ಸಾರ್ವಜನಿಕ ಸೇವೆಗೆ ತಿಂಗಳಿಗೊಂದು ದಿನ ಮೀಸಲಿಡಿ ವೈದ್ಯರಿಗೆ ಡಿಸಿ ಮನವಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,29-  ವೈದ್ಯರ ವೃತ್ತಿ ಬಹಳ ಪಾವಿತ್ಯ್ರವಾದುದು. ದುಡಿಮೆಯ ಜೊತೆಗೆ ತಿಂಗಳಿಗೆ ಒಂದು ದಿನ ನೀವು ಸಾರ್ವಜನಿಕರಿಗೆ ಉಚಿತ ಸೇವೆ ಮಾಡಲು ಮುಂದಾಗಿ ಎಂದು ಜಿಲ್ಲೆಯ  ವೈದ್ಯರಿಗೆ ಜಿಲ್ಲಾಧಿಕಾರಿ  ಪ್ರಶಾಂತ್ ಕುಮಾರ್ ಮಿಶ್ರ ಮನವಿ ಮಾಡಿದ್ದಾರೆ.
ಅವರು ನಿನ್ನೆ ಸಂಜೆ ನಗರದ  ಕೆ.ಆರ್. ಎಸ್ ಪಂಕ್ಷನ್ ಹಾಲ್ ನಲ್ಲಿ ಭಾರತೀಯ ವೈದ್ಯಕೀಯ ಸಂಘದ ಬಳ್ಳಾರಿ ಶಾಖೆ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಜನ‌ಸೇವೆಗಾಗಿ ನನಗೂ ವೈದ್ಯರಾಗಬೇಕೆಂಬ ಹಂಬಲ ಇತ್ತು. ಆದರೆ ಐಎಎಸ್ ಮಾಡಿ ಜನ ಸೇವೆ ಮಾಡುತ್ತಿರುವೆ. ವೈದ್ಯಕೀಯ ವೃತ್ತಿಯೂ ಜನರ ಸೇವೆಗೆ ಇರುವ ಒಂದು ಮುಖ್ಯ ವೃತ್ತಿಯಾಗಿದೆ.
ಯಾರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ಸಬಲರಾಗಿರುವುದಿಲ್ಲ.  ಅವರು ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಅಂತಹವರಿಗೆ ಉತ್ತಮ ಚಿಕಿತ್ಸೆ ನೀಡುವುದು ನಿಮ್ಮ ಗುರಿಯಾಗಬೇಕೆಂದರು.
ಐಎಂಎ ಸಹ ಅನೇಕ ಕಾರ್ಯಕ್ರಮಗಳ‌ ಮೂಲಕ ಸಮಾಜದಲ್ಲಿನ ಆರೋಗ್ಯ ವ್ಯವಸ್ಥೆ ಸುಧಾರಣೆಯ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಅಲ್ಲದೆ ಜಿಲ್ಲೆಯ  ವೈದ್ಯರೆಲ್ಲ  ತಿಂಗಳಲ್ಲಿ ಒಂದು ದಿನ ನಿಮ್ಮ ಸೇವೆಯನ್ನು ಸಾರ್ವಜನಿಕವಾಗಿ ಉಚಿತವಾಗಿ ಮಾಡಲು ಮುಂದಾಗಿ ಎಂದರು.
ಹಿರಿಯ ವೈದ್ಯ  ಡಾ. ಎಸ್.ಜೆ.ವಿ.ಮಹಿಪಾಲ್ ಮಾತನಾಡಿ, ಕೆಎಂಅರ್ ಸಿ ನಿಧಿಯಲ್ಲಿ ಬಿಮ್ಸ್ ನ ಹಳೆಯ ಕಟ್ಟಡವನ್ನೆಲ್ಲ ಹೊಸದಾಗಿ 171 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಬೇಕು. ನಾವು ಸಾರ್ವಜನಿಕ ಸೇವೆ ಮಾಡಲು ಸಿದ್ದರಿದ್ದೇವೆ ನೀವು ಕಾರ್ಯಕ್ರಮ ರೂಪಿಸಿ ಎಂದು ಡಿಸಿಯವರಿಗೆ ಹೇಳಿದರು.
