ತರಕಾರಿ,ಸೊಪ್ಪು ಸೊಪ್ಪು ಹೆಚ್ಚುತಿನ್ನಿ, ಅನಿಮಿಯ ಮುಕ್ತರಾಗಿ
ಕೋಲಾರ,ಜು,೨೯- ಮಕ್ಕಳು ತರಕಾರಿ,ಹಾಲು,ಹಣ್ಣುಗಳಲ್ಲಿರುವ ಪೌಷ್ಟಿಕಾಂಶದ ಮಹತ್ವ ಅರಿತು ಸೇವಿಸುವ ಮೂಲಕ ಉತ್ತಮ ಆರೋಗ್ಯ ಹೊಂದಿ ಅನಿಮಿಯಾದಿಂದ ಮುಕ್ತವಾಗಿ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಿದ್ದೇಶ್ವರಿ ಕರೆ ನೀಡಿದರು.
ಶನಿವಾರ ಶಾಲೆಯ ಆವರಣದಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದ ಸೂಚನೆಯಂತೆ ನಡೆಸಲಾಗುತ್ತಿರುವ ‘ಶಿಕ್ಷಾಸಪ್ತ’ ಕಾರ್ಯಕ್ರಮದ ೬ನೇದಿನದ ಪೌಷ್ಟಿಕಾಂಶದಿನದಡಿ ಶಾಲೆಯ ಆವರಣದಲ್ಲಿ ಸೊಪ್ಪು ಬೀಜ ಬಿತ್ತನೆ ಕಾರ್ಯದಲ್ಲಿ ಮಕ್ಕಳೊಂದಿಗೆ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಇಕೋ ಕ್ಲಬ್ ಚಟುವಟಿಕೆಗಳನ್ನು ಮುಂದುವರೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಭೂಮಿತಾಯಿ ನಡುವಿನ ಬಾಂಧವ್ಯವನ್ನು ಬಲಪಡಿಡುವ ಉಪಕ್ರಮದಡಿ ಶಾಲೆಗಳಲ್ಲಿ ತೋಟಗಾರಿಕಾ ಅಭಿಯಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶಾಲೆಯ ಆವರಣದಲ್ಲಿ ಕುಂಬಳ, ಸೊರೆಕಾಯಿ, ಅವರೆ, ಸೊಪ್ಪು, ನುಗ್ಗೆಕಾಯಿ ಗಿಡಗಳನ್ನು ಬೆಳೆಸುವ ಮೂಲಕ ಉತ್ತಮ ಪೌಷ್ಟಿಕಾಂಶವನ್ನು ಪಡೆಯಬಹುದು ಎಂದ ಅವರು, ವಿದ್ಯಾರ್ಥಿಗಳು ಊಟದೊಂದಿಗೆ ತರಕಾರಿ ಬಿಸಾಡುವ ಮನಸ್ಥಿತಿಯಿಂದ ದೂರವಾಗಿ ತರಕಾರಿ ಯಾವುದೇ ಇರಲಿ ಖುಷಿಯಿಂದ ತಿನ್ನಬೇಕು ಎಂದು ಕಿವಿಮಾತು ಹೇಳಿದರು.
ಕಲಿಕೆಯಲ್ಲಿ ಉತ್ತಮ ಸಾಧನೆಗೆ ಉತ್ತಮ ಆರೋಗ್ಯ ಅತಿ ಮುಖ್ಯವಾಗಿದೆ, ಈ ನಿಟ್ಟಿನಲ್ಲಿ ತರಕಾರಿ ಹೆಚ್ಚು ಪರಿಣಾಮಕಾರಿ ಎಂದ ಅವರು, ಹೆಚ್ಚು ತರಕಾರಿ ಸೇವಿಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ ಎಂದರು.
ಶಾಲೆಯ ಆವರಣದಲ್ಲಿ ತರಕಾರಿ ಬೆಳೆಸೋಣ, ಅದನ್ನು ಬಿಸಿಯೂಟಕ್ಕೆ ಬಳಸುವ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳೋಣ ಎಂದ ಸಂಕಲ್ಪ ಮಾಡಿ, ಗಿಡಗಳಿಗೆ ಬಿಡುವಿನ ವೇಳೆ ಹಾಗೂ ವೃತ್ತಿಶಿಕ್ಷಣ ತರಗತಿ ಸಂದರ್ಭದಲ್ಲಿ ನೀರು ಹಾಕಿ ಪೋಷಿಸಿ, ಇಬ್ಬಿಬ್ಬರು ಒಂದೊಂದು ಗಿಡದ ಜವಾಬ್ದಾರಿ ವಹಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಕ್ಕಳು ಶಾಲೆಯ ಆವರಣದಲ್ಲಿ ಸೊರೆಕಾಯಿ, ಕುಂಬಳ, ಸೊಪ್ಪು ಬೀಜಗಳ ಬಿತ್ತನೆ ಕಾರ್ಯ ನಡೆಸಿದರು.
ಶಾಲೆಯಲ್ಲಿ ೭ ದಿನ ವಿಶಿಷ್ಟ ಕಾರ್ಯಕ್ರಮ
ಶಿಕ್ಷಾಸಪ್ತ’ ಕಾರ್ಯಕ್ರಮದಡಿ ಈಗಾಗಲೇ ಐದು ದಿನಗಳ ಕಾರ್ಯಕ್ರಮ ಮುಗಿಸಲಾಗಿದೆ, ಜು.೨೨ ರಂದು ಕಲಿಕೋಪಕರಣಗಳ ದಿನ ಆಚರಿಸಲಾದಿದೆ, ಜು.೨೩ ರಂದು ನಿಪುಣ್ ಭಾರತ್ ಚಟುವಟಿಕೆಗಳ ದಿನ, ಜು.೨೪ ರಂದು ಕ್ರೀಡಾದಿನ ೨೫ ರಂದು ಸಾಂಸ್ಕೃತಿಕ ದಿನ ಆಚರಿಸಿದ್ದು ಇಂದು ಇಕೋಕ್ಲಬ್ ಹಾಗೂ ಪೌಷ್ಟಿಕಾಂಶ ದಿನ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ಸುಗುಣಾ, ಲೀಲಾ, ಶ್ವೇತಾ,ಫರೀದಾ, ಶ್ರೀನಿವಾಸಲು, ರಮಾದೇವಿ ಮತ್ತಿತರರಿದ್ದರು.