ಐವತ್ತು ವರ್ಷ ಕಳೆದರು ಬಡವರಿಗೆ ಹಂಚಿಕೆಯಾಗದ ನಿವೇಶನಗಳು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.೨೯: ಪಟ್ಟಣದ ಕಡುಬಡವರಿಗೆ ನಿವೇಶನ ಹಂಚುವ ಸದುದ್ದೇಶದಿಂದ ಭೂ ಸ್ವಾಧೀನ ಮಾಡಿಕೊಳ್ಳಲಾದ ಟಿ.ಬಿ ಬಡಾವಣೆಯಲ್ಲಿ ಇದುವರೆಗೂ ಒಂದೇ ಒಂದು ನಿವೇಶನಗಳನ್ನೂ ಪುರಸಭೆ ಕಡುಬಡವರಿಗೆ ಹಂಚಿಕೆ ಮಾಡದೆ ಸ್ವಾಧೀನವಾದ ಜಮೀನು ಅನ್ಯಾಕ್ರಮಣಗೊಳ್ಳುತ್ತಿದೆ.
ಪಟ್ಟಣದ ಪುರಸಭೆ ಟಿ.ಬಿ ಬಡಾವಣೆಗೆ ಸಂಬಂಧಿಸಿದಂತೆ ಸರ್ವೆ ನಂ ೨೮೦, ೨೮೧, ೨೮೫, ೨೮೬ ಹಾಗೂ ೨೯೦ ರಲ್ಲಿ ಒಟ್ಟು ೨೧ ಎಕರೆ ೧೯ ಗುಂಟೆ ಕೃಷಿ ಭೂಮಿಯನ್ನು ಕಡು ಬಡವರಿಗೆ ನಿವೇಶನ ಹಂಚುವ ಉದ್ದೇಶದಿಂದ ನಂ.ಯೂಐ.೪/೧೯೭೬-೭೭ ರಂತೆ ಕಳೆದ ೪೮ ವರ್ಷಗಳ ಹಿಂದೆ ಭೂ ಸ್ವಾಧೀನ ಮಾಡಿಕೊಂಡಿತ್ತು. ಭೂ ಸ್ವಾಧೀನವಾಗಿ ಹತ್ತಿರ ಹತ್ತಿರ ಐದು ದಶಕಗಳು ಸಮೀಪಿಸುತ್ತಿದ್ದರೂ ಪುರಸಭೆ ಇದುವರೆಗೂ ಕಡು ಬಡವರಿಗೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ.
೭೦ರ ದಶಕದಲ್ಲಿ ಅಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ದಿವಂಗತ ಕೆ.ಜೆ.ಬೋರಲಿಂಗೇಗೌಡ ಅವರು ಪಟ್ಟಣದ ಕಡು ಬಡವರಿಗೆ ನಿವೇಶನ ಹಂಚುವ ಕಾರಣಕ್ಕೆ ಟಿ.ಬಿ.ಬಡಾವಣೆಯ ಜಾಗವನ್ನು ನಿಯಮಾನುಸಾರ ಭೂ ಸ್ವಾಧೀನ ಮಾಡಿದ್ದರು. ಅನಂತರ ಬಂದ ಅನೇಕ ಪುರಸಭೆಯ ಅಧ್ಯಕ್ಷರುಗಳು ನಿಯಮ ಮೀರಿ ನಿವೇಶನಗಳನ್ನು ಹಂಚಿಕೆ ಮಾಡಿದ ಪರಿಣಾಮ ಪಟ್ಟಣದ ಹೇಮಾವತಿ ಬಡಾವಣೆ ಹಾಗೂ ಟಿ.ಬಿ.ಬಡಾವಣೆಯ ಅಕ್ರಮದ ತನಿಖೆಗೆ ಒತ್ತಾಯಿಸಿ ಪುರಸಭೆಯ ಸದಸ್ಯ ಹಾಗೂ ಪ್ರಸಕ್ತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಕೆ.ಸಿ.ಮಂಜುನಾಥ್ ಅವರು ೨೦೦೨-೦೩ ನೇ ಸಾಲಿನಲ್ಲಿ ಅಂದಿನ ಲೋಕಾಯುಕ್ತರಾಗಿದ್ದ ವೆಂಕಟಾಚಲಯ್ಯ ಅವರಿಗೆ ದೂರು ನೀಡಿದ್ದರು. ಹೇಮಾವತಿ ಬಡಾವಣೆಯ ನಿವೇಶನ ಹಂಚಿಕೆಯ ಸಂಬಂಧ ಲೋಕಾಯುಕ್ತ ತನಿಖಾ ವರದಿ ಬಂದಿದ್ದು ಟಿ.ಬಿ.ಬಡಾವಣೆಯ ಬಗೆಗಿನ ತನಿಖಾ ವರದಿ ಬಾಕಿ ಇದೆ.
