ಶೇಷಗಿರಿ ಗುರಪ್ಪನವರಿಗೆ ರಂಗತೋರಣ ಪುರಸ್ಕಾರ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು,29-ಪುಟ್ಟ ಗ್ರಾಮ ಶೇಷಗಿರಿಯನ್ನು ರಂಗಗ್ರಾಮ ಮಾಡಿದ ಪ್ರಭು ಗುರಪ್ಪನವರ ರಂಗದ ಹಿಂದಿನ ಶಕ್ತಿ. ಅವರಿಗೆ ಬಳ್ಳಾರಿಯ ಜೋಳದರಾಶಿ ಗ್ರಾಮವನ್ನು ನಾಟಕ ರಂಗದಲ್ಲಿ ಚಿರಸ್ಥಾಯಿಗೊಳಿಸಿದ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಸಂದಿರುವುದು ಅಭಿನಂದನೀಯ ಎಂದು ನಗರದ ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ನುಡಿದರು.
ನಗರದ ರಾಘವ ಕಲಾಮಂದಿರದಲ್ಲಿ ನಿನ್ನೆ ನಡೆದ ವಾರ್ಷಿಕ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.
ದೊಡ್ಡನಗೌಡರ ನೆನೆಯುವುದೆಂದರೆ ಬಳ್ಳಾರಿ ರಾಘವ, ವೈ.ನಾಗೇಶ ಶಾಸ್ತ್ರೀ, ವೈ.ಮಹಾಬಲೇಶ್ವರಪ್ಪ ನವರೊಂದಿಗೆ ಅಂದಿನ ಕಾಲದ ನೆನಪೇ ಆಗಿದೆ. ಕಬೀರದಾಸ ನಾಟಕದಿಂದ ಕಬೀರಗೌಡ್ರು ಎಂದು ಪ್ರಸಂಶಿಸಲ್ಪಟ್ಟಿದ್ದ ಗೌಡರು ಧಾರವಾಡದ ಮೃತ್ಯುಂಜಯ ಗುರುಗಳಿಂದ ಗಮಕ ಕಲಾನಿಧಿ ಎನಿಸಿಕೊಂಡರು. ಹೈಸ್ಕೂಲು ಮೆಟ್ಟಿಲು ತುಳಿಯದ ಗೌಡರು ಶೂನ್ಯ ಸಂಪಾದನೆಯ ಗಾಯನ ಮಾಡಿದರು, ಬಯಲು ಗಳಿಕೆ ಗ್ರಂಥ ಬರೆದರು, ತೆಲುಗು-ಕನ್ನಡದಲ್ಲಿ ನಾಟಕ, ವಚನ ಸಾಹಿತ್ಯ ರಚಿಸಿ ಗುಲ್ಬರ್ಗಾ ಹಾಗೂ ಆಂಧ್ರ ವಿಶ್ವವಿದ್ಯಾಲಯ ಡಾಕ್ಟರೇಟ್ ಪಡೆದಿರುವುದು ಬಳ್ಳಾರಿಯ ಹೆಮ್ಮೆ ಎಂದರು. ಅವರು ಡಾ.ರುಮಾಲೆಯವರು ಬರೆದ ‘ಬಳ್ಳಾರಿ ರಾಘವ’ ಕೃತಿ ಲೋಕಾರ್ಪಣೆ ಮಾಡಿದರು.
ಡಾ. ಮೃತ್ಯುಂಜಯ ರುಮಾಲೆ ದೊಡ್ಡನಗೌಡರೊಂದಿಗಿನ ಆಪ್ತ ಮಾತುಕತೆಗಳನ್ನು ಸ್ಮರಿಸಿಕೊಂಡು ದೊಡ್ಡಗೌಡರು ಬಳ್ಳಾರಿ ಗುರುಶಿಷ್ಯ ಪರಂಪರೆಯ ಕೊಂಡಿ ಎಂದು ಅಭಿಪ್ರಾಯಪಟ್ಟರು.
