ಹೆಪಟೈಟಿಸ್ ನಿರ್ಲಕ್ಷಿಸಿದರೆ ಜೀವಕ್ಕೆ ಆಪತ್ತು
ಕಲಬುರಗಿ ಜು.28: ಯಕೃತ್ತಿನ ಉರಿಯುತವೇ ಹೆಟೈಟಿಸ್ ಆಗಿದೆ. ವೈರಸ್,ಬ್ಯಾಕ್ಟೀರಿಯಾ, ಮದ್ಯಪಾನ ಸೇವನೆ ಇದಕ್ಕೆ ಕಾರಣವಾದ ಮುಖ್ಯ ಅಂಶವಾಗಿವೆ. ಯಕೃತದ ಕಾರ್ಯಗಳಾದ ರಕ್ತ ಶುದ್ಧಿಕರಣ, ವಿಷ ಪದಾರ್ಥ ಹೊರಹಾಕುವುದು, ಹಾರ್ಮೋನ್ ಉತ್ಪಾದನೆಗೆ ತೊಂದರೆಯಾಗುತ್ತದೆ. ಆರಂಭದಲ್ಲಿಯೇ ಇದನ್ನು ಗುರ್ತಿಸಿ ಚಿಕಿತ್ಸೆ ಪಡೆದರೆ ತೊಂದರೆಯಾಗುವುದಿಲ್ಲ. ಆದರೆ ಹಂತವನ್ನು ಮೀರಿದಾಗ ಜೀವಕ್ಕೆ ಆಪತ್ತಾಗುವುದರಿಂದ ಲಕ್ಷö್ಯ ವಹಿಸುವುದು ಅಗತ್ಯವಾಗಿದೆ ಎಂದು ಕುಟುಂಬ ವೈದ್ಯ ಡಾ.ವಿ.ಎಸ್.ಪೂಜಾರಿ ಹೇಳಿದರು.
ನಗರದ ಆಳಂದ ಚೆಕ್ ಪೋಸ್ಟ್ ಸಮೀಪವಿರುವ ‘ಧನ್ವಂತರಿ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ವಿಶ್ವ ಹೆಪಟೈಟಿಸ್ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕುಟುಂಬ ವಯದ್ಯ ಡಾ.ವಿ.ಬಿ.ಮಠಪತಿ ಮಾತನಾಡಿ, ವೈರಾಣುವಿರುವ ಕಲುಷಿತ ನೀರಿನ ಸೇವನೆ, ಸೋಕಿತ ವ್ಯಕ್ತಿಯ ಮಲದಿಂದ ಕಲುಷಿತ ಆಹಾರ ಮತ್ತು ನೀರಿನ ಸೇವನೆಯಿಂದ ವೈರಾಣು ದೇಹವನ್ನು ಪ್ರವೇಶಿಸುತ್ತದೆ. ಸುಸ್ತು, ಹಸಿವಿಲ್ಲದಿರುವಿಕೆ, ಹೊಟ್ಟನೋವು, ವಾಕರಿಕೆ, ಗಾಡ ಬಣ್ಣದ ಮೂತ್ರ, ಮೈ-ಕೈ ನೋವು, ತೂಕ ಇಳಿಕೆ, ಚರ್ಮ ಮತ್ತು ಕಣ್ಣು ಹಳದಿ ಬಣ್ಣವಾಗುವುದು ಅಂದರೆ ಕಾಮಾಲೆ ರೋಗ ಇದರ ಲಕ್ಷಣಗಳಾಗಿವೆ. ಶುದ್ಧ ಆಹಾರ ಮತ್ತು ನೀರಿನ ಸೇವನೆ, ವೈಯಕ್ತಿಕ ಸ್ವಚ್ಛತಗೆ ಹೆಚ್ಚಿನ ಗಮನವನ್ನು ನೀಡುವುದು, ಸೋಕಿತ ವ್ಯಕ್ತಿಯ ದೈಹಿಕ ಸಂಪರ್ಕ ಮಾಡದಿರುವುದ, ಮುನ್ನೆಚ್ಚರಿಕೆ ಕ್ರಮವಾಗಿ ರೋಗ ಬಾರದಂತೆ ತಡೆಯಲು ಹೆಪಟೈಟಿಸ್ ಲಸಿಕೆಗಳನ್ನು ಹಾಕುವುದು ತಡೆಗಟ್ಟುವ ವಿಧಾನಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಬಸಯ್ಯಸ್ವಾಮಿ ಹೊದಲೂರ, ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ವಿಜಯಕುಮಾರ ಸೇರಿದಂತೆ ಇನ್ನಿತರರಿದ್ದರು.