ಲೋಕಾಯುಕ್ತರ ತನಿಖಾ ವರದಿ ಬಾಕಿಯಿರುವಾಗಲೇ ಕಡು ಬಡವರ ನಿವೇಶನಕ್ಕೆ ಮೀಸಲಾದ ಟಿ.ಬಿ.ಬಡಾವಣೆ ಮಾತ್ರ ಪಟ್ಟಣದ ಕಡು ಬಡುವರ ಕಣ್ಣ ಮುಂದೆಯೇ ಅನ್ಯಾಕ್ರಮಣಕ್ಕೆ ಒಳಗಾಗಿ ಕರಗುತ್ತಿದೆ. ಟಿ.ಬಿ.ಬಡಾವಣೆಯಲ್ಲಿ ಟೌನ್ ಪ್ಲಾನಿಂಗ್ ಮಾಡಿ ನಿವೇಶನಗಳನ್ನು ನಿರ್ಮಿಸಬೇಕಾದ ಪುರಸಭೆ ತನ್ನ ಮೂಲ ಉದ್ದೇಶವನ್ನೆ ಮರೆತಿದೆ. ಟಿ.ಬಿ.ಬಡಾವಣೆಯಲ್ಲಿ ಬಡವರ ಮನೆಗಳು ತಲೆ ಎತ್ತುವ ಬದಲು ಖಾಸಗಿ ಶಾಲೆ, ಪುರಸಭೆ ಸೇರಿದ ಖಾಸಿಂಖಾನ್ ಸಮುದಾಯ ಭವನ ( ಈಗ ಪುರಸಭೆಯ ಆಡಳಿತ ಕಛೇರಿಯಾಗಿದೆ ), ಶಹರಿ ರೋಜ್ ಗಾರ್ ಭವನ, ಡಾ.ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಂ ಭವನ, ವಾಲ್ಮೀಕಿ ಭವನಗಳು ತಲೆ ಎತ್ತಿವೆ. ಇದರ ಜೊತೆಗೆ ಮಾಜಿ ಸ್ಪೀಕರ್ ದಿವಂಗತ ಕೃಷ್ಣ ಪ್ರತಿಷ್ಟಾನದ ಗಾಂಧಿ ಭವನ, ಒಕ್ಕಲಿಗರ ಭವನ, ವೀರಶೈವ ಸಮುದಾಯದ ಬಸವ ಭವನ ನಿರ್ಮಾಣಕ್ಕೆ ಕೆಲವು ಸಂಘ ಸಂಸ್ಥೆಗಳು ಹಕ್ಕೊತ್ತಾಯ ಆರಂಭಿಸಿವೆ. ಜಿಲ್ಲಾ ಯೋಜನಾಧಿಕಾರಿಗಳ ಸರ್ವೆ ವರದಿಯಂತೆ ಸದರಿ ಟಿ.ಬಿ.ಬಡಾವಣೆಗಳಲ್ಲಿ ಸಮುದಾಯ ಭವನಗಳಲ್ಲದೆ ೩೪ ಅಕ್ರಮ ಮನೆಗಳು ನಿರ್ಮಾಣವಾಗಿವೆ. ಬಡವರಿಗೆ ಹಂಚಿಕೆಯಾಗಬೇಕಾಗಿದ್ದ ನಿವೇಶನಗಳು ಸದ್ದಿಲ್ಲದೆ ಅನ್ಯಾಕ್ರಮಣವಾಗುತ್ತಿದ್ದರೂ ಪುರಸಭೆ ಹಾಗೂ ಜಿಲ್ಲಾಡಳಿತ ಮೌನವಾಗಿವೆ.
