ಶರಣರು, ಮಹನೀಯರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ: ಪ್ರಭಾಕರ ಕೋರೆ
ವಿಜಯಪುರ,ಜು.28: ಶತಮಾನದ ಹಿಂದೆ ಈ ಭಾಗದ ಶರಣರು ಮತ್ತು ಮಹನೀಯರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಜನ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾಗಲು ಕಾರಣರಾಗಿದ್ದಾರೆ ಎಂದು ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ಚೇರಮನ್ ಮತ್ತು ಕಾಹೆರ ಕುಲಾಧಿಪತಿ ಪ್ರಭಾಕರ ಕೋರೆ ಹೇಳಿದ್ದಾರೆ.
ಶನಿವಾರ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಪಘಾತ ಮತ್ತು ತುರ್ತು ಚಿಕಿತ್ಸೆ ವಿಭಾಗದ ಕಟ್ಟಡ (ಟ್ರಾಮಾ ಸೆಂಟರ್ ಮತ್ತು ಎಮರ್ಜೆನ್ಸಿ ಮೆಡಿಸಿನ್) ಉದ್ಘಾಟಿಸಿದ ಅವರು, ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಡಾ. ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
19ನೇ ಶತಮಾನದ ಪ್ರಾರಂಭದಲ್ಲಿ ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದ ಮುಂಬೈ ಕರ್ನಾಟಕದ ಬಾಗಲಕೋಟೆಯಲ್ಲಿ ಬಿ.ವಿ.ವಿ.ಎಸ್, ವಿಜಯಪುರದಲ್ಲಿ ಬಿ.ಎಲ್.ಡಿ.ಇ ಮತ್ತು ಬೆಳಗಾವಿಯಲ್ಲಿ ಕೆ.ಎಲ್.ಇ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾದವು. ಅಂದು ಈ ಭಾಗದ ಜನ ವೈದ್ಯರು, ನ್ಯಾಯವಾದಿಗಳಿಗಾಗಿ ಮಹಾರಾಷ್ಟ್ರದತ್ತ ಮುಖ ಮಾಡಬೇಕಾಗಿತ್ತು. ಮರಾಠಿ ಪ್ರಭಾವ ಹೆಚ್ಚಾಗಿದ್ದ ಈ ಭಾಗದಲ್ಲಿ ಆಗ ಹಾನಗಲ್ ಶಿವಯೋಗಿಗಳು, ಶಿರಸಂಗಿ ಲಿಂಗರಾಜ ದೇಸಾಯಿ, ಪಂಡಿತರಾವ ಚಿಕ್ಕೋಡಿ, ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ. ಎಂ. ಪಾಟೀಲ, ಬಂಗಾರಮ್ಮ ಸಜ್ಜನ, ಸರ್ ಕಂಬಳಿ ಸಿದ್ದಪ್ಪ, ಅರಟಾಳು ರುದ್ರಗೌಡರಂಥ ಮೇಧಾವಿ ಮತ್ತು ದಾನಿಗಳ ಸಹಕಾರದಿಂದ ಈ ಭಾಗದಲ್ಲಿ ಎಲ್ಲ ಸಮುದಾಯಗಳಿಗೆ ಶಿಕ್ಷಣ ಸೌಲಭ್ಯ ನೀಡಲಾಯಿತು. ಇದರಿಂದ ಸರ್ವಜನರ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಯಿತು. ಈ ಸಂಸ್ಥೆಗಳಲ್ಲಿ ಓದಿದ ವೈದ್ಯರು ಇಂದು ಆಂಗಾAಗ ಕಸಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮೂಲಕ ರೋಗಿಗಳಿಗೆ ಮರುಜೀವ ನೀಡುತ್ತಿದ್ದಾರೆ. ಅಂದು ಸ್ಥಾಪಿಸಿದ ಬಿ.ಎಲ್.ಡಿ.ಇ ಸಂಸ್ಥೆಯನ್ನು ಇಂದು ಎಂ. ಬಿ. ಪಾಟೀಲರು ಹೆಮ್ಮರವಾಗಿ ಬೆಳೆಸಿದ್ದಾರೆ. ಸಚಿವರಾಗಿ ಈ ಭಾಗದಲ್ಲಿ ಜಲಕ್ರಾಂತಿ ಮಾಡಿದ್ದಾರೆ. ಈ ಮೂಲಕ ಈ ಭಾಗದ ಸರ್ ಎಂ. ವಿಶ್ವೇಶ್ವರಯ್ಯ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ಟ್ರಾಮಾ ಸೆಂಟರ್ ಪ್ರಾರಂಭಿಸುವ ಮೂಲಕ ಎಲ್ಲ ಅತ್ಯಾಧುನಿಕ ವೈಜ್ಞಾನಿಕ ಸೌಲಭ್ಯಗಳನ್ನು ಒದಗಿಸಿ ಉತ್ತರ ಕರ್ನಾಟಕದಲ್ಲಿಯೇ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಿದ್ದಾರೆ. ಕೆ.