ದಿ. ಬಿ. ರಾಚಯ್ಯ ರವರ ೧೦೨ನೇ ಜನ್ಮದಿನೋತ್ಸವ: ಜಿಲ್ಲಾಧಿಕಾರಿಗಳಿಂದ ಬಿ. ರಾಚಯ್ಯ ಸ್ಮಾರಕ ನಿರ್ಮಾಣ ಅಂತಿಮ ಸಿದ್ದತೆಗಳ ಪರಿಶೀಲನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. ೨೮- ಮಾಜಿ ರಾಜ್ಯಪಾಲರಾದ ದಿ. ಬಿ. ರಾಚಯ್ಯ ಅವರ ೧೦೨ ಜನ್ಮದಿನೋತ್ಸವ ಅಂಗವಾಗಿ ಆ.೧೦ ರಂದು ಆಲೂರಿನಲ್ಲಿರುವ ಬಿ. ರಾಚಯ್ಯ ಅವರ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಸಚಿವರು ಆಗಮಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಕೊಳ್ಳೇಗಾಲದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರೊಂದಿಗೆ ಆಲೂರಿನಲ್ಲಿರುವ ದಿ. ಬಿ. ರಾಚಯ್ಯ ಅವರ ಸ್ಮಾರಕ ನಿರ್ಮಾಣ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ಅಂತಿಮ ಸಿದ್ದತೆಗಳನ್ನು ಪರಿಶೀಲನೆ ಮಾಡುವ ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಮುಖ್ಯಮಂತ್ರಿಗಳ ಕಾರ್ಯಕ್ರಮಗಳ ಕುರಿತು ಸಮಾಲೋಚನೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ ಸಂಪುಟದ ಅನೇಕ ಸಚಿವರು, ಸಂಸದರು, ಹಾಗೂ ಶಾಸಕರು ಅಲೂರಿಗೆ ಆಗಮಿಸಲಿದ್ದಾರೆ.
ಬಿ .ರಾಚಯ್ಯ ಅವರ ಸ್ಮಾರಕ ಲೋಕಾರ್ಪಣೆ ಹಾಗೂ ವೇದಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪೂರ್ವ ಸಿದ್ದತೆಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ಅಲ್ಲದೇ ಬಿ.ರಾಚಯ್ಯ ಅವರ ಸ್ಮಾರಕ ಮತ್ತು ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ಛಾಯಾಚಿತ್ರಗಳು, ಅವರ ಸಾಧನೆಗಳು, ಮತ್ತು ರಾಚಯ್ಯ ಅವರು ಉಪಯೋಗಿಸುತ್ತಿದ್ದ ವಸ್ತುಗಳ ಸಂಗ್ರಹಾಲಯವನ್ನು ಬಹಳ ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಿದರು.
ದಿ. ಬಿ. ರಾಚಯ್ಯ ಅವರ ಪುತ್ರರಾದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿ.ಪಂ. ಮಾಜಿ ಸದಸ್ಯ ಆರ್. ಬಾಲರಾಜು ಮತ್ತು ಅವರ ಕುಟುಂಬದವರ ಸಲಹೆ, ಸಹಕಾರವನ್ನು ಪಡೆದು, ಸ್ಮಾರಕ ನಿರ್ಮಾಣ, ಲೋಕಾರ್ಪಣೆ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಆಗಬೇಕು. ಮುಖ್ಯಮಂತ್ರಿಗಳ ಕಾರ್ಯಕ್ರಮವಾಗಿರುವುದರಿಂದ ಸ್ವಲ್ಪವು ಲೋಪವಾಗದಂತೆ ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಶಿಲ್ಪನಾಗ್ ಪೂರ್ವಭಾವಿ ಸಭೆಯಲ್ಲಿ ಸೂಚನೆ ನೀಡಿದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೧೩ ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿ, ಅನುದಾನವನ್ನು ನೀಡಿದ್ದರು. ನಂತರ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಶ್ರೀರಾಮುಲು ಅವರು ೫೨ ಲಕ್ಷ ರೂ.ಗಳನ್ನು ನೀಡಿದ್ದರು. ಎಸ್‌ಆರ್ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಮತ್ತೆ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್. ಬೊಮ್ಮಾಯಿ ಅವರ ಅವಧಿಯಲ್ಲಿ ೨.೧೨ ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದುಕೊಳ್ಳಲಾಯಿತು. ಈ ಹಂತದಲ್ಲಿ ೫೦ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಈಗ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಹೆಚ್ಚುವರಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿಯೇ ಕೃಷ್ಣಮೂರ್ತಿ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಕರೆ ಮಾಡಿ, ಸ್ಮಾರಕದ ಅಂತಿಮ ಸಿದ್ದತೆಗಳ ಬಗ್ಗೆ ಮಾಹಿತಿ ನೀಡಿ, ಹೆಚ್ಚುವರಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಶಿಲ್ಪನಾಗ್ ಅವರು ಸಚಿವರಿಗೆ ಸಿಎಂ ಕಾರ್ಯಕ್ರಮ, ಮತ್ತೆ ಸ್ಮಾರಕ ನಿರ್ಮಾಣದ ಅಂತಿಮ ಸಿದ್ದತೆಗಳ ಮಾಹಿತಿ ನೀಡಿದರು.
೨೦೧೩ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸ್ಮಾರಕಕ್ಕೆ ಚಾಲನೆ ನೀಡಿದ್ದ ಸಿದ್ಧರಾಮಯ್ಯರವರು ಮತ್ತೆ ೧೦ ವರ್ಷಗಳ ಅವರೇ ಬಿ.ರಾಚಯ್ಯ ಅವರ ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿದ್ಧಾರೆ. ಅವರನ್ನು ಸ್ವಾಗತಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಆಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಬಿ.ರಾಚಯ್ಯ ಅವರ ಅಭಿಮಾನಿಗಳು, ಅನುಯಾಯಿಗಳು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಸ್ವಲ್ಪವು ಲೋಪವಾಗದಂತೆ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಲು ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಎಸ್‌ಪಿ ಬಿ.ಟಿ. ಕವಿತಾ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿ.ಪಂ. ಉಪ ಕಾರ್ಯದರ್ಶಿ ಲಕ್ಷ್ಮಿ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕಿ ಮಂಜುಳಾ, ಪಿಡಬ್ಲುಡಿ ಕಾರ್ಯಪಾಲಕ ಅಭಿಯಂತರ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜು, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಗಿರಿಜಾ, ತಾ.ಪಂ. ಎಇ ಪೂರ್ಣಿಮಾ, ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಮುಖಂಡರಾದ ಆರ್. ಮಹದೇವ್, ಎ.ಸಿ. ಪ್ರವೀಣ್, ಗುತ್ತಿಗೆದಾರ ಅಲೂರು ಲಿಂಗಣ್ಣ, ಕಂದಹಳ್ಳಿ ನಂಜುಂಡಸ್ವಾಮಿ, ಪ್ರಭುಪ್ರಸಾದ್, ಮಹದೇವಪ್ರಸಾದ್ ಪಸಿ, ಮಹದೇವ್, ಹೊಂಗನೂರು ಚೇತನ್ ಮೊದಲಾದವರು ಇದ್ದರು.