ಕಡು ಬಡವರಿಗೆ ಹಂಚಿಕೆ ಮಾಡಬೇಕಾದ ಜಾಗವನ್ನು ಮೂಲ ಉದ್ದೇಶಕ್ಕೆ ಬಳಕೆ ಮಾಡದೆ ಲೋಕಾಯುಕ್ತರ ತನಿಖಾ ವರದಿ ಬರುವುದಕ್ಕೂ ಮುನ್ನವೇ ಜಾತಿ ಭವನಗಳಿಗೆ, ಖಾಸಗಿ ಸಂಘಗಳಿಗೆ, ಖಾಸಗಿ ಶಾಲೆಗೆ ನೀಡಿರುವುದರ ವಿರುದ್ದ ಪುರಸಭೆಯ ಸದಸ್ಯ ಹಾಗೂ ಪ್ರಸಕ್ತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಕೆ.ಸಿ.ಮಂಜುನಾಥ್ ಅವರು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ೧೨-೦೨-೨೦೨೪ ರಂದು ಲಿಖಿತ ಮನವಿ ನೀಡಿ ಟಿ.ಬಿ.ಬಡಾವಣೆಯಲ್ಲಿ ನಿಯಮಬಾಹಿರವಾಗಿ ಖಾಸಗಿ ಸಂಘಟನೆಗಳಿಗೆ ನಿವೇಶನ ನೀಡುವುದನ್ನು ತಡೆಯಬೇಕಲ್ಲದೆ ಒತ್ತುವರಿ ತೆರವುಗೊಳಿಸಿ ಭೂ ಸ್ವಾಧೀನ ಪ್ರದೇಶಕ್ಕೆ ತಂತಿ ಬೇಲಿ ಹಾಕಿಸುವಂತೆ ಒತ್ತಾಯಿಸಿದ್ದಾರೆ. ಕೆ.ಸಿ.ಮಂಜುನಾಥ್ ಅವರ ದೂರು ಪತ್ರಕ್ಕೆ ಸ್ಪಂಧಿಸಿರುವ ಉಪ ಮುಖ್ಯಮಂತ್ರಿಗಳು ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಉಪ ಮುಖ್ಯಮಂತ್ರಿಗಳ ಪತ್ರದ ಆಧಾರದ ಮೇಲೆ ದಿನಾಂಕ ೩೦-೦೪-೨೦೨೪ ರಂದು ಜಿಲ್ಲಾಧಿಕಾರಿಗಳ ಕಛೇರಿಯಿಂದ ಪುರಸಭೆಗೆ ನಿರ್ದೇಶನ ಪತ್ರ ಬಂದಿದ್ದು ಪುರಸಭೆಯ ಆಸ್ತಿ ಉಳಿಸುವ ನಿಟ್ಟಿನಲ್ಲಿ ಭೂ ಸ್ವಾಧೀನವಾಗಿರುವ ಜಮೀನನ್ನು ಭೂ ಮಾಪನ ಇಲಾಖೆಯಿಂದ ಅಳತೆ ಮಾಡಿಸಿ ಹದ್ದುಬಸ್ತು ಮಾಡಬೇಕಲ್ಲದೆ ಒತ್ತುವರಿ ತೆರವುಗೊಳಿಸಿ ಒತ್ತುವರಿದಾರರ ವಿರುದ್ದ ಕ್ರಿಮಿನಲ್ ಮೊಕದ್ದೊಮ್ಮೆ ದಾಖಲಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಕಛೇರಿಯ ನಿರ್ದೇಶನದ ಮೇರೆಗೆ ಪುರಸಭೆ ೦೪-೦೬-೨೦೨೪ ರಲ್ಲಿ ಪಟ್ಟಣದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಪತ್ರ ಬರೆದು ಟಿ.ಬಿ.ಡಾವಣೆಯ ಸರ್ವೆ ನಂ. ೨೮೦, ೨೮೧, ೨೮೫, ೨೮೬ ಮತ್ತು ೨೯೦ ರ ಪೋಡ್ ನಂಬರುಗಳನ್ನು ಅಳತೆ ಮಾಡಿ ಗಡಿ ಗುರುತಿಕೊಡುವಂತೆ ಕೋರಿದೆ. ತಿಂಗಳು ಕಳೆದರೂ ಭೂ ಮಾಪನ ಇಲಾಖೆ ಮಾತ್ರ ಇತ್ತ ತಲೆಹಾಕಿಲ್ಲ. ಪುರಸಭೆ ಮತ್ತು ಜಿಲ್ಲಾಡಳಿತ ಈಗಲಾದರೂ ಸಕ್ರಿಯವಾಗಿ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಿ ಸೂರಿನ ಕನಸು ಕಾಣುತ್ತಿರುವ ಪಟ್ಟಣದ ಕಡು ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವುದೆ? ಕಾದು ನೋಡಬೇಕಾಗಿದೆ.