ಎಲ್.ಇ ವೈದ್ಯರನ್ನು ಇಲ್ಲಿಗೆ ತರಬೇತಿಗೆ ಕಳುಹಿಸುತ್ತೇನೆ. ಬಿ.ಎಲ್.ಡಿ.ಇ ಸಂಸ್ಥೆ ಬೆಂಗಳೂರಿನಲ್ಲಿಯೂ ಒಂದು ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸುವುದನ್ನು ನೋಡುವ ಆಸೆ ನನ್ನದಾಗಿದೆ ಎಂದು ಅವರು ಹೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯಅಭಿವೃದ್ಧಿ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ಶತಮಾನದ ಹಿಂದೆ ಮೈಸೂರು ಭಾಗದಲ್ಲಿ ಅಲ್ಲಿನ ಮಹಾರಾಜರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಅಲ್ಲಿನ ಜನರಿಗೆ ಅನುಕೂಲ ಕಲ್ಪಿಸಿದ್ದರು. ಆದರೆ, ಉತ್ತರ ಕರ್ನಾಟಕದಲ್ಲಿ ಮಾತ್ರ ಸೂಕ್ತ ಶೈಕ್ಷಣಿಕ ಸೌಲಭ್ಯಗಳಿಲ್ಲದ ಕಾರಣ ಈ ಭಾಗದ ಜನ ಆರ್ಥಿಕವಾಗಿಯೂ ಹಿಂದುಳಿಯುವAತಾಗಿತ್ತು. ಆದರೆ, ಫ. ಗು. ಹಳಕಟ್ಟಿ, ಬಂಥನಾಳ ಶ್ರೀಗಳು, ಬಿ. ಎಂ. ಪಾಟೀಲ ಮತ್ತು ಬಂಗಾರಮ್ಮ ಸಜ್ಜನ ಅವರಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆ, ಶ್ರೀ ಸಿದ್ದೇಶ್ವರ ಸಂಸ್ಥೆ, ಶ್ರೀ ಸಿದ್ಧೇಶ್ವರ ಬ್ಯಾಂಕ್, ಬರ ನಿರ್ವಹಣಾ ಸಂಸ್ಥೆ, ಭೂತನಾಳ ಕೆರೆಗಳು ನಿರ್ಮಾಣವಾದವು. ಹಳಕಟ್ಟಿಯವರು ಸಂಶೋಧನೆಯ ಮೂಲಕ 250 ಶರಣರು ಮತ್ತು ಅವರ ಸುಮಾರು 10 ಸಾವಿರ ವಚನಗಳನ್ನು ಬೆಳಕಿಗೆ ತಂದು ವಚನಗುಮ್ಮಟ ಎನಿಸಿಕೊಂಡರು. ಬಂಥನಾಳ ಶ್ರೀಗಳು ಶಿಕ್ಷಣಿಕ್ಕೆ ಒತ್ತು ನೀಡಿದರೆ, ಬಂಗಾರಮ್ಮ ಸಜ್ಜನ ಬಿ.ಎಲ್.ಡಿ.ಇ ಸಂಸ್ಥೆಗೆ ತಮ್ಮ ಜಮೀನು ದಾನ ಮಾಡಿದರು. ಬಿ. ಎಂ. ಪಾಟೀಲ ಅವರು ಎಂಜಿನಿಯರಿAಗ್, ಮೆಡಿಕಲ್ ಮತ್ತು ಬಿ.ಎಡ್ ಕಾಲೇಜು ಪ್ರಾರಂಭಿಸಿ ನಮ್ಮ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಸಿಗಲು ಕಾರಣರಾದರು. ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸರ್ವ ಜನರು ಸುಖವಾಗಿರಲಿ ಎಂಬುದು ಅಂದಿನ ಮಹನೀಯರ ಆಶಯವಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಯಡಿಯೂರು-ಗದಗ-ಡಂಬಳ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಒಂದು ಶತಮಾನದ ಹಿಂದೆ ಶಿಕ್ಷಣ ಮರೀಚಿಕೆಯಾಗಿದ್ದ ಈ ಭಾಗದಲ್ಲಿ ಬಡತನ ಮತ್ತು ದಾರಿದ್ರ‍್ಯ ಹೆಚ್ಚಾಗಿತ್ತು. ಆಗ ಬಿ.ವಿ.ವಿಎಸ್., ಬಿ.ಎಲ್.ಡಿ.ಇ ಮತ್ತು ಕೆ.ಎಲ್.