ಶೀಘ್ರ ಪತ್ರಕರ್ತರಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿ:ಕೆ.ವಿ.ಪ್ರಭಾಕರ
ಕಲಬುರಗಿ:ಜು.29:ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಆದಷ್ಟು ಶೀಘ್ರ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ಸಾಮಾನ್ಯವಾಗಿ ಬಡ ಮತ್ತು ಮಧ್ಯಮ ವರ್ಗಗಳಿಂದ ಬರುವ ಪತ್ರಕರ್ತರು ಆರೋಗ್ಯ ಕೈಕೊಟ್ಟಾಗ ಹೆಚ್ಚು ಸಂಕಷ್ಟಕ್ಕೆ ಗುರಿಯಾಗುತ್ತಾರೆ.ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಜ್ಯ ಸರಕಾರ ಈಗಾಗಲೇ ವಿಶೇಷವಾಗಿ ಪತ್ರಕರ್ತರಿಗಾಗಿ ಆರೋಗ್ಯ ಭಾಗ್ಯಯೋಜನೆ ಜಾರಿಗೊಳಿಸುತ್ತಿದೆ.ಈ ನಿಟ್ಟಿನಲ್ಲಿ ಅದಾಗಲೇ ರೂ.10 ಕೋಟಿ ಅನುದಾನ ತೆಗೆದಿರಿಸಲಾಗಿದೆ.ಮುಂದಿನ ಕೆಲವೇ ದಿನಗಳಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಪ್ರಕಟಿಸುವ ಮೂಲಕ ಯೋಜನೆ ಕಾರ್ಯರೂಪಕ್ಕೆ ಬರಲಿದೆ.ಇಂಥದ್ದೊAದು ಯೋಜನೆ ಘೋಷಿಸಿದ ಮುಖ್ಯಮಂತ್ರಿಗಳನ್ನು ತಾವು ಅಭಿನಂದಿಸುವುದಾಗಿ ಕೃತಜ್ಞತೆ ಸೂಚಿಸಿದರು.
ಇಂದು ಮುದ್ರಣ ಮತ್ತು ಎಲೆಕ್ಟಾçನಿಕ್ ಮಾಧ್ಯಮಗಳು ಹೆಚ್ಚಾಗಿ ಕಾರ್ಪೊರೇಟ್ ಆರ್ಭಟದ ಭಾಗವಾಗಿ ಕಾರ್ಯನಿರ್ವಹಿಸುವಂತಾಗಿದೆ.ಬಡ ಮತ್ತು ಮಧ್ಯಮ ವರ್ಗಗಳಿಂದಲೇ ಹೆಚ್ಚಾಗಿ ಪತ್ರಕರ್ತರು ಬರುತ್ತಿದ್ದಾಗ್ಯೂ, ಅವರೆಲ್ಲಾ ಬಡವರ ಪರವಾಗಿ ಚಿಂತನೆ ನಡೆಸುವುದಕ್ಕಿಂತಲೂ ಕಾರ್ಪೊರೇಟ್ ಆರ್ಭಟಕ್ಕೆ ದನಿಯಾಗುವ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜ ಮತ್ತು ಸರಕಾರದ ಮಧ್ಯೆ ಸೇತುವೆಯಂತೆ ಮಾಧ್ಯಮ ಕಾರ್ಯನಿರ್ವಹಿಸಿದಾಗ ಮಾತ್ರ ಜನರ ಕಷ್ಟಗಳು ಸುಲಭವಾಗಿ ಸರಕಾರದ ಗಮನಕ್ಕೆ ಬರುತ್ತವೆ. ಆದರೆ, ಇತ್ತೀಚೆಗೆ ಜನಸಾಮಾನ್ಯರ ಕಷ್ಟಗಳಿಗಿಂತಲೂ ವ್ಯಕ್ತಿ ಆಧರಿತ ವರದಿಗಳು ಹೆಚ್ಚು ಆದ್ಯತೆ ಪಡೆಯುತ್ತಿವೆ. ಅದರಲ್ಲೂ ಮುಖ್ಯವಾಗಿ ಪತ್ರಕರ್ತರಾದವರು ಕೇಳಿಸಿಕೊಳ್ಳುವ ವ್ಯವಧಾನ ಕಳೆದುಕೊಳ್ಳುತ್ತಿದ್ದಾರೆ. ಇದರ ದುಷ್ಪರಿಣಾಮ ಎಂಬAತೆ ಬ್ರೇಕಿಂಗ್ ನ್ಯೂಸ್ ಸಂಪ್ರದಾಯ ಹುಟ್ಟಿಕೊಂಡಿದೆ.ಈ ವಿದ್ಯಮಾನದಿಂದಾಗಿ ಪತ್ರಕರ್ತರನ್ನು ಅನುಮಾನದಿಂದ ನೋಡುವಂತಾಗಿದೆ ಎಂದುಪ್ರಭಾಕರ ಸೂಚ್ಯವಾಗಿ ಕಿವಿ ಹಿಂಡಿದರು.
