ಹೆಪಟೈಟಿಸ್ ಬಗ್ಗೆ ಎಚ್ಚರಿಕೆ ಅಗತ್ಯ
ಬೆಂಗಳೂರು, ಜು.೨೯- ಹೆಪಟೈಟಿಸ್ ಹರಡುವಿಕೆಯ ಬಗ್ಗೆ ಪ್ರತಿಯೊಬ್ಬರು ಎಚ್ಚರವಹಿಸಬೇಕು. ಪ್ರಮುಖವಾಗಿ ಒಬ್ಬರು ಬಳಸಿದ ಸೂಜಿ ಮರುಬಳಕೆ ಮಾಡುವುದರಿಂದ, ಟ್ಯಾಟು ಹಾಕಿಸಲು ಬಳಸುವ ಸೂಜಿ ಮರುಬಳಕೆಯಿಂದ ಈ ವೈರಾಣು ತಗುಲುವ ಸಾಧ್ಯತೆ ಇದೆ ಎಂದು ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಹಿರಿಯ ವೈದ್ಯ ಡಾ.ಕೆ.ಎಸ್ .ಪೂರ್ಣಚಂದ್ರ ಹೇಳಿದ್ದಾರೆ.
ವಿಶ್ವ ಹೆಪಟೈಟಿಸ್ ದಿನದ ಪ್ರಯುಕ್ತ ಪ್ರತಿಕ್ರಿಯಿಸಿದ ಅವರು, ಹೆಪಟೈಟಿಸ್ ಸೋಂಕು ಆಹಾರ ಮತ್ತು ಜೀವನಶೈಲಿ ಬದಲಾವಣೆಗಳಿಂದ ಬರುತ್ತದೆ. ಮಾನವನ ಅಂಗಾಂಗಗಳಲ್ಲಿ ಯಕೃತ್ತಿನ ಆರೈಕೆಗೆ ಆದ್ಯತೆ ನೀಡಬೇಕು. ಹೆಪಟೈಟಿಸ್ ಬಿ ಮತ್ತು ಸಿ ವೈರಾಣು ಯಕೃತ್ತಿಗೆ ಹಾನಿ ಮಾಡುತ್ತವೆ ಎಂದು ಹೇಳಿದರು.
ಹೆಪಟೈಟಿಸ್ ಎ ಮತ್ತು ಇ ಸೋಂಕು ಮಲ, ಕಲುಷಿತ ಆಹಾರ ಮತ್ತು ನೀರಿನಿಂದ ಹರಡುತ್ತದೆ. ಹೆಪಟೈಟಿಸ್ ಬಿ ಮತ್ತು ಸಿ ಸೋಂಕು ರಕ್ತ, ಲೈಂಗಿಕ ಮಾರ್ಗದ ಮೂಲಕ ಹರಡುತ್ತದೆ. ದೇಶದಲ್ಲಿ ಸುಮಾರು ೩.೫ ಕೋಟಿ ಜನರು ಹೆಪಟೈಟಿಸ್ ಬಿ ಮತ್ತು ಸಿ ಸಮಸ್ಯೆ ಎದುರಿಸುತ್ತಿದ್ದಾರೆ. ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳದಿರುವುದೇ ಪ್ರಕರಣ ಏರಿಕೆಗೆ ಕಾರಣ ಎಂದು ಹೇಳಿದರು.
ಹೆಪಟೈಟಿಸ್ ವೈರಾಣುವನ್ನು ಆರಂಭದಲ್ಲೇ ಪತ್ತೆ ಹಚ್ಚಿದರೆ ಯಕೃತ್ತಿಗೆ ಹಾನಿಯನ್ನು ತಡೆಯಬಹುದು. ಕೆಲಪ್ರಕರಣಗಳಲ್ಲಿ ಸೋಂಕಿತರಿಗೆ ಲಕ್ಷಣಗಳು ಕೊನೆ ಹಂತದವರೆಗೆ ಗೋಚರಿಸುವುದಿಲ್ಲ. ಹೀಗಾಗಿ ನಿಯಮಿತ ತಪಾಸಣೆ ಅಗತ್ಯ ಎಂದೂ ಅವರು ಉಲ್ಲೇಖಿಸಿದರು.