ಹುತಾತ್ಮ ಯೋಧನ ಸ್ಮರಣೆ ನಮ್ಮೆಲ್ಲರ ಜವಾಬ್ದಾರಿ
ಚನ್ನಮ್ಮನ ಕಿತ್ತೂರು,ಜು೨೮: ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ೫೨೭ ಸೈನಿಕರು ಹುತಾತ್ಮರಾದ ಕಾರಣ ಭಾರತವು ಈ ದಿನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಅವರ ಬಲಿದಾನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ ಎಂದು ನ್ಯಾಯಮೂರ್ತಿ ನಾಗರಾಜ ಅರಳಿ ಹೇಳಿದರು.
ಪಟ್ಟಣದ ತಿಗಡೊಳ್ಳಿ ಕ್ರಾಸ್ ಗ್ರಾಮೀಣ ಯುವ ಸೇನಾ ತರಬೇತಿ ಕೇಂದ್ರದಲ್ಲಿ ೨೫ನೇ ಕಾರ್ಗಿಲ್ ವಿಜಯೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಸಿಗೆ ನೀರುಣುಸಿ ಮಾತನಾಡಿದವರು ನಾವು ನಮ್ಮ ಮನೆಯಲ್ಲಿ ಸುರಕ್ಷಿತವಾಗಿದ್ದೇವೆಂದರೆ ಅದಕ್ಕೆ ಕಾರಣ ದೇಶದ ಗಡಿಯಲ್ಲಿ ಬಿಸಿಲು, ಗಾಳಿ ಎನ್ನದೇ ಕಾವಲು ಕಾಯುತ್ತಿರುವ ನಮ್ಮ ಸೈನಿಕರು ದೇಶ ಪ್ರೇಮಕ್ಕಾಗಿ ಮಡಿದ ದೇಶ ರಕ್ಷಿಸಿದ ಹುತಾತ್ಮ ಯೋಧನ ಸ್ಮರಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಂದರು.
ತರಬೇತಿ ಕೇಂದ್ರದಲ್ಲಿ ಕಾರ್ಗಿಲ್ ವಿಜಯೋತ್ಸವ ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಮೊದಲ ಹಂತದಲ್ಲಿ ಭಾರತೀಯ ಸೇನೆಯಲ್ಲಿ ಅಗ್ನಿವೀರ ಸೇರುವ ಮಹಿಳಾ ಹಾಗೂ ಪೂರುಷ ಅಭ್ಯರ್ಥಿಗಳಿಗೆ ಉಚಿತ ಡೆಮೋ ರ‍್ಯಾಲಿ (೧೬೦೦ ಮೀ. ಓಟದ ಸ್ಪರ್ಧೆ) ಆಯೋಜನೆ ಮಾಡಿದ್ದ ನಿವೃತ್ತ ಸೇನಾಧಿಕಾರಿ ಪ್ರಕಾಶ ಪಾಟೀಲ. ದೈಹಿಕ ಪರೀಕ್ಷೆಯಲ್ಲಿ ನೂರು ಅಂಕ ಪಡೆದ ಅಭ್ಯರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು.
ದೇಶ ರಕ್ಷಣೆಗಾಗಿ ಸೈನಿಕನ ತ್ಯಾಗ-ಬಲಿದಾನ ಶಿಕ್ಷಣ ಮಹತ್ವ ಕುರಿತು ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿದರು. ಮೂರು ತಿಂಗಳ ಅಗ್ನಿವೀರ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ನೀಡಲಾಯಿತು. ಈ ಕಾರ್ಯಕ್ರಮದ ನಿರೂಪಕರಾಗಿ ಉಪನ್ಯಾಸಕ ವಿಜಯಕುಮಾರ ಸುನ್ನಾಳ. ಸ್ವಾಗತ ಮತ್ತು ವಂದನಾರ್ಪಣೆ ನಿವೃತ್ತ ಸೇನಾಧಿಕಾರಿ ಹಾಗೂ ಸಂಸ್ಥಾಪಕ ಪರ್ವೇಜ್ ಹವಾಲ್ದಾರ ನೆರವೇರಿಸಿದರು.
ಈ ವೇಳೆ ಉಪನ್ಯಾಸಕರು, ದೈಹಿಕ ತರಭೇತಿದಾರರು, ಗಣ್ಯರು, ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸುತ್ತಮುತ್ತಲಿನ ಗ್ರಾಮಸ್ಥರು, ಮಾಜಿ-ಹಾಲಿ ಸೈನಿಕರು ಇನ್ನಿತರಿದ್ದರು.