ಬಿಜೆಪಿ ಬೆಂಗಳೂರು ಗ್ರಾಮಾಂತರ ಕಾರ್ಯಕಾರಣಿ ಸಭೆ
ವಿಜಯಪುರ.ಜು೨೯:ಪಟ್ಟಣದ ಬಸವೇಶ್ವರ ಪ್ಯಾಲೆಸ್ ನಲ್ಲಿ ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಅವರು ಸಭೆಯನ್ನು ಉದ್ಘಾಟನೆ ಮಾಡಿದರು.
ಸಭೆಯಲ್ಲಿ ನರೇಂದ್ರಮೋದಿಯವರು ೩ ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಕಾರ್ಯಕಾರಿಣಿಯಲ್ಲಿ ಅಭಿನಂದನೆ ಸಲ್ಲಿಸಿದರು. ೩ ನಿರ್ಣಯಗಳಿಗೆ ಅನುಮೋದನೆ ಪಡೆದುಕೊಂಡರು. ನಿಧನರಾಗಿದ್ದ ಪಕ್ಷದ ಮುಖಂಡರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಸಭೆ ಆರಂಭ ಮಾಡಿದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಅವರು ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರಮೋದಿಯವರು ೩ ನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಇಂಡಿಯಾ ಮೈತ್ರಿಕೂಟದ ಅಪಪ್ರಚಾರಗಳ ನಡುವೆಯೂ ದೇಶದ ಜನತೆ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸವನ್ನು ಗಟ್ಟಿಗೊಳಿಸಬೇಕಾಗಿದೆ. ಒಂದು ವಾರದಲ್ಲಿ ಜಿಲ್ಲೆಯಲ್ಲಿ ಎಲ್ಲಾ ಮೋರ್ಚಾಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಬೇಕು. ರಾಜ್ಯ ಸರ್ಕಾರದಿಂದ ಜನಸಾಮಾನ್ಯರಿಗೆ ಆಗುತ್ತಿರುವ ಅನ್ಯಾಯದ ಕುರಿತು ಪ್ರತಿಯೊಬ್ಬ ಕಾರ್ಯಕರ್ತರು ತಿಳಿದುಕೊಂಡು ಜನರಿಗೆ ಮನವರಿಕೆ ಮಾಡಿಕೊಡಬೇಕು. ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು. ಬೂತ್ ಚಲೋ ಅಭಿಯಾನ ಶುರುವಾಗಬೇಕು ಎಂದರು.
ಬಿಜೆಪಿ ಮುಖಂಡ ಪಿಳ್ಳಮುನಿಶಾಮಪ್ಪ ಮಾತನಾಡಿ, ೫ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕೆಟ್ಟ ಸರ್ಕಾರವಾಗಿದೆ. ಪರಿಶಿಷ್ಟರ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡುತ್ತಿರುವುದರಿಂದ ಈ ಸಮುದಾಯ ೧೦ ವರ್ಷಗಳು ಅಭಿವೃದ್ಧಿಯಲ್ಲಿ ಹಿಂದೆ ಹೋಗಿದೆ. ಜನವಿರೋಧಿ, ಅಭಿವೃದ್ಧಿ ವಿರೋಧಿ ಸರ್ಕಾರವಾಗಿದೆ. ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಮುಂದಿನ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ನಾವು ಸಿದ್ಧರಾಗಬೇಕಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ಸತ್ಯವನ್ನು ಗಟ್ಟಿಯಾಗಿ ಮಾತನಾಡಬೇಕಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಬಡವರಿಗೆ ನ್ಯಾಯ ಸಿಗುತ್ತಿಲ್ಲ ಎಂದರು.
ಬಿಜೆಪಿ ಮುಖಂಡ ನೆಲಮಂಗಲ ನಾಗರಾಜ್ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ. ಪರಿಶಿಷ್ಟ ಜನಾಂಗದ ಅನುದಾನ ದುರ್ಬಳಕೆಯಾಗಿದೆ. ಗ್ಯಾರಂಟಿಗಳಿಗೆ ಬಳಕೆಯಾಗಿದೆ. ಮುಡಾ ಹಗರಣದಲ್ಲಿ ಲೂಟಿಯಾಗಿದೆ. ಬಡವರ ಹೆಸರಿನಲ್ಲಿ ಲೂಟಿ ಮಾಡಲಾಗಿದೆ. ಸರ್ಕಾರದ ವಿರುದ್ಧ ಪ್ರತಿಯೊಬ್ಬ ಕಾರ್ಯಕರ್ತ ಧ್ವನಿಯೆತ್ತಬೇಕು ಎಂದರು.
ಬಿಜೆಪಿ ಮುಖಂಡ ಜಿ.ಚಂದ್ರಣ್ಣ ಮಾತನಾಡಿ, ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದಲ್ಲಿ ದೇಶವು ವಿಶ್ವಗುರುವಾಗಿದೆ. ೧೦ ವರ್ಷದ ಆಡಳಿತದಲ್ಲಿ ಬಡತನ ನಿರ್ಮೂಲನೆಯಾಗಿದೆ. ೨೫ ಕೋಟಿ ಕಡುಬಡವರನ್ನು ಬಡತನ ರೇಖೆಯಿಂದ ಮೇಲೆತ್ತಲಾಗಿದೆ. ಕೋವಿಡ್ ನ ಸಮಯದಲ್ಲಿ ದೇಶವನ್ನು ಮುನ್ನಡೆಸಿದ ರೀತಿ ಅಮೋಘವಾಗಿತ್ತು. ಇಂತಹ ಉತ್ತಮ ಆಡಳಿತವನ್ನು ನಾವು ಶ್ಲಾಘಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದರು.