15 ದಿನಗಳಲ್ಲಿ ಬಸ್ ಪಾಸ್:
ಗ್ರಾಮೀಣ ಪತ್ರಕರ್ತರಿಗೆ ಈಗಾಗಲೇ ರಾಜ್ಯ ಸರಕಾರ ಬಸ್ ಪಾಸ್ ಯೋಜನೆ ಘೋಷಿಸಿದೆ.ಆದರೆ, ಗ್ರಾಮೀಣ ಭಾಗದ ಅರ್ಹ ಪತ್ರಕರ್ತರನ್ನು ಗುರುತಿಸುವ ಕೆಲಸ ಸ್ವಲ್ಪ ಕಠಿಣವಾಗಿರುವ ಕಾರಣಕ್ಕಾಗಿ ಪೂರಕವಾದ ಮಾರ್ಗಸೂಚಿಗಳನ್ನು ಪ್ರಕಟಿಸಿದ ನಂತರ ಮುಂದಿನ 15 ದಿನಗಳಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಸುಳಿವು ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ಮೊದಲು ತಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸುತ್ತಲೇ ವೃತ್ತಿ ಬದ್ಧತೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು.
ಮಾಧ್ಯಮಕ್ಷೇತ್ರದಲ್ಲಿ ಇಂದು ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ.ಈ ದಿಕ್ಕಿನಲ್ಲಿ ಪತ್ರಕರ್ತರು ಹೆಚ್ಚು ಕಾಳಜಿ ವಹಿಸಬೇಕೆಂದು ಕಿವಿಮಾತು ಹೇಳಿದರು.
ಆರಂಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ಸ್ವಾಗತಿಸಿದರು.ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ವೈದ್ಯಕೀಯ ಶಿಕ್ಷಣ, ಕೌಶಲ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಮಾಜಿ ಸಂಸದ ಡಾ.ಉಮೇಶ್‌ಜಾಧವ್, ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವಗುತ್ತೇದಾರ್, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ವೇದಿಕೆಯಲ್ಲಿದ್ದರು.
ಆರು ಪತ್ರಕರ್ತರಿಗೆಕಾಗಲ್ಕರ್ ಪ್ರಶಸ್ತಿ
ಪತ್ರಿಕಾ ದಿನಾಚರಣೆ ಪ್ರಯುಕ್ತ ಹಿರಿಯ ಪತ್ರಕರ್ತರಾದ ದೇವಯ್ಯ ಗುತ್ತೇದಾರ್, ಹಣಮಂತರಾವ್ ಭೈರಾಮಡಗಿ, ಶಾಮಕುಮಾರ್ ಶಿಂಧೆ, ಬಿ.ವಿ.ಚಕ್ರವರ್ತಿ, ಮಲ್ಲಿಕಾರ್ಜುನ ನೈಕೊಡಿ ಮತ್ತು ಡಾ.ಶಿವರಂಜನ ಸತ್ಯಂಪೇಟ ಅವರಿಗೆ 2024ನೇ ಸಾಲಿನ ದಿ.ವಿ.ಎನ್.ಕಾಗಲಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇವೇಳೆ, ಖಾಸಗಿ ವಿದ್ಯುನ್ಮಾನ ವಾಹಿನಿಯ ಜಿಲ್ಲಾ ವರದಿಗಾರ ರಾಜಶೇಖರಯ್ಯ ಹೊಕ್ರಾಣಿಮಠ ಅವರಿಗೆ ದೃಶ್ಯ ಮಾಧ್ಯಮ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೂರು ಕೃತಿಗಳ ಲೋಕಾರ್ಪಣೆ
ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲಿ ್ಲಮೂರು ಕೃತಿಗಳ ಲೋಕಾರ್ಪಣೆ ನೆರವೇರಿತು. ಪತ್ರಕರ್ತ ಮನೋಜಕುಮಾರ್ ಗುದ್ದಿ ಅನುವಾದಿತ ಗಾಂಧೀಜಿಯ ಹಂತಕ, ಹಿರಿಯ ಪತ್ರಕರ್ತ ಸಂಗಮನಾಥ ರೇವತಗಾಂವ ವಿರಚಿತ ಕೊರೊನಾ ಕನವರಿಸುವ ವಚನಗಳು ಹಾಗೂ ಮಹಿಪಾಲರೆಡ್ಡಿ ಮುನ್ನೂರು ಬರೆದಿರುವ ಬೆಳಕು ತಾಕಿದ ಬೆಳಕು ಕೃತಿಗಳನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಲೋಕಾರ್ಪಣೆಗೊಳಿಸಿದರು.ಹಿರಿಯ ಪತ್ರಕರ್ತ ಡಾ.ಶಿವರಂಜನ ಸತ್ಯಂಪೇಟೆ ಕೃತಿಗಳ ಕುರಿತು ಪರಿಚಯ ಮಾಡಿಕೊಟ್ಟರು.