ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಛಲದಿಂದ ಉಜ್ವಲ ಭವಿಷ್ಯ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.೨೯-ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಛಲದಿಂದ ವ್ಯಾಸಂಗ ಮಾಡಿದರೆ, ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಮಾನಸ ಗಂಗೋತ್ರಿ ಗಣಕ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಡಿ.ಎಸ್. ಗುರು ಸಲಹೆ ನೀಡಿದರು.
ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಅವರಣದಲ್ಲಿರುವ ಅನುಭವ ಮಂಟಪದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ರಜತ ಮಹೋತ್ಸವ ಉದ್ಘಾಟನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಅವರ ಗುರಿ ಸಾಧನೆಗೆ ಬೆಂಬಲ ನೀಡುತ್ತಿರುವ ಸಂಘಟನೆಯ ಕಾರ್ಯ ಮಹತ್ತದ್ದಾಗಿದೆ. ಶೇಕಡ ೯೦ ರಷ್ಟು ಅಂಕ ಪಡೆಯುವುದು ಸುಲಭದ ಮಾತಲ್ಲ. ಹೀಗಾಗಿ ಹೆಚ್ಚು ಅಂಕ ಪಡೆಯುವ ಜೊತೆಗೆ ಉತ್ತಮ ನಡವಳಿಕೆಯು ಸಹ ನೂರರಷ್ಟು ಫಲಿತಾಂಶ ಬಂದಂತೆ. ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಸುಜ್ಞಾನವು ಹೊಂದಿರುತ್ತದೆ. ದೊಡ್ಡ ಕನಸು ಕಟ್ಟಿಕೊಂಡು ವ್ಯಾಸಂಗ ಮಾಡುವಂತೆ ಟಿ. ಗುರು ಕಿವಿಮಾತು ಹೇಳಿದರು.
ಮರಿಯಾಲ ಮಠದ ಶ್ರೀ ಮುಮ್ಮಡಿ ಮುರುಘರಾಜೇಂದ್ರಸ್ವಾಮಿ, ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘವು ಬಹಳ ಯಶಸ್ವಿಯಾಗಿ ಮುನ್ನಡೆಯತ್ತಿದೆ. ಮಹಾಮನೆಯ ಮೂಲಕ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿದೆ. ಇಂಥ ಸಂಘಟನೆ ರಜತ ಮಹೋತ್ಸವ ಆಚರಣೆ ಮಾಡುವ ಮೂಲಕ ಸಮಾಜಮೂಖಿಯಾಗಿದೆ ಎಂದರು.
ಮೂರು ಸಂಘಗಳ ಕ್ರಿಯಾ ಸಮಿತಿಯ ಅಧ್ಯಕ್ಷ ದುಂಡುಮಾದಪ್ಪ ಮಾತನಾಡಿ, ವೀರಶೈವ ಲಿಂಗಾಯತ ಸಂಘವು ನೌಕರರ ಹಿತ ಕಾಯಲು ಸ್ಥಾಪನೆಯಾದ ಸಂಘಟನೆ ಕಳೆದ ೨೫ ವರ್ಷಗಳಿಂದ ಸಮುದಾಯದ ಅಭಿವೃದ್ದಿಗೆ ಶ್ರಮಿಸುತ್ತಿದೆ. ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಸೇವಾ ಕಾರ್ಯದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದರು.
ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ೧೯೯೯ ರಲ್ಲಿ ಆರಂಭವಾದ ಸಂಘಟನೆ ಕಳೆದ ೨೫ ವರ್ಷಗಳನ್ನು ಪೂರ್ಣಗೊಳಿಸಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ. ರಜತ ಮಹೋತ್ಸವ ಕಾರ್ಯಕ್ರಮವನ್ನು ವರ್ಷ ಪೂರ್ತಿ ಆಚರಣೆ ಮಾಡಿ ಅರ್ಥ ಪೂರ್ಣವಾಗಿ ಆಚರಿಸಲಾಗುತ್ತದೆ. ೨೫ ಹಳ್ಳಿಗಳಲ್ಲಿ ಶರಣ ಚಿಂತನ ಸಿಂಚನ ಕಾರ್ಯಕ್ರಮ, ಮರಿಯಾಲದಲ್ಲಿ ಜಿಲ್ಲಾ ಮಟ್ಟದ ಭಜನಾ ಮೇಳ, ಆರೋಗ್ಯ ತಪಾಸಣಾ ಶಿಬಿರ, ಶರಣರ ವಿಚಾರ ಧಾರೆಗಳು, ತತ್ವ ಅದರ್ಶಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.
ವೇದಿಕೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಗೌರಿಶಂಕರ್, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಿ.ಎಲ್, ಮುದ್ದುಬಸವಣ್ಣ ಹಾಗೂ ಮೂರು ಸಂಘಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತಿರಿದ್ದರು.