ಶಿಸ್ತುಬದ್ದ ಕರ್ತವ್ಯನಿಷ್ಠೆಗೆ ರಾಮಚಂದ್ರಪ್ಪ ಆದರ್ಶ- ಅಕ್ರಂಪಾಷಾ
ಕೋಲಾರ,ಜು,೨೮- ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಹಜಪ್ರಕ್ರಿಯೆ ಆದರೆ ಕರ್ತವ್ಯದಲ್ಲಿದ್ದಾಗ ಸ್ವಯಂಪ್ರೇರಿತರಾಗಿ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಕೆಲಸ ಮಾಡುವ ಶಿಸ್ತುಬದ್ದ ಕರ್ತವ್ಯ ನಿಷ್ಟೆ ಹಾಗೂ ಮನಸ್ಥಿತಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ಆದರ್ಶವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಅಭಿನಂದಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿದ್ದು, ಜು.೩೧ ರಂದು ನಿವೃತ್ತರಾಗಲಿರುವ ರಾಮಚಂದ್ರಪ್ಪ ಮತ್ತು ಅವರ ಧರ್ಮಪತ್ನಿ ರೇಣುಕಾದೇವಿ ಅವರಿಗೆ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ, ಬೋಧಕೇತರ ಸಿಬ್ಬಂದಿ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಯಾವುದೇ ಕೆಲಸ ವಹಿಸಿಕೊಂಡರೂ ಅತಿ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದ ರಾಮಚಂದ್ರಪ್ಪ ಸುಮರು ೧೨ ವರ್ಷ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ ಮಾಸ್ತಿ ಶಾಲೆ,ಕಾಲೇಜಿನ ಅಭಿವೃದ್ದಿಗೆ ನೀಡಿರುವ ಕೊಡುಗೆ ಮೆಚ್ಚುವಂತದ್ದು,ಚುನಾವಣಾ ಕಾರ್ಯದಲ್ಲೂ ಅವರು ನಿರ್ವಹಿಸಿದ ಪಾತ್ರ ಶ್ಲಾಘನೀಯ ಎಂದರು.
ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪ್ರಭಾವ ಬೀರಿದ ರಾಜ್ಯಶಾಸ್ತ್ರ ಉಪನ್ಯಾಸಕ ನಾಗರಾಜ್‌ರನ್ನು ಸ್ಮರಿಸಿದ ಡಿಸಿಯವರು, ಭವಿಷ್ಯದ ದಾರಿ ತೋರಿ ಮಕ್ಕಳ ಮೇಲೆ ಪ್ರಭಾವ ಬೀರುವ ಅತ್ಯಂತ ಪವಿತ್ರವಾದ ಕಾರ್ಯ ಉಪನ್ಯಾಸಕರದ್ದು ಎಂದು ಅಭಿನಂದಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಗುರಿ ಸಾಧನೆಗೆ ಗುರುವೇ ಕಾರಣ, ನನ್ನ ಮೇಲೆ ಕನ್ನಡ ಶಿಕ್ಷಕರ ಪ್ರಭಾವವಿತ್ತು. ನಾನು ಯುಪಿಎಸ್ಸಿಯಲ್ಲಿ ಕನ್ನಡ ಸಾಹಿತ್ಯವನ್ನೇ ಪಡೆದು ಉತ್ತೀರ್ಣನಾದೆ ಎಂದು ತಿಳಿಸಿ, ಶಿಕ್ಷಕ ವೃತ್ತಿ ನೋಬಲ್ ಪ್ರೊಬೆಷನ್ ಆಗಿದ್ದು, ರಾಮಚಂದ್ರಪ್ಪ ಅವರು ತಮ್ಮ ೩೧ ವರ್ಷಗಳ ಸೇವೆಯಲ್ಲಿ ಸಾವಿರಾರು ಮಂದಿಗೆ ಭವಿಷ್ಯ ರೂಪಿಸಿದ್ದಾರೆ ಎಂದು ಅಭಿನಂದಿಸಿದರು.
ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪದ್ಮಬಸವಂತಪ್ಪ ಮಾತನಾಡಿ, ಮಾಸ್ತಿ ಶಾಲೆ ಜಮೀನು ಉಳಿಸುವಲ್ಲಿ ರಾಮಚಂದ್ರಪ್ಪ ಹೋರಾಟ ಸ್ಮರಣೀಯವಾಗಿದೆ, ಉಪನಿರ್ದೇಶಕರಾಗಿ ಜಿಲ್ಲೆಯ ಪಿಯುಸಿ ಫಲಿತಾಂಶ ೨೨ನೇ ಸ್ಥಾನದಿಂದ ೧೦ಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅಭಿನಂದಿಸಿ, ಈ ಬಾರಿ ಉಪನ್ಯಾಸಕರು ಮತ್ತಷ್ಟು ಉತ್ತಮಪಡಿಸಲು ಶ್ರಮಿಸಿ ಎಂದು ಕೋರಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನೀಲ್‌ಎಸ್‌ಹೊಸಮನಿ ಮಾತನಾಡಿ,ಕಾನೂನು ಅರಿವು,ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸುವುದರಲ್ಲಿ ರಾಮಚಂದ್ರಪ್ಪ ಸಹಕಾರ ನೀಡಿದ್ದಾರೆ ಎಂದು ಧನ್ಯವಾದ ಸಲ್ಲಿಸಿ, ನೀಟ್,ಜೆಇಇಯಿಂದ ಪಿಯುಸಿ ಮಹತ್ವ ಹೆಚ್ಚಿದೆ, ಉಪನ್ಯಾಸಕರು ಮತ್ತಷ್ಟು ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಿಯು ಉಪನಿರ್ದೇಶಕ ರಾಮಚಂದ್ರಪ್ಪ ತಮ್ಮ ಜೀವನದಲ್ಲಿ ಅಂಬೇಡ್ಕರ್ ಹಾಗೂ ನೇರನೇಮಖಾತಿ ಮೂಲಕ ಹುದ್ದೆ ಸಿಗಲು ಕಾರಣರಾದ ಬಂಗಾರಪ್ಪ ಅವರನ್ನು ಸ್ಮರಿಸಿ, ತಮ್ಮ ಪತ್ನಿ ನೀಡಿದ ಸಹಕಾರ, ನನ್ನನ್ನು ಕೂಲಿ ಮಾಡಿ ಓದಿಸಿದ ಚಿಕ್ಕಮ್ಮ, ಅಕ್ಕ ಎಲ್ಲರಿಗೂ ಧನ್ಯವಾದ ತಿಳಿಸಿ ಈ ಎಲ್ಲರ ಸಹಕಾರದಿಂದ ಇಷ್ಟೊಂದು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು ಎಂದರು. ೨೦೨೪ ರ ದ್ವಿತೀಯ ಪಿಯು ಫಲಿತಾಂಶದಲ್ಲಿ ೧೩ ಸಾವಿರ ಮಕ್ಕಳು ಉತ್ತೀರ್ಣರಾಗಿದ್ದು, ಅದರಲ್ಲಿ ೮ ಸಾವಿರ ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದು, ಈ ಗುಣಾತ್ಮಕ ಸಾಧನೆಗೆ ಡಿಸಿ,ಜಿಪಂ ಸಿಇಒ ಮಾರ್ಗದರ್ಶನ, ಜಿಲ್ಲೆಯ ಪ್ರಾಂಶುಪಾಲರು, ಉಪನ್ಯಾಸಕರ ಕೊಡುಗೆ ಕಾರಣ ಎಂದು ಧನ್ಯವಾದ ಸಲ್ಲಿಸಿದರು.
ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದ ರಾಮಚಂದ್ರಪ್ಪ ಅವರ ೩೧ ವರ್ಷಗಳ ಸೇವೆಯಲ್ಲಿ ೧೯೯೩ರಲ್ಲಿ ಕೊಳ್ಳೆಗಾಲದಲ್ಲಿ ಉಪನ್ಯಾಸಕರಾಗಿ ೧೬ ವರ್ಷ, ೨೦೦೯ ರಲ್ಲಿ ಪ್ರಾಂಶುಪಾಲರಾಗಿ ಬಂಟ್ವಾಳದಲ್ಲಿ ಸೇವೆ, ೨೦೧೦ ರಿಂದ ೧೨ ವರ್ಷ ಮಾಸ್ತಿಯಲ್ಲಿ ಸೇವೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಭಾಗಾಧಿಕಾರಿ ಡಾ.ಚೈತ್ರಾ, ತಹಸೀಲ್ದಾರದ ಹರ್ಷವರ್ಧನ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ನಾರಾಯಣಪ್ಪ,ರಾಮಚಂದ್ರಪ್ಪ ಅವರ ಕುಟುಂಬದವರಾದ ಚಿಕ್ಕಮ್ಮ ಗೌರಮ್ಮ, ಅಕ್ಕ ಮುನಿವೆಂಕಟಮ್ಮ ಮಕ್ಕಳಾದ ಸೂರ್ಯ,ಸ್ನೇಹ, ಅಳಿಯ ಮತ್ತಿತರರಿದ್ದರು. ಉಪನ್ಯಾಸಕರಾದ ಪೂರ್ಣಿಮಾ ಪ್ರಾರ್ಥಿಸಿ, ಸುನೀತಾ,ವೀಣಾ ನಿರೂಪಿಸಿ, ಚಂದ್ರಪ್ಪ ಸ್ವಾಗತಿಸಿದರು.