ಬೆಮೆಲ್ ಗುತ್ತಿಗೆ ನೌಕರರ ನೇಮಕಾತಿಗೆ ಖಂಡನೆ
ಕೋಲಾರ,ಜು.೨೯- ಬೆಮೆಲ್‌ನಲ್ಲಿ ದುಡಿಯುತ್ತಿರುವ ಗುತ್ತಿಗೆ ನೌಕರರನ್ನು ನೇಮಕಾತಿ ಮಾಡುವ ಅಧ್ಯತೆ ನೀಡಬೇಕೆಂದು ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು ಧಿಕ್ಕರಿಸಿ ಬೆಮೆಲ್ ಆಡಳಿತ ಮಂಡಳಿಯು ನೇಮಕಾತಿ ಮಾಡುತ್ತಿರುವುದನ್ನು ಸಿಐಟಿಯು ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ವಿಜಯಕೃಷ್ಣ ಖಂಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಐಟಿಐ ಸೇರಿದಂತೆ ವೃತ್ತಿಪರ ಶಿಕ್ಷಣ ಪಡೆದು ಕಳೆದ ೧೫ ವರ್ಷಗಳಿಂದ ಅತ್ಯಂತ ಕಡಿಮೆ ವೇತನಕ್ಕೆ ಗುತ್ತಿಗೆ ನೌಕರರು ದುಡಿಯುತ್ತಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ನೇಮಕಾತಿ ಸಂದರ್ಭದಲ್ಲಿ ಅಧ್ಯತೆ ನೀಡದೇ ಇರುವುದನ್ನು ಪ್ರಶ್ನಿಸಿ ಕಾರ್ಮಿಕರು ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿ ತೀರ್ಪು ನೀಡಿದೆ. ಹಲವು ವರ್ಷಗಳಿಂದ ದುಡಿದ ಕಾರ್ಮಿಕರಿಗೆ ನೇಮಕಾತಿ ಸಂದರ್ಭದಲ್ಲಿ ಅಧ್ಯತೆ ನೀಡಬೇಕೆಂದು ಸ್ಪಷ್ಟವಾಗಿ ಹೇಳಿದೆ. ಆದರೂ ಬೆಮೆಲ್ ಆಡಳಿತ ಮಂಡಳಿಯು ಈ ಆದೇಶವನ್ನು ಧಿಕ್ಕರಿಸಿ ನೇರವಾಗಿ ನೇಮಕಾತಿ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಬೆಮೆಲ್ ಕಾರ್ಖಾನೆಯಲ್ಲಿ ಖಾಯಂ ಕಾರ್ಮಿಕರು ಅತ್ಯಂತ ಕಡಿಮೆ ಇದ್ದು, ಸುಮಾರು ೩೦೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆ ಕಾರ್ಮಿಕರು ಬಹುತೇಕ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ.
ಇದರಿಂದ ಕಾರ್ಖಾನೆಯು ಲಾಭದಾಯಕವಾಗಿ ನಡೆಯುತ್ತಿದೆ. ಗುತ್ತಿಗೆ ಕಾರ್ಮಿಕರ ಶ್ರಮವನ್ನು ಗುರ್ತಿಸಿ, ಆರ್ಹ ಕಾರ್ಮಿಕರನ್ನು ನೇರ ನೇಮಕಾತಿಗೆ ಪರಿಗಣಿಸಬೇಕು,
ಉಳಿದ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯ ರೀತ್ಯ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಸಿಐಟಿಯು ಬೆಂಬಲ ನೀಡುತ್ತದೆ.
ಸರ್ಕಾರವು ಕೂಡಲೇ ಮಧ್ಯ ಪ್ರವೇಶ ಮಾಡಿ ಹೈಕೋರ್ಟ್ ಆದೇಶದಂತೆ ಗುತ್ತಿಗೆ ನೌಕರರನ್ನು ನೇರ ನೇಮಕಾತಿ ಮಾಡುವ ಅಧ್ಯತೆ ನೀಡುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.