ಕರ್ನಾಟಕ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷ ಡಾ. ವೈ.ಸಿ.ಯೋಗಾನಂದರೆಡ್ಡಿ ಸನ್ಮಾನಿತಗೊಂಡು, ಭಾರತೀಯ ನ್ಯಾಯ ಸಂಹಿತೆಯಂತೆ ವೃತ್ತಿಯನ್ನು ನೆಲದ ಕಾನೂನು ಪಾಲಿಸಿ ನಮ್ಮ ವೃತ್ತಿ ಕೈಗೊಳ್ಳೋಣ ಎಂದರು. 
ವೈದ್ಯಕೀಯ ಸೇವೆಗಾಗಿ ದಂಪತಿಗಳಾದ  ಡಾ‌. ಅರವಿಂದ ಪಾಟೀಲ್,  ಡಾ ಜ್ಯೋತಿ ಪಾಟೀಲ್ ಮತ್ತು  ಡಾ.ಸುಧಾಕರ ಜ್ಯೋಷಿ, ಡಾ.ಉಮಾ ಜೋಷಿ ಅವರನ್ನು.   ಕಲೆ ಮತ್ತು ಸಂಸ್ಕೃತಿ ಕ್ಷೇತ್ರದ ಸೇವೆಗೆ ಗೆಣಿಕಿಹಾಳ್ ತಿಮ್ಮನಗೌಡ ಮೇಲ್ಸೀಮೆ, ಮಾಧ್ಯಮ ಕ್ಷೇತ್ರದ ಸೇವೆಗಾಗಿ  ಸುವರ್ಣ ಚಾನಲ್ ನ ಜಿಲ್ಲಾ ವರದಿಗಾರ ನರಸಿಂಹಮೂರ್ತಿ  ಕುಲಕರ್ಣಿ,  ಎಂಬಿಬಿಎಸ್ ನಲ್ಲಿ ಉತ್ತಮ ಸಾಧನೆ ಮಾಡಿದ ಡಾ‌.ತರುಣ್ ಸಾಯಿ, ಡಾ.ಸಿ.ಸಾಹಿತಿ ಅವರನ್ನು ಸನ್ಮಾನಿಸಿ ಗೌರವಿಸಲಾಯ್ತು.
ಭಾರತೀಯ ವೈದ್ಯಕೀಯ ಸಂಘದ ಬಳ್ಳಾರಿ ಶಾಖೆಯ ಅಧ್ಯಕ್ಷ ಡಾ.ಶ್ರೀನವಾಸುಲು ಡಿ. ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಸರ್ಜನ್ ಡಾ.ಬಸರೆಡ್ಡಿ, ಬಿಮ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಂಜುನಾಥ, ಡಾ.ವಾರಿಜರೆಡ್ಡಿ, ಡಾ.ಸಂಗೀತ ಕಟ್ಟಿಮನಿ, ಮಾಣಿಕ್ ರಾವ್ ಕುಲಕರ್ಣಿ ಮೊದಲಾದವರು ವೇದಿಕೆಯಲ್ಲಿದ್ದರು.
ಪ್ರಾರ್ಥನೆ ಪ್ರಣೀತ ಅಜೇಯ್ ಮತ್ತು ತಂಡ, ಅಸೋಸಿಯೇಷನ್ ಕಾರ್ಯದರ್ಶಿ  ಡಾ.ರಾಘವೇಂದ್ರ ಸ್ವಾಗತಿಸಿದರು. ಡಾ.ಶ್ರೀಲಕ್ಷ್ಮಿ ವಂದನಾರ್ಪಣೆ ಮಾಡಿದರು.
ನಂತರ ವೈದ್ಯರು ಮತ್ತವರ ಮಕ್ಕಳಿಂದ ನೃತ್ಯ, ಸಂಗೀತ, ಹಾಡುಗಾರಿಕೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.