ಟಿ.ಬಿ ಬಡಾವಣೆ ಅನ್ಯಾಕ್ರಮಣಕ್ಕೆ ಒಳಗಾಗಿ ಒತ್ತುವರಿಯಾಗುತ್ತಿದ್ದು ಇದನ್ನು ಜಿಲ್ಲಾಡಳಿತ ತಡೆಗಟ್ಟಲೇ ಬೇಕಾಗಿದೆ. ಡಾ.ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಂ ಭವನ, ವಾಲ್ಮೀಕಿ ಭವನ ನಿರ್ಮಾಣಕ್ಕೆ ಟಿ.ಬಿ.ಬಡಾವಣೆಯಲ್ಲಿ ಜಾಗಕೊಟ್ಟಿರುವುದರ ಹಿಂದೆ ಸದುದ್ದೇಶವಿದೆ. ಆದರೆ ಇತರ ವ್ಯಕ್ತಿಗತ ಸಂಘಟನೆಗಳಿಗೆ ಇಲ್ಲಿ ಜಾಗ ನೀಡುವ ಬದಲು ಮೂಲ ಅಶಯದಂತೆ ಕಡು ಬಡವರಿಗೆ ನಿವೇಶನ ಹಂಚಿಕೆಯಾಗಬೇಕು. ಗ್ರಾಮೀಣ ಪ್ರದೇಶದಲ್ಲೂ ರೈತ ಕುಟುಂಬಗಳಿಗೆ ನಿವೇಶನದ ಕೊರತೆಯಿದೆ. ಸರ್ಕಾರಿ ಜಾಗ ಇಲ್ಲದ ಕಡೆ ಖಾಸಗಿಯವರಿಂದ ಅಗತ್ಯ ಭೂಮಿಯನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ ನಿವೇಶನ ರಹಿತರಿಗೆ ನಿವೇಶನ ಹಂಚುವ ಅಧಿಕಾರವನ್ನು ರಾಜ್ಯ ಸರ್ಕಾರ ಪ್ರತಿ ಗ್ರಾಮ ಪಂಚಾಯತಿಗಳಿಗೂ ಕೊಟ್ಟಿದೆ. ಆದರೆ ತಾಲೂಕಿನಲ್ಲಿ ಯಾವುದೇ ಗ್ರಾಮ ಪಂಚಾಯತಿ ನಿವೇಶನ ರಹಿತ ಬಡವರಿಗೆ ನಿವೇಶನ ಹಂಚಿಕೆಗೆ ಮುಂದಾಗಿಲ್ಲ. ಗ್ರಾಮೀಣ ಭಾಗದಲ್ಲೂ ಬಡವರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಗ್ರಾಮ ಪಂಚಾಯತಿಗಳು ಆರಂಭಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯಾಧಿಕಾರಿಗಳು ಕ್ರಮ ವಹಿಸುವಂತೆ ತಾಲೂಕು ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಒತ್ತಾಯಿಸಿದ್ದಾರೆ.