ಸರ್ಕಾರಿ ಕಾನೂನು ಕಾಲೇಜಿನಲ್ಲಿ ಆರೋಗ್ಯ ಶಿಬಿರ
ಕೋಲಾರ,ಜು.೨೮- ತಾಲ್ಲೂಕಿನ ಅರಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಕಾನೂನು ಕಾಲೇಜು ಅಲುಮಿನಿ ಸಂಘ, ಕೋಲಾರ ಗ್ಲೋಬಲ್ ಎ ಫೌಂಡೇಶನ್ ಮತ್ತು ಕೋಲಾರ ಲಯನ್ಸ್ ರಕ್ತನಿಧಿ ಕೇಂದ್ರ, ರೆಡ್ ಕ್ರಾಸ್ ಎನ್.ಎಸ್.ಎಸ್ ಸಹಯೋಗದೊಂದಿಗೆ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಹಾಗೂ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.
ಸರ್ಕಾರಿ ಕಾನೂನು ಕಾಲೇಜಿನ ಅಲ್ಯೊಮಿನಿ ಸಂಘದ ಆಧ್ಯಕ್ಷರು ಹಾಗೂ ಹಿರಿಯ ವಕೀಲ ವಿ.ಕೆ ಪ್ರಶಾಂತ್ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಪ್ರಾಣ ಉಳಿಸುವುದಲ್ಲದೇ ಮಾನಸಿಕ ಒತ್ತಡ ನಿವಾರಣೆ ಹಾಗೂ ಹೃದಯ ಸಂಬಂಧಿಸಿದ ಕಾಯಿಲೆಗಳಿಂದ ಮುಕ್ತಿ ಹೊಂದಬಹುದು ಎಂದು ತಿಳಿಸಿದರು.
ಗರ್ಭಿಣಿ ಮಹಿಳೆ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಹಾಗೂ ರಸ್ತೆ ಅಪಘಾತದ ಸಮಯದಲ್ಲಿ ರಕ್ತ ಅತೀ ಅವಶ್ಯಕವಾಗಿ ಬೇಕಾಗುವುದು. ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು. ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದಾಗಿದೆ. ಹಾಗಾಗಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಆಧ್ಯಕ್ಷತೆ ವಹಿಸಿದ ಕಾನೂನು ಕಾಲೇಜಿನ ಪ್ರಾಂಶುಪಾಲ ಅಂಬೇಡ್ಕರ್ ಅವರು ಮಾತನಾಡಿ ಸಾಮಾಜಿಕ ಚಿಂತನೆಯುಳ್ಳ ಯುವ ಜನತೆ ಮಾತ್ರ ನಿರಂತರ ಜೀವದಾನಕ್ಕೆ ಮುಂದಾಗಿ ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಲು ಸಾಧ್ಯವಾಗುತ್ತದೆ.
ರಕ್ತದಾನ ಮಾಡಿದ ವ್ಯಕ್ತಿಯ ದೇಹದಲ್ಲಿ ೪೮ ಗಂಟೆಗಳೊಳಗೆ ಅಷ್ಟೇ ಪ್ರಮಾಣದ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದು. ಜ್ಞಾಪಕಶಕ್ತಿಯೂ ಹೆಚ್ಚುತ್ತದೆ, ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡ ಹಾಗೂ ಮಧುಮೇಹ ತಡೆಯಲು ಸಹಕಾರಿಯಾಗುತ್ತದೆ. ಹೀಗಾಗಿ ಯಾವುದೇ ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು.
ಇನ್ನೂ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ನೂರಾರು ಜನರಿಗೆ ತಜ್ಞರಿಂದ ತಪಾಸಣೆ ಮಾಡಲಾಯಿತು. ಸ್ಥಳೀಯ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಕಾಲೇಜಿನ ವಿಧ್ಯಾರ್ಥಿಗಳು ಕಣ್ಣಿನ ಪೊರೆ ತಪಾಸಣೆ ಮಾಡಿಕೊಂಡರು.
ಈ ಸಂಧರ್ಬದಲ್ಲಿ ಕಾಲೇಜ್ ಅಲ್ಯೊಮಿನಿ ಸಂಘದ ಉಪಾಧ್ಯಕ್ಷ ಜಾಕೀರ್ ಹುಸೇನ್, ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಖಜಾಂಚಿ ಚೌಡೇಗೌಡ, ಜಂಟಿ ಕಾರ್ಯದರ್ಶಿ ಗೋಪಾಲರೆಡ್ಡಿ, ವಕೀಲರಾದ ಬಿ.ವಿ ವೆಂಕಟೇಶ್, ಎನ್.ಗಣೇಶ್, ರಾಜೇಶ್, ಶಿವಕುಮಾರ್, ಸೋಮಪ್ಪ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.