ರಾಜ್ಯಕ್ಕೆ ನ್ಯಾಯ ಕೊಡಿಸಲು ಸಿದ್ಧ
ಸಂಜೆವಾಣಿ ನ್ಯೂಸ್
ಮೈಸೂರು: ಜು.೨೯:- ರಾಜ್ಯ ಕಾಂಗ್ರೆಸ್ ಸರ್ಕಾರ ಅನಗತ್ಯ ವಿವಾದ ಸೃಷ್ಟಿಸುವುದನ್ನು ಬಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರೆ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಅನುದಾನ ಕೊಡಿಸಲು ನಾನೇ ಮುಂದಾಗುತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆಯ ಮಾತನಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನ್ಯಾಯ ಆಗಿಲ್ಲ. ವಿವಾದಗಳನ್ನು ಸೃಷ್ಟಿಸುವ ಮೂಲಕ ರಾಜ್ಯ ಸರ್ಕಾರವೇ ಅನ್ಯಾಯ ಮಾಡಿಕೊಳ್ಳುತ್ತಿದೆ. ಸಂಸತ್ ಕಲಾಪಕ್ಕೂ ಮುನ್ನ ಕಾಟಾಚಾರಕ್ಕೆ ರಾಜ್ಯದ ಸಂಸದರ ಸಭೆ ಕರೆದು ಮನವಿ ಸಲ್ಲಿಸಿದ್ದರು. ಆದರೆ ಇಲಾಖೆವಾರು ಮಂತ್ರಿಗಳನ್ನು ಭೇಟಿ ಮಾಡಿದ್ದರೆ ಕೆಲಸ ಆಗುತ್ತದೆ. ಕರ್ನಾಟಕದ ಪರ ಕೇಂದ್ರದ ಇಲಾಖೆಗಳಲ್ಲಿ ಧ್ಬನಿ ಎತ್ತಿ ಕೆಲಸ ಮಾಡಲು ನಾನು ಸಿದ್ಧ. ಆದರೆ ನಾನು ಕರ್ನಾಟಕಕ್ಕೆ ಬರುವುದನ್ನೇ ರಾಜ್ಯದ ಕೆಲವು ನಾಯಕರು ಸಹಿಸದವರಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರರ್ಶನಿಸಿದರು.
ಪದೇ ಪದೇ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕೇಂದ್ರವನ್ನು ಬಯ್ದುಕೊಂಡು ತಿರುಗಿದರೆ ನಿಮ್ಮ ಕೆಲಸ ಆಗುವುದಿಲ್ಲ. ನಿಮ್ಮ ನಡವಳಿಕೆ ಬದಲಿಸಿಕೊಳ್ಳಿ, ಸಣ್ಣತನ ಬಿಡಿ ಎಂದು ಹೇಳಿದರು. ಈ ವರ್ಷ ನಮ್ಮ ರಾಜ್ಯದ ತೆರಿಗೆ ಪಾಲಿನ ೪೫,೪೮೫ ಕೋಟಿ ಹಾಗೂ ಅನುದಾನದ ರೂಪದಲ್ಲಿ ೧೫ ಸಾವಿರ ಕೋಟಿ ಸೇರಿ ಒಟ್ಟು ೬೦ ಸಾವಿರ ಕೋಟಿ ಹಣ ಬರಲಿದೆ. ಬೆಂಗಳೂರು ಪೆರಿಪೆರಿಯಲ್ ರಸ್ತೆ ನಿರ್ಮಾಣಕ್ಕೆ ೩ ಸಾವಿರ ಕೋಟಿ ಅನುದಾನ ನೀಡಲು ಕೇಂದ್ರ ಸಿದ್ಧವಿದೆ. ಆದರೆ, ಯೋಜನೆಗೆ ಬೇಕಾದ ಉಳಿದ ೨೬ ಸಾವಿರ ಕೋಟಿ ಭರಿಸಲು ಸರ್ಕಾರದ ಬಳಿ ಹಣವಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಜೂನ್‌ನಲ್ಲಿ ಸರ್ಕಾರವೇ ಅಮಾನತು ಮಾಡಿದ್ದ ಕಲ್ಲೇಶ ಎಂಬ ಅಧಿಕಾರಿಯನ್ನು ಮುಂದಿಟ್ಟುಕೊಂಡು ಇ.ಡಿ. ವಿರುದ್ಧ ಎಫ್‌ಐಆರ್ ದಾಖಲಿಸಿದ್ದೀರಿ. ೪೦ ಕೋಟಿ ಅನುದಾನ ಬಳಕೆಯ ಲೆಕ್ಕ ನೀಡದ್ದಕ್ಕೆ ಆ ಅಧಿಕಾರಿ ಬಗ್ಗೆ ಕೇಂದ್ರ ಎಂಟು ಪತ್ರ ಬರೆದಿತ್ತು. ಇಂತಹವರನ್ನು ಸಮರ್ಥಿಸಿಕೊಂಡಿದ್ದೀರಿ. ಸರ್ಕಾರದ ಕಾನೂನು ಸಲಹೆಗಾರ ಪೊನ್ನಣ್ಣ ಸರಿಯಾಗಿ ಸಲಹೆ ನೀಡಲಿಲ್ಲವೇ? ಎಂದು ಎಚ್‌ಡಿಕೆ ಪ್ರಶ್ನಿಸಿದರು.
