ನನ್ನ ೧೪ ವರ್ಷಗಳ ವನವಾಸ ಅಂತ್ಯ: ವಿಜಯಶಂಕರ್
ಸಂಜೆವಾಣಿ ನ್ಯೂಸ್
ಮೈಸೂರು: ಜು.೨೯:- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನನಗ ಕರೆ ಮಾಡಿ ನಿಮಗೆ ಉನ್ನತವಾದ ಹುದ್ದೆ ಕೊಡುತ್ತಿದ್ದೇವೆ ಎಂದು ತಿಳಿಸಿದರು. ಜೀವನಪೂರ್ತಿ ಪಕ್ಷ ಹಾಗೂ ಸಂಘದ ಏಳಿಗೆಗೆ ಶ್ರಮಿಸಿದ ನನ್ನನ್ನು ಜನರು ಮರೆತರೂ ಪಕ್ಷ ಗುರುತಿಸಿ ಜವಾಬ್ದಾರಿ ಕೊಟ್ಟಿರುವುದಕ್ಕೆ ಖುಷಿಯಾಗಿದೆ ಎಂದು ಮೇಘಾಲಯದ ನೂತನ ರಾಜಪಾಲರಾಗಿ ಆಯ್ಕೆಯಾದ ಸಿ.ಎಚ್.ವಿಜಯಶಂಕರ್ ತಿಳಿಸಿದ್ದಾರೆ.
ರಾಜ್ಯಪಾಲ ಹುದ್ದೆಗೆ ಆಯ್ಕೆಯಾದ ನಂತರ ಸಿಹೆಚ್.ವಿಜಯಶಂಕರ್ ಅವರು ಭಾನುವಾರ ಮೈಸೂರಿನಲ್ಲಿ ಮಾಧ್ಯಮಗಳಿಂದಿಗೆ ಮಾತನಾಡಿದರು. ನನ್ನ ೧೪ ವರ್ಷಗಳ ವನವಾಸ ಅಂತ್ಯ ಆಗಿದೆ. ಹಾಸನ ಲೋಕಸಭಾ ಚುನಾವಣೆ ನಂತರ ನಾನು ರಾಜಕೀಯ ಹಿನ್ನಡೆ ಅನುಭಿಸಿದೆ. ಅಲ್ಲಿಂದ ಜನ ನನ್ನನ್ನು ಮರೆತಿದ್ದರು. ಅಂತಹವರನ್ನ ಗುರುತಿಸಿ ಇಂತಹ ಉನ್ನತ ಹುದ್ದೆ ಕೊಟ್ಟಿರುವುದು ನನ್ನ ಪಕ್ಷ. ಎಲ್ಲವೂ ನನ್ನ ತಾಳ್ಮೆಯಿಂದಲೇ ಸಾಧ್ಯವಾಗಿದೆ ಎಂದು ಹೇಳಿದರು.
ಚಾಮುಂಡೇಶ್ವರಿ ವರ್ಧಂತಿ ದಿನ ನರೇಂದ್ರ ಮೋದಿ ಅವರೇ ಕರೆ ಮಾಡಿ ನಿಮಗೆ ಉನ್ನತವಾದ ಹುದ್ದೆ ಕೊಡುತ್ತಿದ್ದೇವೆ ಎಂದರು. ಅದು ನನಗೆ ಅವರು ಮಾಡಿದ ಮಾಡಿದ ಮೊದಲ ಫೋನ್ ಕರೆ ಆಗಿತ್ತು. ಇದರಿಂದಾಗಿ ನನಗೆ ತುಂಬಾ ಆಶ್ಚರ್ಯವಾಯಿತು. ಈ ಸಮಯದಲ್ಲಿ ಸೋತಾಗಲೂ ನನಗೆ ಅಧಿಕಾರ ಕೊಟ್ಟ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತು ಈಗ ಅಧಿಕಾರ ಕೊಟ್ಟಿರುವ ಪ್ರಧಾನ ಮಂತ್ರಿಯನ್ನ ಸ್ಮರಿಸುತ್ತೇನೆ ಎಂದು ತಿಳಿಸಿದರು.
ಪ್ರತಿ ಹಂತದಲ್ಲೂ ನನ್ನ ಮೇಲೆ ಸಂಘ ಮತ್ತು ಪಕ್ಷದ ಜನರ ಋಣ ಇದೆ. ನಾನು ಈಗಲೂ ಅವರ ಋಣದಲ್ಲೇ ಇದ್ದೇನೆ. ಇನ್ಮುಂದೆ ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಸದ್ಯ ಮೇಘಾಲಯದ ರಾಜ್ಯಪಾಲರ ಕಚೇರಿ ದೂರವಾಣಿಗಾಗಿ ಕಾಯುತ್ತಿದ್ದೇನೆ. ಸದ್ಯ ಎಲ್ಲಾ ಶಿಷ್ಟಾಚಾರದ ಬಗ್ಗೆ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜು.೩೦ರಂದು ಪ್ರಮಾಣವಚನ ಸ್ವೀಕರಿಸಬೇಕೆಂದುಕೊಂಡಿದ್ದೇನೆ ಎಂದು ಹೇಳಿದರು.
ಎಚ್‌ಡಿಕೆ ಅಭಿನಂದನೆ: ಮೇಘಾಲಯ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿರುವ ಮಾಜಿ ಸಂಸದ ವಿಜಯಶಂಕರ್ ಅವರು ಸರಳ, ಸಜ್ಜನಿಕೆಯ ವ್ಯಕ್ತಿತ್ವದ ನಾಯಕ. ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಅವರ ಹೆಜ್ಜೆಗಳು ನಿರಂತರವಾಗಿ ಸಾಗಲಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.