ವಿದ್ಯಾರ್ಥಿಗಳು ಜಗತ್ತಿಗೆ ಬೆಳಕಾಗಬೇಕು:ಡಾ ಚಂದ್ರಶೇಖರ ದೊಡ್ದಮನಿ
ಕಲಬುರಗಿ:ಜು.28:ಸೇಡಮ್ ಅರಿವಿನ ಮಂಟಪದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಶ್ರೀಮತಿ ನರ್ಮದಾ ದೇವಿ ಗಿಲಡಾ ಮಹಿಳಾ ಪದವಿ ಪೂರ್ವ ಕಾಲೇಜಿನ ಓSS, ಇಕೋ ಕ್ಲಬ್ ಮತ್ತು ಮಿತ್ರ ಮಂಡಳಿ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಸೇಡಂ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಡಾ. ನಾಗರಾಜ್ ಮನ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕೇವಲ ದೈಹಿಕ ಆರೋಗ್ಯದ ಕಡೆ ಗಮನಕೊಡದೆ, ಮಾನಸಿಕ ಅರೋಗ್ಯ ಮತ್ತು ಸಾಮಾಜಿಕ ಸ್ವಾಸ್ತ್ಯ ಕಡೆ ಹೆಚ್ಚು ಗಮನ ಕೊಡಬೇಕೆಂದರು.
ವಿದ್ಯಾರ್ಥಿ ಜೀವನದಲ್ಲಿ ಖಿನ್ನತೆಗೆ ಮತ್ತು ಉದ್ವೇಗಕ್ಕೆ ಒಳಗಾಗದೆ, ಕೀಳರಿಮೆ ತೊಡೆದು ಹಾಕಿ, ನಿರಂತರ ಪ್ರಯತ್ನ ಶೀಲರಾಗಿ, ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿ,ಆದರ್ಶ ವಿದ್ಯಾರ್ಥಿನಿಯಾಗಿ, ಆದರ್ಶ ನಾಗರಿಕರಾಗಿ ಸಮಾಜಕ್ಕೆ ಪೂರಕವಾಗುವಂತೆ ಬೆಳೆಯಬೇಕೆಂದರು.
ಕಲಬುರಗಿಯ ಓSS ವಿಭಾಗೀಯ ಅಧಿಕಾರಿಗಳಾದ ಡಾ. ಚಂದ್ರಶೇಖರ್ ದೊಡ್ಡಮನಿ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ಉತ್ತಮ ಜೀವನಕ್ರಮ ಅಳವಡಿಸಿಕೊಂಡು, ಪರಿಶುದ್ಧ ಮನಸ್ಸಿನಿಂದ ನಿರಂತರ ಅಧ್ಯಯನ ಮಾಡಿ ವಿಶ್ವಜ್ಞಾನಿಯಾಗಿ ಜಗತ್ತಿಗೆ
ಬೆಳಕಾಗಬೇಕೆಂದರು. ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎನ್ನುತ್ತಾ, ವಿದ್ಯಾರ್ಥಿಗಳಲ್ಲಿ ಅಧ್ಯಯನಶೀಲತೆ,ಶಿಸ್ತು, ಪ್ರಾಮಾಣಿಕತೆ, ಪಾರದರ್ಶಕತೆ, ಸಮಯ ಪಾಲನೆ ಮತ್ತು ಪರಿಸರ ಸಂರಕ್ಷಣೆಯ ಜೊತೆಗೆ ಅವರಲ್ಲಿ ನಾಯಕತ್ವದ ಗುಣ ಬೆಳೆಸುತ್ತದೆ ಎಂದರು.
ಸೇಡಂ ಪುರಸಭೆಯ ಅಧಿಕಾರಿ ಪೂಜಾ ಬಂಕಲಗಿ ಮಾತನಾಡಿ ವಿದ್ಯಾರ್ಥಿಗಳು ಸಮಾಜ ಪರಿವರ್ತನೆ ಮಾಡುವವರು ಆಗಬೇಕು. ಕೇವಲ ನಮ್ಮ ಹಕ್ಕುಗಳ ಬಗ್ಗೆ ಮಾತಾಡದೆ ನಮ್ಮ ಕರ್ತವ್ಯದ ಬಗ್ಗೆಯೂ ಮಾತನಾಡುವವರಾಗಬೇಕು. ಬದುಕಿನ ಏರಿಳಿತದೊಂದಿಗೆ ನಮ್ಮ ಜೀವನದ ಶಿಲ್ಪಿ ನಾವೇ ಆಗಬೇಕು. ಆತ್ಮವಿಶ್ವಾಸವನ್ನು ಬಳಸಿಕೊಂಡು ಬದುಕನ್ನು ಕಟ್ಟಿಕೊಳ್ಳುವ ಸಾಮರ್ಥ್ಯ ನಾವು ಬೆಳೆಸಿಕೊಳ್ಳಬೇಕೆಂದರು.
ವಿದ್ಯಾರ್ಥಿಗಳು ವ್ಯಕ್ತಿಯಾಗಿ ಬೆಳೆಯದೆ ರಾಷ್ಟ್ರದ ಶಕ್ತಿಯಾಗಿ ಬೆಳೆಯಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಅನುರಾಧ ಪಾಟೀಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಸಮಿತಿಯ ಸದಸ್ಯರು, ಸಹಜ ಯೋಗಸ್ಥಿತಿ ಸಮಿತಿಯ ಸದಸ್ಯರಾದ ಶ್ರೀ ಬಸವರಾಜ್ ಪಾಟೀಲ್, ಪ್ರಾಚಾರ್ಯ ಗವಿ ಚನ್ನಬಸಪ್ಪ, ವೇದಿಕೆಗಳ ನಿರ್ದೇಶಕರಾದ ಭೀಮಶಂಕರ್ ಮಡಿವಾಳ, ಅನಿತಾ ರೆಡ್ಡಿ, ಶರಣಪ್ಪ ಎಲ್ಮಡಿ, ರಮೇಶ್ ದೊರೆ, ಸದಸ್ಯರಾದ ಕಲ್ಪನಾ ಬೋಳಶೆಟ್ಟಿ, ನಿತ್ಯ ಮಂಡಳಿ ನಿರ್ದೇಶಕಿ ಕುಮಾರಿ ಸಂಗೀತಾ ಮೈಲಾರಿ ಉಪಸ್ಥಿತರಿದ್ದರು.