ನವೀಕರಣ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ: ವೇಣು ಆರೋಪ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.೨೮: ತಾಲೂಕಿನ ಹೇಮಾವತಿ ಜಲಾಶಯದ ಎಡದಂಡೆ ನಾಲೆಯ ೫೪ ನೇ ವಿತರಣಾ ನಾಲೆಯ ನವೀಕರಣ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮಂಡ್ಯ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ಆರೋಪಿಸಿದ್ದು ಸ್ಥಳದಲ್ಲಿದ್ದ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಚಂದ್ರೇಗೌಡ ರವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಹೋರಾಟದ ಎಚ್ಚರಿಕೆ ನೀಡಿದರು.
೫೪ ನೇ ವಿತರಣಾ ನಾಲೆಯ ನವೀಕರಣ ಕಾಮಗಾರಿಯನ್ನ ವೀಕ್ಷಿಸಿ ಮಾತನಾಡಿ ಈ ಭಾಗದ ರೈತರು ನಾಲೆಯಲ್ಲಿ ನೀರು ಹರಿದರೆ ಕುಂದೂರುನಿಂದ ಮಲ್ಲೇನಹಳ್ಳಿವರೆಗೆ ಅಂತರ್ಜಲ ಹೆಚ್ಚಾಗಿ ಎಲ್ಲಾ ಕೊಳವೆಬಾವಿಗಳ ನೀರು ಮರುಪೂರಣವಾಗುತ್ತವೆ.ಇದರಿಂದ ಈ ನಾಲೆಯ ವ್ಯಾಪ್ತಿಯ ಜಮೀನುಗಳಿಗೆ ನೀರು ಒದಗುತ್ತದೆ ಎಂಬ ದೂರ ದೃಷ್ಟಿಯಿಂದ ಸ್ಥಳೀಯ ರೈತರ ಹೋರಾಟದ ಫಲವಾಗಿ ಸುಮಾರು ೫೫ ಕೋಟಿ ವೆಚ್ಚದ ೫೪ ನೇ ವಿತರಣಾ ನಾಲೆಯ ನವೀಕರಣ ಕಾಮಗಾರಿಗೆ ಎರಡು ವರ್ಷದ ಹಿಂದೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಆಮೆಗತಿಯಲ್ಲಿ ಕಾಮಗಾರಿ ನಡೆದರೂ ಗುಣಮಟ್ಟ ಕಾಪಾಡದೆ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಇಲಾಖೆಗೆ ಸಂಬಂಧಪಟ್ಟ ಇಂಜಿನಿಯರಾಗಲಿ ಅಥವಾ ಇತರೆ ಯಾವುದೇ ಸಹಾಯಕ ಅಧಿಕಾರಿಗಳಾಗಲಿ ಸ್ಥಳದಲ್ಲಿದ್ದು ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳದೆ ಇರುವುದರಿಂದ ಗುತ್ತಿಗೆದಾರ ಹಣದ ಲೂಟಿಗಾಗಿ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ.ಇದಕ್ಕೆ ಉದಾಹರಣೆ ಕಾಮಗಾರಿ ನಡೆದ ಕೆಲವು ದಿನಗಳಲ್ಲೇ ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿದೆ ಎಂದು ಆರೋಪಿಸಿದರು.
ಕಾಮಗಾರಿ ಹೀಗೆ ಸಾಗಿದರೆ ಒಂದು ವರ್ಷವೂ ಬಾಳಿಕೆ ಬರುವ ಲಕ್ಷಣ ಕಾಣುತ್ತಿಲ್ಲ ಸರ್ಕಾರ ರೈತರಿಗೆ ಸದ್ಬಳಿಕೆ ಆಗಬೇಕೆಂಬ ದೂರ ದೃಷ್ಟಿಯಿಂದ ಬಹುಕೋಟಿ ಅನುದಾನ ನೀಡಲಾಗಿದೆ ಹಾಗಾಗಿ ಶಾಸಕ ಹೆಚ್.ಟಿ.ಮಂಜು ರವರು ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಡಿ.ಎಸ್.ವೇಣು ಆಗ್ರಹಿಸಿದರು.
ಕಳಪೆ ಕಾಮಗಾರಿ ಒಪ್ಪಿಕೊಂಡ ಎಇಇ:- ಸ್ಥಳಕ್ಕಾಗಮಿಸಿದ ನೀರಾವರಿ ಇಲಾಖೆಯ ಎಇಇ ಚಂದ್ರೇಗೌಡರನ್ನ ಪ್ರಶ್ನಿಸಿದ ಡಿ.ಎಸ್.ವೇಣು ಕಾಮಗಾರಿಯ ಸ್ಥಳದಲ್ಲಿದ್ದು ಗುಣಮಟ್ಟ ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ನಿಮ್ಮದು ಆದರೆ ಗುತ್ತಿಗೆದಾರ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಳಪೆ ಕಾಮಗಾರಿ ನಡೆಸುತ್ತಿದ್ದರು ಬೇಜವಾಬ್ದಾರಿ ತೋರಿಸುತ್ತಿದ್ದೀರಿ ಗುತ್ತಿಗೆದಾರರ ಜೋಬು ತುಂಬಲು ಸಹಕರಿಸಿ ಕಣ್ಮುಚ್ಚಿ ಕುಳಿತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಪ್ರಸ್ತುತ ಕಾಮಗಾರಿ ನಡೆಯುತ್ತಿದ್ದ ಸ್ಥಳವನ್ನು ಪರಿಶೀಲಿಸಿ ಕಾಮಗಾರಿಯಲ್ಲಿ ಕಳಪೆ ಕಂಡುಬಂದಿದೆ ಕೂಡಲೇ ತೆರವುಗೊಳಿಸಿ ಗುಣಮಟ್ಟದ ಕಾಮಗಾರಿಗೆ ಹೆಚ್ಚು ಹೊತ್ತು ನೀಡುತ್ತೇವೆ ಎಂದು ಚಂದ್ರೇಗೌಡ ತಿಳಿಸಿದರು.ನಂತರ ಮಾತನಾಡಿದ ವೇಣು ಶೀಘ್ರದಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ನಿಮ್ಮ ಕಛೇರಿ ಮುಂದೆ ಉಗ್ರ ಹೋರಾಟ ಮಾಡುವ ಮುಖಾಂತರ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಜಯಣ್ಣ, ರೈತ ಮುಖಂಡ ಕರೋಟಿ ತಮ್ಮಯ್ಯ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಿಪುರ ಶಿವಪ್ರಸಾದ್, ಕರವೇ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಉಪಾಧ್ಯಕ್ಷ ಹೊಸಹೊಳಲು ಗೋಪಿ,ಕಸಬಾ ಅಧ್ಯಕ್ಷ ಕೊಮ್ಮೇನಹಳ್ಳಿ ಅನಿಲ್,ಯುವಕ ಮುಖಂಡರಾದ ಗುಂಡಣ್ಣ,ಕುಂದನಹಳ್ಳಿ ಶಿವಕುಮಾರ್, ಕರೋಟಿ ಅಜಯ್ ಸೇರಿದಂತೆ, ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.