ಸುದ್ದಿ ಕಲ್ಪಿಸಿಕೊಂಡು ಸುದ್ದಿಮಾಡುವ ಕಾಲಕ್ಕೆ ಬಂದಿದ್ದೇವೆ
ಮಂಡ್ಯ ಸೆ ೨೯: ನಾವು ಸುದ್ದಿ ಹುಡುಕುವ ಕಾಲದಿಂದ ಸುದ್ದಿ ಕಲ್ಪಿಸಿಕೊಳ್ಳುವ ಕಾಲಕ್ಕೆ ಬಂದಿದ್ದೇವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಬೇಸರ ವ್ಯಕ್ತಪಡಿಸಿದರು.ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ನಾವೀಗ ಸುದ್ದಿ ಹುಡುಕುವ ಕಾಲಘಟ್ಟವನ್ನು ದಾಟಿ, ಕಲ್ಪಿಸಿಕೊಂಡು ಸುದ್ದಿ ಮಾಡುವ ಕಾಲಕ್ಕೆ ಬಂದು ನಿಂತಿದ್ದೇವೆ.ಇಷ್ಟು ದಿನ ಸುದ್ದಿ ಹೇಳ್ತಾ ಇದ್ವಿ, ಓದ್ತಾ ಇದ್ವಿ, ಬರೀತಾ ಇದ್ವಿ, ನೋಡ್ತಾ ಇದ್ವಿ. ಈಗ ಕಲ್ಪಿಸಿಕೊಳ್ತಾ ಇದೀವಿ. ಮೊದಲೆಲ್ಲಾ ನಾವು ಸುದ್ದಿ ಕೆದಕುತ್ತಿದ್ದೆವು. ಈಗ ಬರೀ ಕೆಣಕ್ತಾ ಇದೀವಿ ಎಂದರು.
ಮೊದಲೆಲ್ಲಾ ನಾವು ಸುಳ್ಳನ್ನು ಅದುಮಿ ಸತ್ಯ ತೋರಿಸುತ್ತಿದ್ದೆವು. ಈಗ ಸತ್ಯವನ್ನು ತುಳಿದು ಸುಳ್ಳನ್ನು ಹಂಚುವ ಅನಿವಾರ್ಯ ಸಂದರ್ಭಕ್ಕೆ ಬಂದಿದ್ದೇವೆ. ಈ ಮಾತುಗಳನ್ನು ನಾನು ಏಕೆ ಹೇಳ್ತಾ ಇದೀನಿ ಅಂದರೆ, ಮೊನ್ನೆ ಬಾಂಗ್ಲಾ ದೇಶದಲ್ಲಿ ವಿದ್ಯಾರ್ಥಿಗಳು ಅಲ್ಲಿನ ಸರ್ಕಾರದ ವಿರುದ್ಧ ದಂಗೆ ಎದ್ದರು. ಆದರೆ ಧಂಗೆ ಮೊದಲು ಟಾರ್ಗೆಟ್ ಆದವರು ಮಾಧ್ಯಮದವರು.ಮೂರ್ನಾಲ್ಕು ವರ್ಷಗಳ ಹಿಂದೆ ಶ್ರೀಲಂಕಾದಲ್ಲೂ ಆರ್ಥಿಕ ಕುಸಿತದ ಕಾರಣಕ್ಕೆ ಜನ ದಂಗೆ ಎದ್ದರು. ಅಲ್ಲೂ ಜನ ಮೊದಲು ಮಾಧ್ಯಮ ಸಂಸ್ಥೆಗಳನ್ನೇ ಟಾರ್ಗೆಟ್ ಮಾಡಿದರು. ಇದು ಅತ್ಯಂತ ಕೆಟ್ಟ ಬೆಳವಣಿಗೆ.
ಇದು ಅತ್ಯಂತ ಅಪಾಯಕಾರಿ. ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನ ಯಾವ ಮಾಧ್ಯಮಗಳ ಮೊರೆ ಹೋಗುತ್ತಿದ್ದರೋ, ಅದೇ ಮಾಧ್ಯಮಗಳನ್ನು ಜನ ಏಕೆ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋದು ಬಹಳ ಗಂಭೀರವಾದ ಸಂಗತಿ. ಪ್ರಜಾಪ್ರಭುತ್ವದ ಕಾವಲು ಸಂಸ್ಥೆಯಾದ ಮಾಧ್ಯಮಗಳನ್ನು ಜನ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪರಿಗಣಿಸುವಂತಾಗಬಾರದು ಎನ್ನುವ ಎಚ್ಚರಿಕೆಯನ್ನು ನಾವೆಲ್ಲಾ ಪಾಲಿಸುವ ಸಂದರ್ಭ ಬಂದಿದೆ ಎಂದು ಎಚ್ಚರಿಸಿದರು.ಆದ್ದರಿಂದ ಪತ್ರಕರ್ತರ ಸಂಘಗಳು, ಮಾಧ್ಯಮ ಸಂಸ್ಥೆಗಳು ಒಟ್ಟಾಗಿ ಕಾರ್ಯಾಗಾರಗಳ ಮೂಲಕ ತಂತ್ರಜ್ಞಾನದ ಅಪಾಯ ಮತ್ತು ಅವಕಾಶಗಳನ್ನು ಅರಿತುಕೊಳ್ಳಬೇಕಿದೆ ಎಂದು ಕರೆಕೊಟ್ಟರು.ಮಾಜಿ ಸಂಸದರಾದ ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಯೋಗೀಶ್ವರ್ ಮತ್ತು ಪತ್ರಕರ್ತರ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.