ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ
ಬಾಗೇಪಲ್ಲಿ,ಜು.೨೮- ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ತಿಳಿಸಿದರು.
ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಹೋಬಳಿ ಕೇಂದ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ವಿವೇಕ ಯೋಜನೆಯಡಿಯಲ್ಲಿ ಅಂದಾಜು ೭೫.೧೫ ಲಕ್ಷ ರೂ ಗಳ ವೆಚ್ಚದ ೩ ಕೊಠಡಿ ಮತ್ತು ರಾಂಪ್ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು. ಪೋಷಕರು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಯ ಬಗ್ಗೆ ತಿಳಿಹೇಳಬೇಕಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಮಕ್ಕಳನ್ನು ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಪ್ರಜೆಗಳನ್ನಾಗಿ ರೂಪಗೊಳಿಸಬೇಕು. ವಿದ್ಯಾರ್ಥಿಗಳ ಮೇಲೆ ಶಿಕ್ಷಕರಿಗೆ ಎಷ್ಟು ಜವಾಬ್ದಾರಿ ಇರುತ್ತದೆಯೋ ಅಷ್ಟೇ ಜವಾಬ್ದಾರಿ ಪೋಷಕರಿಗೂ ಇದ್ದರೆ ಮಾತ್ರ ಮಕ್ಕಳು ಉತ್ತಮ ವ್ಯಕ್ತಿಗಳಾಗಲು ಸಾಧ್ಯ. ಕ್ಷೇತ್ರದ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಿಸಿಕೊಡಬೇಕು, ಕಾಮಗಾರಿಯಲ್ಲಿ ಯಾವುದೇ ಲೋಪವಾಗಬಾರದು, ಗುಣಮಟ್ಟದಿಂದ ಕೂಡಿರಬೇಕು. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಟಿ. ರಾಮಧಾಸ್, ಮಧುಸೂದನ್ ರೆಡ್ಡಿ, ಗುತ್ತಿಗೆದಾರರಾದ ಪ್ರಶಾಂತ್ ರೆಡ್ಡಿ, ಕೆಡಿಪಿ ಸದಸ್ಯ ರಾಮಕೃಷ್ಣ (ಹೆಗ್ಗಡೆ), ಮುಖಂಡರಾದ ಗುಂಟಿಗಾನಪಲ್ಲಿ ಪಿ. ಮಂಜುನಾಥರೆಡ್ಡಿ, ಗೋಪಾಲ್, ಎಸ್. ಎನ್. ರಾಮಿರೆಡ್ಡಿ, ಪಿ. ಎಲ್. ಡಿ. ಬ್ಯಾಂಕ್ ನಿರ್ದೆಶಕರಾದ ಜಿ. ಗಂಗುಲಪ್ಪ, ಕೆ. ವೆಂಕಟಸುಬ್ಬಾರೆಡ್ಡಿ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶ್ರೀನಿವಾಸ, ಮುನ್ನಾಸಾಬ್, ಯುವ ಮುಖಂಡ ಶ್ರೀನಿವಾಸ ಕಾಲೇಜಿನ ಪ್ರಾಂಶುಪಾಲರಾದ ಇಸ್ಮಾಯಿಲ್, ಪ್ರಾದ್ಯಾಪಕರಾದ ಗಿರಿಬಾಬುರೆಡ್ಡಿ, ನಾರಾಯಣ, ನಾರಾಯಣಸ್ವಾಮಿ, ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.