ಕೇಂದ್ರ ಬಜೆಟ್ ಕೇವಲ ಎರಡು ರಾಜ್ಯಗಳ ಬಜೆಟ್ ಎಂಬ ಆರೋಪ ಸರಿಯಲ್ಲ. ಕೇಂದ್ರ ಬಜೆಟ್ ದೇಶದ ಸಮಗ್ರ ಅಭಿವೃದ್ಧಿ ಸಲುವಾಗಿಯೇ ಹೊರತು ರಾಜ್ಯಗಳ ಅಭಿವೃದ್ಧಿಗಾಗಿ ಅಲ್ಲ. ಆಂಧ್ರ ವಿಭಜನೆ ಆದಾಗಲೇ ಯುಪಿಎ ಸರ್ಕಾರ ಕೇಂದ್ರದಲ್ಲಿ ವಿಶೇಷ ಪ್ಯಾಕೇಜ್ ಕಾಯ್ದೆ ತಂದಿತ್ತು. ಈಗ ಆಂಧ್ರದಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ೧೫ ಸಾವಿರ ಕೋಟಿ ನೀಡಿದೆ. ಕೋಸಿ ನದಿ ಪ್ರವಾಹ ನಿಯಂತ್ರಣಕ್ಕೆ ೨೦ಕ್ಕೂ ಹೆಚ್ಚು ಬ್ಯಾರೇಜ್‌ಗಳ ನಿರ್ಮಾಣಕ್ಕೆ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡಿದೆ ಎಂದು ಸಮರ್ಥಿಸಿಕೊಂಡರು.
ಆರೂವರೆ ಕೋಟಿ ಜನರ ಸಿಎಂ: ಸಿದ್ದರಾಮಯ್ಯ ಕೇವಲ ಹಿಂದುಳಿದ ವರ್ಗದವರ ಮುಖ್ಯಮಂತ್ರಿ ಅಲ್ಲ. ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಮುಖ್ಯಮಂತ್ರಿ. ಅವರ ವಿರುದ್ಧ ಯಾರು ಅಸೂಯೆ ಪಡುತ್ತಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ನಿಮ್ಮಲ್ಲೇ ಟವಲ್ ಹಾಸಿಕೊಂಡು ಕೂತವರೇ ಚಿತಾವಣೆ ಮಾಡುತ್ತಿದ್ದಾರೆ. ೧೫-೨೦ ವರ್ಷಗಳ ಹಿಂದೆ ಇದ್ದ ಸಿದ್ದರಾಮಯ್ಯ ಈಗ ಇಲ್ಲ ಎಂದು ಲೇವಡಿ ಮಾಡಿದರು.