ದೊಡ್ಡಬಳ್ಳಾಪುರ ಶಾಸಕ ಧಿರಜ್ ಮುನಿರಾಜು, ಮುಖಂಡ ಕೆ.ಎಂ.ಹನುಮಂತರಾಯಪ್ಪ, ಮುಖಂಡ ಎ.ಕೆ.ಪಿ.ನಾಗೇಶ್ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಂ.ರವಿಕುಮಾರ್ ಅನಿಲ್, ವೆಂಕಟೇಶ್, ಮುಖಂಡರಾದ ಓಬದೇನಹಳ್ಳಿ ಮುನಿಯಪ್ಪ, ಸಿ.ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ನಗರ ಘಟಕದ ಅಧ್ಯಕ್ಷ ಮುದ್ದಪ್ಪ, ತಾಲ್ಲೂಕು ಅಧ್ಯಕ್ಷ ನಾಗೇಶ್, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಸುನೀಲ್, ಜಿಲ್ಲಾ ಕಾರ್ಯದರ್ಶಿ ಸುನೀಲ್, ರೈತ ಮೋರ್ಚಾ ಅಧ್ಯಕ್ಷ ವಿನಯ್ ಕುಮಾರ್, ವೈದ್ಯಕೀಯ ಪ್ರಕೋಷ್ಟ ಡಾ.ನಾರಾಯಣ,ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಗದೀಶ್, ಓಬಿಸಿ ಜಿಲ್ಲಾ ಘಟಕದ ಅಧ್ಯಕ್ಷ ಕನಕರಾಜು, ಎಸ್.ಸಿ.ಮೋರ್ಚಾ ಘಟಕದ ಬುಳ್ಳಹಳ್ಳಿ ರಾಜಪ್ಪ, ಟೌನ್ ಅಧ್ಯಕ್ಷ ಆರ್.ಸಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಡಿ.ಎಂ.ಮುನೀಂದ್ರ, ಸುರೇಶ್, ಬೂದಿಗೆರೆ ನಾರಾಯಣಸ್ವಾಮಿ, ಗಿರೀಶ್, ಬೂದಿಗೆರೆ ನಾಗವೇಣಿ, ರಜನಿಕನಕರಾಜು, ವೀಣಾಶ್ರೀನಿವಾಸ್, ಪ್ರೇಮಾದೇವರಾಜ್ ಇದ್ದರು.
ಗೊಂದಲದ ಗೂಡಾದ ಬೆಂಗಳೂರು ಜಿಲ್ಲಾ ಬಿ.ಜೆ.ಪಿ ವಿಶೇಷ ಕಾರ್ಯಕಾರಿಣಿ ಸಭೆ
ವಿಜಯಪುರದಲ್ಲಿ ಆಯೋಜಿಸಿದ್ದ ಬೆಂಗಳೂರು ಜಿಲ್ಲಾ ಕಾರ್ಯಕಾರಿಣಿ ಸಭೆ ಆರಂಭದಲ್ಲೇ ನೆಲಮಂಗಲ ತಾಲ್ಲೂಕು ಬಿ.ಜೆ.ಪಿ ಮುಖಂಡರ ಬಹಿಷ್ಕಾರಕ್ಕೀಡಾಗಿ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಸಭೆಯ ವೇದಿಕೆಯಲ್ಲಿ ಅಳವಡಿಸಿದ್ದ ಪ್ಲೆಕ್ಸ್ ನಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಪಕ್ಷದ ನಿಕಟಪೂರ್ವ ಅಭ್ಯರ್ಥಿಯಾದ ಸಪ್ತಗಿರಿ ಶಂಕರ್ ನಾಯಕ್ ರವರ ಭಾವಚಿತ್ರ ಕೈಬಿಟ್ಟಿರುವುದನ್ನು ಪ್ರಶ್ನಿಸಿ ನೆಲಮಂಗಲ ತಾಲ್ಲೂಕು ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ, ಅರಿಶಿನಕುಂಟೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಸೋಂಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ವಿಶ್ವೇಶ್ವರ ಪುರ ಶಕ್ತಿ ಕೇಂದ್ರದ ಅಧ್ಯಕ್ಷರು, ತ್ಯಾಮಗೊಂಡ್ಲು ಶಕ್ತಿ ಕೇಂದ್ರ ದ ಅಧ್ಯಕ್ಷರು, ಬೇಗೂರು ಶಕ್ತಿ ಕೇಂದ್ರದ ಅಧ್ಯಕ್ಷರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಘಟಕದ ಮಾಜಿ ಅಧ್ಯಕ್ಷರು, ನೆಲಮಂಗಲ ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷರು ಜಿಲ್ಲಾಧ್ಯಕ್ಷರಾದ ರಾಮಕೃಷ್ಣಪ್ಪ ರವರಿಗೆ ಘೇರಾವ್ ಹಾಕಿ ಸಭೆಯನ್ನು ಬಹಿಷ್ಕರಿಸಿದರು.
ಸಂಸದರಾದ ಡಾ.ಕೆ.ಸುಧಾಕರ್ ರವರು, ಮಾಜಿ ಸಚಿವರಾದ ಎಂಟಿಬಿ ನಾಗರಾಜ್ ರವರು, ಈ ಸಭೆಯಲ್ಲಿ ಗೈರಾಗಿರುವುದು ಗಮನಿಸಿದರೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಕಾರ್ಯಕಾರಿಣಿ ಸಭೆ ನಡೆಸಿದಂತಿತ್ತು ಎಂದು ಕೆಲವರು ಅನಿಸಿಕೆ ತಿಳಿಸಿದರು.