ಕಾರ್ಗಿಲ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ವೀರ ಯೋಧ ವೃಷಬೇಂದ್ರಸ್ವಾಮಿಗೆ ಸನ್ಮಾನ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.೨೮:- ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ನಗರದ ರೋಟರಿ ಸಿಲ್ಕ್‌ಸಿಟಿ ವತಿಯಿಂದ ಕಾರ್ಗಿಲ್ ಪ್ರದೇಶದಲ್ಲಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೀರ ಯೋಧ ವೃಷಬೇಂದ್ರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಅವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವೀರ ಯೋಧ ವೃಷಬೇಂದ್ರಸ್ವಾಮಿ ಅವರನ್ನು ರೋಟರಿ ಸಿಲ್ಕ್‌ಸಿಟಿ ಅಧ್ಯಕ್ಷ ಮಾಣಿಕ್ ಚಂದ್ ಸಿರವಿ, ಅವರು ಶಾಲು ಹೊದಿಸಿ, ಫಲಾತಂಬಾಲು, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯ ಅರಕ್ಷಕ ನಿರೀಕ್ಷಕ ರಂಗಸ್ವಾಮಿ ಮಾತನಾಡಿ, ಎಲ್ಲಾ ಸೇವೆಗಳಿಗಿಂತ ದೇಶ ಸೇವೆ ಅತ್ಯಂತ ಪವಿತ್ರವಾದದ್ದು, ನಮ್ಮ ವೈಯಕ್ತಿಕ ಸಂಸಾರದ ಜಂಜಾಟದ ನಡುವೆ ತಂದೆ, ತಾಯಿ ಮಡದಿ ಮಕ್ಕಳನ್ನು ಬಿಟ್ಟು ಸಾವಿರಾರು ಮೈಲಿ ದೂರದ ಗಡಿಯನ್ನು ಕಾಯುವುದು ಅತ್ಯಂತ ಸವಾಲಿನ ಕೆಲಸ. ಅಲ್ಲಿನ ಹವಮಾನ ವೈಪರಿತ್ಯದಲ್ಲಿ ಆರೋಗ್ಯದ ಸಮತೋಲನವು ಕಾಯ್ದುಕೊಂಡು ಶತ್ರು ರಾಷ್ಟ್ರದವರು ದೇಶದ ಗಡಿಗೆ ನುಸುಳದಂತೆ ಕಟ್ಟೆಚ್ಚರ ವಹಿಸುವುದು ಅತ್ಯಂತ ಜವಾಬ್ದಾರಿ ಕೆಲಸವಾಗಿರುತ್ತದೆ. ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ನಮ್ಮ ವೀರ ಯೋಧರು ಎದುರಾಳಿ ಸೈನ್ಯವನ್ನು ಹಿಮ್ಮೆಟ್ಟಿ ಕಾರ್ಗಿಲ್ ಪ್ರದೇಶವನ್ನು ಮರು ವಶಕ್ಕೆ ಪಡೆದ ಪವಿತ್ರವಾದ ದಿನ ಜುಲೈ ೨೬ ಆಗಿದೆ. ಹೀಗಾಗಿ ಈ ದಿನದಂದು ರಾಷ್ಟ್ರಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುವ ಮೂಲಕ ನಮ್ಮ ದೇಶದ ಹೆಮ್ಮೆ, ಹಿರಿಮೆಯನ್ನು ಹೆಚ್ಚಿಸುತ್ತದೆ ಎಂದರು.
ನಿವೃತ್ತ ಯೋಧ ವೃಷಬೇಂದ್ರಸ್ವಾಮಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾರ್ಗಿಲ್ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಅನುಭವ ಅತ್ಯಂತ ರೋಚಕವಾಗಿತ್ತು. ಬಾಲ್ಯದಿಂದಲು ಸೇನೆ ಸೇರಬೇಕೆಂಬುದು ನಮ್ಮ ಹಂಬಲವಾಗಿತ್ತು. ಅದರಂತೆ ನಾನು ಮತ್ತು ನನ್ನ ಸಹೋದರ ಇಬ್ಬರು ಸಹ ಸೇನೆಗೆ ಆಯ್ಕೆಯಾದೆವು. ನನ್ನ ಸೇವೆ ಅವಧಿಯಲ್ಲಿ ಅತ್ಯಂತ ಎತ್ತರದ ಪ್ರದೇಶವಾದ ಕಾರ್ಗಿಲ್‌ನ ಜಿಯಾಜಿನ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ್ದು ಅವಿಸ್ಮರಣೀಯ ಗಳಿಗೆಯಾಗಿದೆ. ಕಾರ್ಗಿಲ್ ವಿಜಯದ ನಂತರ ಆ ಪ್ರದೇಶದಲ್ಲಿ ಒಂದು ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿದೆ. ಅಲ್ಲಿ ಪಾಕಿಸ್ತಾನ ಸೈನಿಕರು ಹಾಗೂ ನಮ್ಮ ಸೈನಿಕರ ನಡುವೆ ನಡೆದ ಕಾದಾಟದ ಕುರುಹುಗಳು ಇನ್ನು ಸಹ ಇದೆ. ಇದೊಂದು ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷರುಗಳಾದ ಪ್ರಶಾಂತ್ ಎ. ರಾವ್, ದೊಡ್ಡರಾಯಪೇಟೆ ಗಿರೀಶ್, ಡಿ.ಪಿ. ವಿಶ್ವಾಸ್, ಮರುಘೇಂದ್ರಸ್ವಾಮಿ, ಎಚ್.ಎಂ. ಅಜಯ್, ಸದಸ್ಯರಾದ ಅಶ್ರಿತ್ ಹಾಗು ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ವರ್ಗದವರು ಇದ್ದರು.