ ದಾರಿಯನ್ನು ಸವಿಸದ ಇವರು, ನಾಟಕ ಪ್ರಪಂಚಕ್ಕೆ ಹೊಸ ಮಾರ್ಗವನ್ನು ಹಾಕಿಕೊಟ್ಟಿದ್ದಾರೆಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಮಲ್ಲಿನಾಥ ಮಹಾರಾಜ ಶಾಲೆ’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ಟಿ.ಪಿ.ಕೈಲಾಸಂ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಸಮಾಜ ಜೀವನದ ವೈವಿಧ್ಯತೆ, ಅಂಕು-ಡೊAಕುಗಳಿಗೆ ಅವರ ನಾಟಕಗಗಳು ಕನ್ನಡಿ ಹಿಡಿದಂತಿವೆ. ಜೀವನದಲ್ಲಿ ಎದುರಾಗುವ ಕಣ್ಣಿರ ಕಡಲನ್ನು ತಮ್ಮ ಹಾಸ್ಯದ ಹರಿಗೋಲಿನಿಂದ ದಾಟಿಸಿದ್ದಾರೆ. ‘ಮಕ್ಕಳ ಸ್ಕೂಲ್ ಮನೇಲಲ್ವೆ’, ‘ಹೋಂ ರೂಲು’, ‘ಬಹಿಷ್ಕಾರ’, ‘ಬಂಡ್ವಾಳ್ವಿಲ್ಲದ್ಬಡಾಯಿ’ ಸೇರಿದಂತೆ ಅನೇಕ ನಾಟಕಗಳನ್ನು ರಚಿಸಿದ್ದಾರೆ. ‘ಕರ್ನಾಟಕ ನಾಟಕ ಪ್ರಹಸನ ಪಿತಾಮಹ’ರೆಂದು ಇವರನ್ನು ಕರೆಯಲಾಗುತ್ತದೆ ಎಂದರು.
ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ ಮಾತನಾಡಿ, ನಾಟಕಗಳು ಪ್ರಭಾವಿ ಮಾಧ್ಯಮ. ಅದರ ಮೂಲಕ ನೈಜ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಮಾಡಲಾಗುತ್ತದೆ. ಈ ನಿಟ್ಟನಲ್ಲಿ ಕೈಲಾಸಂ ಅವರು ರಚಿಸಿದ ಅನೇಕ ನಾಟಕಗಳು ಸಮಾಜಕ್ಕೆ ಮೇರು ಸಂದೇಶವನ್ನು ನೀಡುತ್ತವೆಯೆಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಮರ ಜಿ.ಬಂಗರಗಿ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲೂರೆ, ಶಿಕ್ಷಕರಾದ ಶಿಕ್ಷಕರಾದ ರೇಖಾ ಬಿ.ಪಾಟೀಲ, ಮಂಜುಳಾ ಬಿ.ನರೋಣಾ, ನಂದಿನಿ, ಸೇವಕಿ ಸುರೇಖಾ ಸಣಮನಿ ಹಾಗೂ ವಿದ್ಯಾರ್ಥಿಗಳಿದ್ದರು.