ಇ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಅಂದಿನ ಶರಣರು ಶೈಕ್ಷಣಿಕ ಕ್ರಾಂತಿ ಮಾಡಿದರು. ನಿಂದನೆಗೆ ಹೆದರದೆ, ಟೀಕೆಗಳಿಗೆ ಕುಗ್ಗದೆ ತನು, ಮನ, ಧನದಿಂದ ಈ ಭಾಗದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ಬೇರೂರಲು ಮತ್ತು ಈ ಮೂಲಕ ಸಾಮಾಜಿಕ, ಆರ್ಥಿಕವಾಗಿ ಇಲ್ಲಿನ ಜನ ಸ್ವಾವಲಂಬಿಯಾಗಲು ಅಮೂಲ್ಯ ಕೊಡುಗೆ ನೀಡಿದರು. ಅಂದಿನಿAದ ಇಂದಿನವರೆಗೂ ಲಿಂಗಾಯಿತ ಶಿಕ್ಷಣ ಸಂಸ್ಥೆಗಳು ಮತ್ತು ಮಠಗಳು ಸಮಾಜದ ಸರ್ವ ಜನರ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಹಳಕಟ್ಟಿ, ಬಂಥನಾಳ ಶ್ರೀಗಳು, ಬಂಗಾರಮ್ಮ ಸಜ್ಜನ, ಬಿ. ಎಂ. ಪಾಟೀಲ ಅವರು ಅಂದು ಈ ಕೆಲಸ ಮಾಡಿರದಿದ್ದರೆ ಇಂದು ಈ ಭಾಗ ಇನ್ನೂ ಅಭಿವೃದ್ಧಿಯಿಂದ ವಂಚಿತವಾಗಿರುತ್ತಿತ್ತು. ಹೀಗಾಗಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಮಹನೀಯರನ್ನು ಸ್ಮರಿಸದಿದ್ದರೆ, ಸಮಾಜದ ಸ್ವಾಸ್ಥ್ಯ ಸುಧಾರಿಸುವುದು ಕಷ್ಟಸಾಧ್ಯ ಎಂದು ಹೇಳಿದರು.
ಪ್ರಭಾಕರ ಕೋರೆ ಮತ್ತು ಎಂ. ಬಿ. ಪಾಟೀಲ ಅವರು ಕೆ.ಎಲ್.ಇ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ಈ ಸಂಸ್ಥೆಗಳು ಎಷಿಯಾಖಂಡದಲ್ಲಿ ಖ್ಯಾತಿ ಗಳಿಸಲು ಕಾರಣರಾಗಿದ್ದಾರೆ. ಹಳಕಟ್ಟಿ, ಬಂಥನಾಳ ಶ್ರೀಗಳು, ಬಿ.ಎಂ. ಪಾಟೀಲ ಮತ್ತು ಬಂಗಾರಮ್ಮ ಸಜ್ಜನ ಬಿ.ಎಲ್.ಡಿ.ಇ ಸಂಸ್ಥೆಯ ನಾಲ್ಕು ಆಧಾರ ಸ್ತಂಭಗಳಾಗಿದ್ದಾರೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣದಲ್ಲಿ ಸೇವೆ ಸಲ್ಲಿಸಿದ ಎಂಜಿನಿಯರ್‌ಗಳಾದ ಜಿ.ಎಂ. ದುದ್ದಗಿ, ಯು.ಎನ್. ಕರಡಿ, ರಾಜು ಪಡಗಾನೂರ, ಶಾಸ್ತ್ರಿ, ರವಿ ಹೊಸಕೋಟೆ, ರಂಗರಾಜು ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆ ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿದ ನಾಲ್ಕೂ ಜನ ಮಹನೀಯರ ಕುರಿತ ಕಿರು ಹೊತ್ತಿಗೆಯನ್ನು ಗಣ್ಯರು ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಮತ್ತು ವಿಧಾನ ಪರಿಷತ್À ಸದಸ್ಯ ಸುನೀಲಗೌಡ ಪಾಟೀಲ, ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಸಮಕುಲಪತಿ ಡಾ. ಅರುಣ ಇನಾಮದಾರ, ರಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಟ್ರಾಮಾ ಸೆಂಟರ್ ಆಡಳಿತಾಧಿಕಾರಿ ಡಾ. ಶರಣಪ್ಪ ಕಟ್ಟಿ, ಡಾ. ರಾಜೇಶ ಹೊನ್ನುಟಗಿ, ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.
ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಮೆಹರವಾಡೆ, ಡಾ. ಆರ್. ಎಸ್. ಮುಧೋಳ ವಂದಿಸಿದರು.