ಗುರು ಶಿಷ್ಯರ ನಡುವೆ ವಿಶ್ವಾಸದ ವಾತಾವರಣ ನಿರ್ಮಿಸಿ : ಚಿದ್ರೆ
ಔರಾದ್ :ಸೆ.29: ಶಿಕ್ಷಕ-ಮಕ್ಕಳ ಸಂಬಂಧವು ಮಗುವಿನ ಸರ್ವತೋಮುಖ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಗುರು ಶಿಷ್ಯರ ಪರಸ್ಪರ ಗೌರವವನ್ನು ಉತ್ತೇಜಿಸುವ ಪರಿಸರ ನಿರ್ಮಾಣವಾಗಬೇಕು ಎಂದು ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಡಿ.ಇಡಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಪ್ರಥಮ ವರ್ಷದ ಶಿಕ್ಷಕ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಗು ಮತ್ತು ಶಿಕ್ಷಕರ ನಡುವೆ ಪರಸ್ಪರ ಗೌರವ ಮತ್ತು ವಿಶ್ವಾಸದ ವಾತಾವರಣ ಇರಬೇಕು. ವಿದ್ಯಾರ್ಥಿ-ಶಿಕ್ಷಕರ ನಡುವಿನ ಸಕಾರಾತ್ಮಕ ಸಂಬಂಧ, ಕಲಿಕೆಯ ವೈಫಲ್ಯದಿಂದ ಮಕ್ಕಳನ್ನು ಪಾರು ಮಾಡುತ್ತದೆ. ಆದೇ ರೀತಿ, ಸಂಬಂಧ ಚೆನ್ನಾಗಿಲ್ಲದಿದ್ದರೆ ಮಗು ಎಲ್ಲಾ ವಿಧದಲ್ಲೂ ವೈಫಲ್ಯ ಅನುಭವಿಸಬಹುದಾಗಿರುತ್ತದೆ ಎಂದರು.
ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ಭಾಲ್ಕಿ ಹಿರೇಮಠ ಸಂಸ್ಥಾನ ಗಡಿ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದೆ. ಪೂಜ್ಯರಿಂದ ಲಕ್ಷಾಂತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಕ ದೊರೆತಿದ್ದು, ಅನೇಕರು ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಹಾಗೂ ಗುರುಬಸವ ಪಟ್ಟದ್ದೇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವಜನತೆ ದೈಹಿಕ, ಮಾನಸಿಕ, ಅಧ್ಯಾತ್ಮಿಕ ಆರೋಗ್ಯದ ಜತೆಗೆ ಸಕರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ದುಶ್ಚಟಗಳಿಂದ ದೂರ ಇರಬೇಕು. ಗುರುಬಸವ ಪಟ್ಟದ್ದೇವರು ದುಶ್ಚಟಗಳು ಹೋಗಲಾಡಿಸಲು ಜೋಳಿಗೆ ಹಿಡಿದು ವಿನೂತನ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.
ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ಮಾತನಾಡಿ, ವಿದ್ಯಾರ್ಥಿ ಜೀವದಲ್ಲಿ ದುಶ್ಚಟಗಳಿಗೆ ಬಲಿ ಯಾಗದೆ ತಂದೆ-ತಾಯಿ, ಗುರುವನ್ನು ಗೌರವದಿಂದ ಕಾಣುತ್ತಾರೋ ಜತೆಗೆ ಶಿಕ್ಷಣದೆಡೆ ಯಾರು ಓತ್ತು ಕೊಡುತ್ತಾರೋ ಅವರು ಉತ್ತಮ ವಿದ್ಯಾರ್ಥಿಯಾಗುತ್ತಾರೆ ಎಂದರು. ನಿಜ ಜೀವನದಲ್ಲಿ ಏನನ್ನು ಸಾಕಾರಗೊಳಿಸಬೇಕು ಎಂಬುದರ ಚಿಂತೆನೆಯನ್ನು ಇಟ್ಟುಕೊಂಡು ವಿದ್ಯಾರ್ಥಿ ಜೀವನ ದಲ್ಲಿಯೇ ಅಳವಡಿಸಿಕೊಳ್ಳಬೇಕು ಎಂದರು.
ಸ್ಥಾನಿಕ ಕಮಿಟಿಯ ಕಾರ್ಯದರ್ಶಿ ಮನ್ಮಥಪ್ಪ ಹುಗ್ಗೆ ಅಧ್ಯಕ್ಷತೆ ವಹಿಸಿದರು. ಡಿಇಡಿ ಪ್ರಾಂಶುಪಾಲ ಶರಣಪ್ಪ ನೌಬಾದೆ ಪ್ರಾಸ್ತವಿಕ ಮಾತನಾಡಿದರು.
ವಿದ್ಯಾರ್ಥಿಗಳಾದ ಅಕ್ಷತಾ ಜೋಜನಾ ಮಾತನಾಡಿದರು. ನಿಖಿತಾ ಕವನ ವಾಚನ ಮಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ರಮೇಶ ಕುಟಮುಲಗೆ, ಮುಖ್ಯಗುರು ನಿರ್ಮಲಾ ಶೇರಿ, ಇಂದುಮತಿ ಎಡವೆ, ಬಸವರಾಜ ತಳವಾರ್, ರೇಖಾ ನೌಬಾದೆ, ಸಂಜೀವ ವಲಾಂಡೆ, ವಾಮನರಾವ ಮಾನೆ ಸೇರಿದಂತೆ ಅನೇಕರಿದ್ದರು. ಸಂಗೀತಾ, ನೌವಮೀ ಅವರು ಸ್ವಾಗತ ಗೀತೆ ಹಾಡಿದರು. ಸ್ವಾತಿ ನಾಗೇಶ ಪ್ರಾರ್ಥನಾ ಗೀತೆ ಹಾಡುವ ಮೂಲಕ ಗಮನ ಸೆಳೆದರು. ನಾಗನಾಥ ಶಂಕು, ಸ್ವಾಗತಿಸಿ ನಿರೂಪಿಸಿದರು. ಸುರೇಖಾ ಮೆಂಗಾ ವಂದಿಸಿದರು.