ಉ.ಕ. ಭಾಗದ ಉದ್ದಾರಕ್ಕಾಗಿ ಶ್ರಮಿಸಿದ ಬಂಥನಾಳ ಶ್ರೀಗಳು: ಗುರು ಸಂಗನಬಸವ ಶ್ರೀಗಳ ಪ್ರಶಂಸೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೮:ಬರ ಪೀಡಿತ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಕಂಗೆಟ್ಟು ಹೋಗಿದ್ದ ವಿಜಯಪುರ ಜಿಲ್ಲೆಗೆ ಹುಟ್ಟಿ ಬಂದು ಶೈಕ್ಷಣಿಕ ಕ್ರಾಂತಿ ಮಾಡಿ ಉತ್ತರ ಕರ್ನಾಟಕ ಭಾಗದ ಉದ್ದಾರಕ್ಕಾಗಿ ಶ್ರಮಿಸಿದ ಬಂಥನಾಳದ ಶ್ರೀ ಸಂಗನಬಸವ ಶಿವಯೋಗಿಗಳನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಯರನಾಳ ವಿರಕ್ತಮಠದ ಶ್ರೀ ಗುರುಸಂಗನಬಸವ ಶಿವಯೋಗಿಗಳು ತಿಳಿಸಿದರು.
ನಗರದ ಹೊರವಲಯದ ಶ್ರೀ ವೇದ ಅಕಾಡೆಮಿಯಲ್ಲಿ ಜರುಗಿದ ಬಂಥನಾಳದ ಶ್ರೀ ಸಂಗನಬಸವ ಶಿವಯೊಗಿಗಳ ೧೨೪ ನೇ ಜಯಂತಿ ಹಾಗೂ ೩ ನೇ ಸಂಸ್ಥಾಪಕರ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ, ಸಂಗನಬಸವ ಶಿವಯೋಗಿಗಳು ಅಕ್ಷರ ದಾಸೋಹಕ್ಕಾಗಿ ಉತ್ತರ ಕರ್ನಾಟಕದಾದ್ಯಂತ ಸಂಚರಿಸಿ ಸುಮಾರು ೧೨೦೦ ಎಕರೆಗಳಷ್ಟು ಭೂಮಿಯನ್ನು ಶಿಕ್ಷಣ ಸಂಸ್ಥೆಗಳಿಗೆ ದಾನವಾಗಿ ಪಡೆದು ಸಮಾಜದ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಸಿಗುವಂತೆ ಮಾಡಿದ ಮಹಿಮರನ್ನು ಅನುದಿನ ಸ್ಮರಿಸಬೇಕೆಂದು ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಡಾ. ಶಿವಾನಂದ ಕೆಲೂರ ಮಾತನಾಡಿ, ವಿಧ್ಯಾರ್ಥಿಗಳೆ ಜೀವಂತ ದೇವರು. ಶಾಲೆಗಳೆ ದೇವಾಲಯ ಎಂಬ ಮಾತನ್ನು ಸಂಗನಬಸವ ಶಿವಯೊಗಿಗಳು ತಮ್ಮ ಜೀವನದುದ್ದಕ್ಕೂ ಅಕ್ಷರಶಃ ಪಾಲಿಸಿಕೊಂಡು ನಡೆದವರು. ಹೀಗಾಗಿ ಇಂದಿನ ಸಮಾಜದಲ್ಲಿ ಪ್ರತಿಯೊಬ್ಬ ಮಗು ಮಾನವೀಯತೆ ಮೌಲ್ಯವನ್ನು ಅಳವಡಿಸಿಕೊಂಡು ನಡೆದಾಗ ಹಾಗೂ ಸಂಗನಬಸವ ಶಿವಯೊಗಿಗಳ ದೇವರಲ್ಲಿ ದೈವ ನಂಬಿಕೆ ಮತ್ತು ವೈಜ್ಞಾನಿಕ ಸಮ್ಮಿತಗೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಪೋಲಿಸ ಅಧಿಕಾರಿ ಬಿ.ಆರ್. ಚೌಕಿಮಠ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಬ್ಯಾಡ್ಜ್ ವಿತರಿಸಿ ಮಾತನಾಡಿ, ಸಂಗನಬಸವ ಶರಣರ ಆದರ್ಶಗಳನ್ನು ಜೀವನುದುದ್ದಕ್ಕೂ ಪಾಲಿಸಿದರೆ ಯಶಸ್ಸು ಕಟಿಟ್ಟ ಬುತ್ತಿ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಮಾನವೀಯ ಮೌಲ್ಯಗಳನ್ನು ಮೈಗೂಢಿಸಿಕೊಂಡು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೋರ್ವ ಅತಿಥಿ, ಉದ್ಯಮಿ ದಾದು ತಿವಾರಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಶ್ರದ್ಧೆ ಅತ್ಯಂತ ಮುಖ್ಯವಾದವು. ಸಂಗನಬಸವ ಶರಣರಂತೆ ಮೌಲ್ಯಗಳನ್ನು ಮೈಗೂಢಿಸಿಕೊಂಡು ಸನ್ಮಾರ್ಗದಲ್ಲಿ. ನಡೆಯಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಆಯೋಜಿಸಲಾದ ‘ಪ್ರತಿಜ್ಞಾ ವಿಧಿ’ ಭೊದನೆಯಲ್ಲಿ ಶಾಲೆಯ ನಾಯಕ ದೀಪಕ ಕಟ್ಟಿಮನಿ ಮತ್ತು ಭಾವನಾ ಅಮರಶೆಟ್ಟಿ, ಪ್ರವೀಣ ಲಾತೂರ, ಪ್ರಜ್ವಲ್ ಪಾಟೀಲ, ಮನಸ್ವಿ ತಳವಾರ, ಸಮೃದ್ಧಿ ಮುಕ್ಕೆ, ಅನುಷಾ ಕಬಾಡೆ ಮತ್ತು ಜೊತೆ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವೇದ ಹೌಸಿನ ನಾಯಕರಿಗೆ ಬ್ಯಾಡ್ಜ ಮತ್ತು ಶ್ಯಾಶ್ ನೀಡಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ.ಆರ್, ನಂದಯ್ಯಗೊಳ, ಸಂಸ್ಥೆಯ ಉಪಾಧ್ಯಕ್ಷ ದಯಾನಂದ ಕೆಲೂರ, ಕಾರ್ಯದರ್ಶಿ ಎನ್.ಜಿ. ಯರನಾಳ, ಪ್ರಗತಿಪರ ರೈತ ಗಿರಿಮಲ್ಲಯ್ಯ ಮಠಪತಿ, ಪ್ರಾಚಾರ್ಯ ಸುನೀಲ ಬಿ.ಎಮ್, ಮುಖ್ಯಗುರು ಮಾತೆ ರಶ್ಮಿ ಕವಟಗಿಮಠ ಉಪಸ್ಥಿತರಿದ್ದರು.
ಕುಮಾರಿ ಶ್ರೇಯಾ ಸ್ವಾಗತಿಸಿದರು. ಶಿಕ್ಷಕಿ ಮಧು ಕಲ್ಮಠ ನಿರೂಪಿಸಿದರು.