ಎಚ್‌ಎಂಟಿಗೆ ಮರುಜೀವ
ರಾಜ್ಯದ ಪ್ರತಿಷ್ಠಿತ ಕೈಗಾರಿಕೆಗಳಾದ ಎಚ್‌ಎಂಟಿ, ಭದ್ರಾವತಿ ಕಾರ್ಖಾನೆ ಸೇರಿದಂತೆ ದೇಶದ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಲ್ಲಿ ಮರುಹೂಡಿಕೆ ಮೂಲಕ ಅವುಗಳಿಗೆ ಮರುಜೀವ ನೀಡುವ ಕೆಲಸ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಎಚ್‌ಎಂಟಿ ಕಾರ್ಖಾನೆಗೆ ನಾನು ಒಮ್ಮೆ ಭೇಟಿ ನೀಡಿದ ಬಳಿಕ ಅದರ ಷೇರು ಮೌಲ್ಯ ೪೫ರಿಂದ ರೂ.೯೫ಕ್ಕೆ ಏರಿದೆ. ಅದರಂತೆಯೇ, ರಾಜ್ಯದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಸಾರ್ವಜನಿಕ ಉದ್ದಿಮೆಗಳಿಗೆ ಅಗತ್ಯ ಅನುದಾನ ನೀಡಿ ಪುನಶ್ಚೇತನ ಮಾಡಲಾಗುವುದು. ಮುಂದಿನ ಐದಾರು ತಿಂಗಳಲ್ಲಿ ಇದಕ್ಕೊಂದು ರೂಪ ನೀಡುತ್ತೇನೆ ಎಂದು ಭರವಸೆ ನೀಡಿದರು.
ಹಗರಣದಿಂದ ಪಾರಾಗಲು ಆಯೋಗ ರಚಿಸಿದ ಸಿಎಂ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬದಲಿ ನಿವೇಶನ ಹಂಚಿಕೆ ಹಗರಣದಿಂದ ಪಾರಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾ.ದೇಸಾಯಿ ಆಯೋಗ ರಚನೆ ಮಾಡಿದ್ದಾರೆ. ದೇಸಾಯಿ ಆಯೋಗದ ವರದಿಯನ್ನು ತಗೊಂಡು ನೆಕ್ಕಲು ಆಗುತ್ತದೆಯೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಪ್ರಕರಣದಿಂದ ಬಚಾವ್ ಆಗುವ ಸಲುವಾಗಿಯೇ ಸಿದ್ದರಾಮಯ್ಯ ಅವರು, ದೇಸಾಯಿ ನೇತೃತ್ವದ ಆಯೋಗ ರಚನೆ ಮಾಡಿದ್ದಾರೆ. ಈ ಸರ್ಕಾರ ಹಾಗೂ ಸಿದ್ದರಾಮಯ್ಯ ಒಂದು ಕ್ಷಣವೂ ಮುಂದುವರಿಯಬಾರದು. ಸಿದ್ದರಾಮಯ್ಯ ಅವರ ಪತ್ನಿ ೫೦ ಅಲ್ಲದಿದ್ದರೆ ನೂರು ನಿವೇಶನ ಬೇಕಾದರೂ ಪಡೆದುಕೊಳ್ಳಲಿ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಕಾನೂನುಬದ್ಧವಾಗಿ ಪಡೆದುಕೊಳ್ಳಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.
ಸಿದ್ದರಾಮಯ್ಯ ಪತ್ನಿಗೆ ನಿವೇಶನಗಳನ್ನು ಕಾನೂನು ಬಾಹಿರವಾಗಿ ನೀಡಲಾಗಿದೆ. ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗಿದೆ. ೧೬/೨ ಆಗಿರುವ ಜಮೀನನ್ನು ಇವರು ಹೇಗೆ ಖರೀದಿ ಮಾಡಿದರು? ಮಲ್ಲಿಕಾರ್ಜುನಸ್ವಾಮಿ ಖರೀದಿ ಮಾಡಿದಾಗ ಜಿಲ್ಲಾಧಿಕಾರಿ ಕೃಷಿ ಭೂಮಿ ಎಂದು ವರದಿ ಕೊಟ್ಟಿದ್ದಾರೆ. ಆಗ ಡಿಸಿ ಏನು ಮಣ್ಣು ತಿನ್ನುತ್ತಿದ್ನಾ? ಸ್ಥಳಕ್ಕೆ ಹೋಗಿ ನೋಡಿದ್ನಾ? ಎಂದು ಎಚ್‌ಡಿಕೆ ಏಕವಚನದಲ್ಲಿ ಕಿಡಿಕಾರಿದರು.
ಆಗಿರುವ ಅನ್ಯಾಯ ಸರಿಪಡಿಸಬೇಕು ಎಂಬುದು ನಮ್ಮ ಆಗ್ರಹ. ಮುಡಾ ಹಗರಣದ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿಯ ಸಂಯುಕ್ತ ಹೋರಾಟ ಮುಂದುವರಿಯಲಿದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.