೨೦೨೨ನೇ ಸಾಲಿನ ಪ್ರಶಸ್ತಿ ಪುರಸ್ಕೃತ ಪ್ರಭು ಗುರಪ್ಪನವರ ಅವರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಣ್ಣ ಹಳ್ಳಿ ಶೇಷಗಿರಿಯನ್ನು ಗುರುತಿಸಿ ನನಗೆ ಜೋಳದರಾಶಿ ದೊಡ್ಡನಗೌಡರಂತಹ ಮಹಾನ್ ಕಲಾವಿದರ ಪ್ರಶಸ್ತಿ ನೀಡಿರುವುದು ಇಡೀ ಗ್ರಾಮಕ್ಕೆ ಸಂದ ಪ್ರಶಸ್ತಿ ಎಂದು ಸಂಭ್ರಮಿಸಿದರು. ನಮ್ಮ ಗ್ರಾಮದ ರಂಗಮಂದಿರ ಇಡಿ ನಾಡಿನ ರಂಗಮಂದಿರ, ಯಾವುದೇ ಕಲಾ ತಂಡಗಳು ಅಲ್ಲಿಗೆ ಬಂದು ತಾಲೀಮು ನಡೆಸಿ ಪ್ರದರ್ಶನ ನೀಡಬಹುದು ಎಂದು ಆಶಿಸಿದರು.
ಆರಂಭದಲ್ಲಿ ಜೋಳದರಾಶಿಯ ರ‍್ರೆಪ್ಪಗೌಡರು, ದೊಡ್ಡನಗೌಡರು ರಚಿಸಿದ ಪ್ರಮುಖ ಕವನವೊಂದನ್ನು ಹಾಡಿ ಶುಭಾರಂಭಗೊಳಿಸಿದರು. ಜೋಳದರಾಶಿ ದೊಡ್ಡನಗೌಡರ ಆಕರ್ಷಕ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಬಳ್ಳಾರಿ ರಾಘವ, ರಂಜಾನಸಾಬ್, ದೊಡ್ಡನಗೌಡರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ರಂಗತೋರಣ ೨೦೨೨ರ ಪ್ರಶಸ್ತಿಯನ್ನು ಶೇಷಗಿರಿಯ ಪ್ರಭು ಗುರಪ್ಪನವರಿಗೆ ಶಾಲು, ಹಾರ, ಫಲ ಪುಷ್ಪಗಳೊಂದಿಗೆ ೨೫ ಸಾವಿರ ರೂ ಪುರಸ್ಕಾರವನ್ನು ಸಿ.ಚನ್ನಬಸಣ್ಣ ಪ್ರದಾನ ಮಾಡಿದರು. ೨೦೨೩ನೇ ವಾರ್ಷಿಕ ಪ್ರಶಸ್ತಿ ಭಾಜನರಾಗಿರುವ ಬೆಂಗಳೂರಿನ ಡಿ.ಹನುಮಕ್ಕನವರು ಅನಿವಾರ್ಯವಾಗಿ ಬಂದಿರಲಿಲ್ಲ. ಅವರನ್ನು ಮತ್ತೊಮ್ಮೆ ಪುರಸ್ಕರಿಸಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಸಿ.ಚನ್ನಬಸವಣ್ಣ, ಡಾ.ಮೃತ್ಯುಂಜಯ ರುಮಾಲೆ, ಪ್ರಭು ಗುರಪ್ಪನವರ, ಕೆ.ಪೊಂಪನಗೌಡ, ಪ್ರೊ.ಆರ್. ಭೀಮಸೇನ, ಪ್ರಭುದೇವ ಕಪ್ಪಗಲ್ಲು ಇದ್ದರು. ಅಡವಿಸ್ವಾಮಿ ಕಾರ್ಯ ನಿರೂಪಿಸಿದರು, ಕೆ.ಪೊಂಪನಗೌಡ ವಂದನಾರ್ಪಣೆ ಮಾಡಿದರು.